ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳಗೇರಿಯಲ್ಲಿ ಕೊಳೆಯುತ್ತಿರುವ ಬದುಕು

ಮರೀಚಿಕೆಯಾದ ಮೂಲಸೌಕರ್ಯಗಳು : ಅನೈರ್ಮಲ್ಯದಿಂದ ಆರೋಗಕ್ಕೆ ಕುತ್ತು
Last Updated 18 ಆಗಸ್ಟ್ 2019, 19:49 IST
ಅಕ್ಷರ ಗಾತ್ರ

ತುಮಕೂರು: ಹಮಾಲಿ ಕೆಲಸ ಮಾಡುವ ಅರಸನ್–ಅಂಜಲಿ ದಂಪತಿಗೆ ಆರು ಮಕ್ಕಳು. ಅವರಲ್ಲಿ ನಾಲ್ಕು ಗಂಡು. ಮೂವರು ಸೊಸೆಯಂದಿರು. ಐವರು ಮೊಮ್ಮಕ್ಕಳು. ಮಾರಿಯಮ್ಮ ಕೊಳಗೇರಿಯಲ್ಲಿ ಈ ಕುಟುಂಬದ ವಾಸ. ಈ ‘ಅರಸ’ನ್‌ ಕುಟುಂಬದ ‘ಅರಮನೆ’ಯ ವಿಸ್ತೀರ್ಣ 10X10 ಮಾತ್ರ!

ಈ ಮನೆಯಿಂದ ನಾಲ್ಕು ಹೆಜ್ಜೆ ಮುಂದೆ ಹೋದರೆ, ಪಾವಡೆ–ಅಂಗಮ್ಮ ದಂಪತಿಯ ಸೂರು ಸಿಗುತ್ತದೆ. ಅದು ‘ಅರಮನೆ’ಗಿಂತಲು ಕಿರಿದಾದ ಗೂಡು. ಅದರಲ್ಲಿ ಈ ದಂಪತಿ ಐದು ಮಕ್ಕಳೊಂದಿಗೆ ಜೀವನ ದೂಡುತ್ತಿದ್ದಾರೆ.

ಇಸ್ಮಾಯಿಲ್‌ ನಗರದ ಹಂದಿ ಜೋಗಿ ಶಾಖೆಯಲ್ಲಿ ಬೆಳೆದಿರುವ ಪೊದೆಯ ನಡುವಿನ ಡೇರೆ, ಶೆಡ್‌ಗಳಲ್ಲಿ ನಾಗಮ್ಮ ಏಳು ದಶಕಗಳನ್ನು ಕಳೆದಿದ್ದಾರೆ. ಅಲ್ಲಿಯೇ ಅವರಿಗೆ ಏಳು ಮಕ್ಕಳಾದವು. ಅವರಿಂದ ಹುಟ್ಟಿದ ಮೊಮ್ಮಕ್ಕಳು ಸಹ ಅಲ್ಲಿನ ಹಂದಿಗೂಡುಗಳ ನಡುವೆ ಬಾಲ್ಯ ಕಳೆಯುತ್ತಿದ್ದಾರೆ.

ನಗರದ ಕೊಳಗೇರಿಗಳಲ್ಲಿ ಕಾಲಿಟ್ಟರೆ ದಯನೀಯ ಸ್ಥಿತಿಯಲ್ಲಿ ಬದುಕುತ್ತಿರುವ ಇಂತಹ ಸಾವಿರಾರು ಜನರ ನೂರಾರು ಕಥನಗಳ ದರ್ಶನವಾಗುತ್ತದೆ.

ಗಾಳಿ, ಬೆಳಕೇ ಸುಲಭವಾಗಿ ಪ್ರವೇಶ ಮಾಡದ, ಸಮರ್ಪಕ ನೀರು ಪೂರೈಕೆ, ವಿದ್ಯುತ್‌ ಸಂಪರ್ಕದ ವ್ಯವಸ್ಥೆ ಇಲ್ಲದ, ನೈರ್ಮಲ್ಯ ಕಾಣೆಯಾಗಿರುವ ಈ ಪ್ರದೇಶದಲ್ಲಿ ಜನರ ವಾಸಸ್ಥಾನಗಳಿವೆ. ಇಲ್ಲಿನ ಪುಟ್ಟ ಸೂರುಗಳಲ್ಲಿ ಕಾಲು ಚಾಚಿ ಮಲಗಿದರೆ, ಅವು ಕುಟುಂಬದ ಮತ್ತೊಬ್ಬ ಸದಸ್ಯರಿಗೆ ತಾಗುತ್ತವೆ. ಎದ್ದು ನಿಂತರೆ ಸೂರಿನ ಸೀಟು ತಲೆಗೆ ಬಡಿಯುತ್ತದೆ. ಇಂತಿಷ್ಟರಲ್ಲೇ ಒಲೆ ಹೂಡಿ ಅಡುಗೆ ಮಾಡಿಕೊಂಡು, ಬಟ್ಟೆ–ಬರೆ, ಗೃಹೋಪಯೋಗಿ ಸಾಮಗ್ರಿಗಳನ್ನು ಹೊಂದಿಸಿಕೊಂಡು ‘ಒಳ್ಳೆಯ ದಿನಗಳು’ ಬರುತ್ತವೆ ಎಂಬ ಆಶಾಭಾವನೆಯಿಂದ ಜನರು ದಿನಗಳನ್ನು ದೂಡುತ್ತಿದ್ದಾರೆ.

ಪಾಲಿಕೆಯ ಕೊಳವೆಬಾವಿಗಳಿಂದ ನೀರು ಹರಿದಾಗ, ಟ್ಯಾಂಕರ್‌ಗಳು ಬಂದಾಗ ಮುಗಿಬಿದ್ದು ನೀರು ತುಂಬಿಕೊಳ್ಳುತ್ತಾರೆ. ಅದನ್ನೇ ವಾರಪೂರ್ತಿ ಬಳಸುತ್ತಾರೆ. ‘ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಎರಡು ದಿನಗಳಿಗೆ ಒಮ್ಮೆ ಒಂದು ಕ್ಯಾನ್‌ ನೀರು ಕೊಂಡು ತರುತ್ತೇವೆ. ಪ್ರತಿ ಕ್ಯಾನ್‌ಗೆ ₹ 25 ಖರ್ಚು ಮಾಡುತ್ತೇವೆ’ ಎಂದು ಸಮಸ್ಯೆ ತಿಳಿಸಿದರು ಮಾರಿಯಮ್ಮ ಕೊಳಗೇರಿಯ ಮಕ್ಕೊಡಿಯಮ್ಮ.

ಇರುವ ನಾಲ್ಕು ನಲ್ಲಿಗಳಲ್ಲೂ ಸರಿಯಾಗಿ ನೀರು ಬರಲ್ಲ. ವಾರಕ್ಕೊಮ್ಮೆ ಸ್ನಾನ ಮಾಡುವ, ತಿಂಗಳಿಗೊಮ್ಮೆ ಬಟ್ಟೆ ಒಗೆಯುವ ಸ್ಥಿತಿ ಬಂದಿದೆ ಎಂದು ಬನಶಂಕರಿ 2ನೇ ಹಂತದ ಹಂದಿ ಜೋಗಿ ಶಾಖೆಯ ಚಿಕ್ಕಗಂಗಮ್ಮ ತಿಳಿಸಿದರು.

ಈ ಶಾಖೆಯ ಜನರು ಪ್ರತಿನಿತ್ಯ ಅರ್ಧ ಕಿ.ಮೀ. ನಡೆದು ಹೋಗಿ ಇಸ್ಮಾಯಿಲ್‌ನಗರದಿಂದಕುಡಿಯುವ ನೀರನ್ನು ತರುತ್ತಾರೆ. ಪ್ರದೇಶದಲ್ಲಿ ವಿದ್ಯುತ್‌ ಸಂಪರ್ಕ ಇಲ್ಲ. ಸೋಲಾರ್‌ ದೀಪಗಳು, ಮೇಣದ ಬತ್ತಿಯ ಬೆಳಕೇ ಮಕ್ಕಳ ಅಕ್ಷರಾಭ್ಯಾಸಕ್ಕೆ ನೆರವಾಗಿವೆ.

ಬೇಸಿಗೆಯಲ್ಲಿ ನೀರಿನ ಸಮಸ್ಯೆ ಭಾದಿಸಿದರೆ, ಮಳೆಗಾಲದಲ್ಲಿ ಅನೈರ್ಮಲ್ಯದ ಸಮಸ್ಯೆ ಇಲ್ಲಿ ಉಲ್ಬಣಿಸುತ್ತದೆ. ಹಂದಿ ಜೋಗಿ ಶಾಖೆ ಸುತ್ತಲಿನ ಗಿಡ–ಗಂಟಿಗಳ ಮರೆಯೇ ಸ್ಥಳೀಯರ ಬಯಲು ಶೌಚಕ್ಕೆ ದಾರಿಯಾಗಿದೆ.

‘ಬೆಳಕು ಹರಿಯುವ ಮುನ್ನ, ಇಲ್ಲವೇ ಹೊತ್ತು ಮುಳುಗಿದ ಮೇಲೇಯೇ ಹೆಣ್ಣು ಮಕ್ಕಳು ಶೌಚಕಾರ್ಯಕ್ಕೆ ಹೋಗುತ್ತಾರೆ. ಹಗಲಿನಲ್ಲಿ ಹೋದರೆ ಪುಂಡ–ಪೋಕರಿಗಳ ಕಾಟ. ಶೌಚಾಲಯ ವ್ಯವಸ್ಥೆ ಇಲ್ಲದೆ ಆರೋಗ್ಯವೂ ಕೆಡುತ್ತಿದೆ’ ಎಂದು ಶಾಖೆಯ ನಿವಾಸಿ ನಾಗಮ್ಮ ಅಳಲು ಹೇಳಿಕೊಂಡರು.

*
ನೆಲೆನಿಂತ ನೆಲಕ್ಕೆ ಬೇಕು ಹಕ್ಕುಪತ್ರ

ಕೊಳಗೇರಿಗಳಲ್ಲಿ ಕಟ್ಟಿಕೊಂಡಿರುವ ಚಿಕ್ಕ ಸೂರುಗಳ ಜಾಗದ ಮಾಲೀಕತ್ವ ಅಲ್ಲಿನ ನಿವಾಸಿಗಳಿಗೆ ಇಲ್ಲ. ಹಾಗಾಗಿ ಅವರು, ನೆಲೆನಿಂತಿರುವ ನೆಲದ ಮಾಲೀಕತ್ವದ ಹಕ್ಕುಪತ್ರವನ್ನು ಮೊದಲು ನೀಡಿ ಎಂದು ಹಲವಾರು ವರ್ಷಗಳಿಂದ ಒತ್ತಾಯಿಸುತ್ತಿದ್ದಾರೆ.

ನಿವೇಶನದ ಹಕ್ಕುಪತ್ರ ಇಲ್ಲದ ಕಾರಣ, ನಿವಾಸಿಗಳು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಸತಿ ಯೋಜನೆಗಳ ಸಹಾಯಧನ ಪಡೆದುಕೊಂಡು ಬೆಚ್ಚನೆಯ ಪುಟ್ಟ ಮನೆಗಳನ್ನು ಕಟ್ಟಿಕೊಳ್ಳುವಿಕೆಯಿಂದ ವಂಚಿತರಾಗುತ್ತಿದ್ದಾರೆ.
*


ಪ್ರಮುಖ ಕೊಳಗೇರಿಗಳು

ಮಾರಿಯಮ್ಮ ಬಡಾವಣೆ, ಮರಳೂರು ಜನತಾ ಕಾಲೊನಿ, ನಜೀರಾಬಾದ್‌, ಜಿ.ಸಿ.ಆರ್‌.ಕಾಲೊನಿ, ಹೆಗ್ಗಡೆ ಕಾಲೊನಿ, ಸ್ವಿಪರ್ಸ್‌ ಕಾಲೊನಿ, ಸಂತೆ ಮೈದಾನ, ಲೇಬರ್‌ ಕಾಲೊನಿ, ಈದ್ಗಾ ಮೊಹಲ್ಲಾ, ರೈಲ್ವೆ ಗೂಡ್ಸ್‌ಶೆಡ್‌ ಕಾಲೊನಿ, ಕ್ಯಾತ್ಸಂದ್ರ ಇಂದ್ರ ಕಾಲೊನಿ, ಮಾರುತಿ ನಗರ.
*
87 ಕುಟುಂಬಗಳಿಗೆ ನಾಲ್ಕೆ ಶೌಚಾಲಯಗಳಿವೆ. ಜನರು ಹಣ ಪಾವತಿಸಿ ಉಪಯೋಗಿಸುವ ಶೌಚಾಲಯಗಳನ್ನು ಅವಲಂಬಿಸಿದ್ದಾರೆ. ಪ್ರತಿಬಾರಿಯ ಶೌಚಕಾರ್ಯಕ್ಕೆ ₹ 3 ಕೊಡಬೇಕು.

ಮಕ್ಕೊಡಿಯಮ್ಮ, ಮಾರಿಯಮ್ಮ ಕೊಳಗೇರಿ
*
ನಮ್ಮ ತಾಯಿ(70 ವರ್ಷ) ಕೂಡ ಇಲ್ಲೇ ಹುಟ್ಟಿ ಬೆಳೆದು, ಜೀವನ ಸಾಗಿಸಿ, ಈಗ ಇಳಿವಯಸ್ಸಿನಲ್ಲಿದ್ದಾರೆ. ಆದರೂ ಈ ಜಾಗದ ಹಕ್ಕುಪತ್ರ ನಮಗೆ ಸಿಕ್ಕಿಲ್ಲ.

ಚಿಕ್ಕಗಂಗಮ್ಮ, ಹಂದಿ ಜೋಗಿ ಕೊಳಗೇರಿ
*
ವಸತಿಯೋಜನೆಗಳಡಿ ನಮಗೆ ಸೂರು ಕಲ್ಪಿಸಿ. ನೀರು, ಶೌಚಾಲಯ, ವಿದ್ಯುತ್‌, ಆರೋಗ್ಯ, ಶಿಕ್ಷಣದ ಸೌಲಭ್ಯಗಳನ್ನು ನೀಡಿ ಸ್ವಾಮಿ.

ಮುರುಘನ್‌, ಮಾರಿಯಮ್ಮ ಕೊಳಗೇರಿ
*
ಜಾಗದ ಹಕ್ಕುಪತ್ರಗಳನ್ನು ವಿತರಿಸಲು ಮಹಾನಗರ ಪಾಲಿಕೆಯು ಮುತುವರ್ಜಿ ವಹಿಸಿ ಸರಳ ಖಾತಾ ಆಂದೋಲನ ಆರಂಭಿಸಬೇಕು. ಅರ್ಹರಿಗೆ ಮನೆ ಕಟ್ಟಿಕೊಡಬೇಕು.

ಎ.ನರಸಿಂಹಮೂರ್ತಿ, ಅಧ್ಯಕ್ಷ, ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ

*

ನಿವಾಸಿಗಳ ಒತ್ತಾಯ

ಶೆಡ್‌ಗಳು ಇರುವ ಜಾಗದ ಹಕ್ಕುಪತ್ರ ನೀಡಬೇಕು

ವಸತಿ ಯೋಜನೆಗಳಡಿ ಮನೆಗಳನ್ನು ಕಟ್ಟಿಕೊಡಬೇಕು

ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಬೇಕು

*

ಹಕ್ಕುಪತ್ರ ನೀಡುತ್ತೇವೆ: ಮೇಯರ್‌

ಅರ್ಹರಿಗೆ ಜಾಗದ ಹಕ್ಕುಪತ್ರಗಳನ್ನು ನೀಡುವ ವ್ಯವಸ್ಥೆ ಮಾಡುತ್ತೇವೆ ಎಂದು ಮೇಯರ್‌ ಲಲಿತಾ ರವೀಶ್‌ ತಿಳಿಸಿದರು.

ಕೋತಿತೋಪು, ಭಾರತಿನಗರಲ್ಲಿನ ಬಹುತೇಕ ನಿವಾಸಿಗಳಿಗೆ ಈಗಾಗಲೇ ಹಕ್ಕುಪತ್ರಗಳನ್ನು ನೀಡಿದ್ದೇವೆ. ದಿಬ್ಬೂರಿನಲ್ಲಿ ನಿರ್ಮಾಣಗೊಂಡಿರುವ ದೇವರಾಜು ಅರಸು ಬಡಾವಣೆಯಲ್ಲಿ(ವಸತಿ ಸಮುಚ್ಚಯ) 1,200 ಕುಟುಂಬಗಳಿಗೆ ಮನೆಗಳನ್ನು ಹಂಚಿಕೆ ಮಾಡಿದ್ದೇವೆ ಎಂದು ಅವರು ಹೇಳಿದರು.

ಸ್ಮಾರ್ಟ್‌ ಸಿಟಿನಿಂದ ವಸತಿ ಸಮುಚ್ಚಯ ನಿರ್ಮಿಸಿ ಮಾರಿಯಮ್ಮ ಬಡಾವಣೆ ಸ್ಥಳಾಂತರದ ಪ್ರಕ್ರಿಯೆ ಜಾರಿಯಲ್ಲಿದೆ ಎಂದರು.

ಅಂಕಿ–ಅಂಶ

7,548

ನಗರದ ಕೊಳಗೇರಿಗಳಲ್ಲಿನ ಶೆಡ್‌ಗಳು

44,919

ಕೊಳಗೇರಿಗಳಲ್ಲಿನ ನಿವಾಸಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT