ಗುರುವಾರ , ಡಿಸೆಂಬರ್ 5, 2019
21 °C
ದಿಶಾ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಂಸದ ಜಿ.ಎಸ್.ಬಸವರಾಜು

ಸ್ಮಾರ್ಟ್‌ ಸಿಟಿ: ಜನರಿಗೊ, ವ್ಯಾಪಾರಿಗೋ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ತುಮಕೂರು ನಗರಾಭಿವೃದ್ಧಿ ಯೋಜನೆಗಳನ್ನು ರೂಪಿಸಲು ಎಷ್ಟು ಸಾರ್ವಜನಿಕ ಸಭೆಗಳನ್ನು ನಡೆಸಿದ್ದೀರಾ. ಜನರಿಂದ ಎಷ್ಟು ಸಲ ಸಲಹೆಗಳನ್ನು ಆಹ್ವಾನಿಸಿದ್ದೀರಿ. ಇದ್ಯಾವುದನ್ನು ಮಾಡದೆ ಮನಸಿಗೆ ಬಂದ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಕೇವಲ ಬಿಲ್‌ಗಳನ್ನು ತಯಾರಿಸುತ್ತಿದ್ದಿರಾ ಎಂದು ಸಂಸದ ಜಿ.ಎಸ್.ಬಸವರಾಜು ಅವರು ಸ್ಮಾರ್ಟ್‌ ಸಿಟಿ ಲಿಮಿಟೆಡ್‌ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ತುಮಕೂರು ಸ್ಮಾರ್ಟ್‌ ಸಿಟಿ ಲಿಮಿಟೆಡ್‌, ಮಹಾನಗರ ಪಾಲಿಕೆ ಹಾಗೂ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ(ದಿಶಾ)ಯು ನಡೆಸಿದ ಪ್ರಗತಿ ಪರಿಶೀಲನಾ ಸಭೆ ಈ ತರಾಟೆಗೆ ವೇದಿಕೆಯಾಯಿತು.

ಪ್ರತಿ ಕಾಮಗಾರಿಯ ಕುರಿತು ಕೇಳಿದಾಗಲು ನೀವು ತೃಪ್ತಿದಾಯಕ ಉತ್ತರ ನೀಡುವುದಿಲ್ಲ. ಬೇರೆ ಇಲಾಖೆಯೊಂದಿಗೆ ಸಮನ್ವಯದಿಂದ ಕೆಲಸ ಮಾಡುವುದಿಲ್ಲ. ಈಗಾಗಲೇ ಖರ್ಚು ಮಾಡಿರುವ ₹ 900 ಕೋಟಿಯಲ್ಲಿ ಎಷ್ಟು ಕೆಲಸ ಆಗಬೇಕಿತ್ತು ಗೊತ್ತೇನ್ರಿ. ಎಲ್ಲ ಹಾಳಾಗಿ ಹೋಗಿದೆ. ನಿಮ್ಮ ಕಡತಗಳನ್ನು ತೆಗೆದು ನೋಡಿದ್ರೆ ವಾಮಿಟ್‌ (ವಾಂತಿ) ಬರುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಜಗೊಂಡನಹಳ್ಳಿ ಕಸ ವಿಲೇವಾರಿ ಘಟಕ ಸುಧಾರಿಸಲು ಏನು ಯೋಜನೆ ಹಾಕಿಕೊಂಡಿದ್ದೀರಿ. ಆ ಪ್ರದೇಶದಲ್ಲಿ ಅಂತರ್ಜಲ ಕಲುಷಿತಗೊಂಡಿದೆ. ದನದ ಗಂಜಲ, ಡಿಕಾಕ್ಷನ್‌ ರೀತಿಯಲ್ಲಿ ಬೋರ್‌ವೆಲ್‌ ನೀರು ಬರುತ್ತಿದೆ. ಸ್ಥಳೀಯರು ನ್ಯಾಯಾಲಯಕ್ಕೆ ಹೋದರೆ, ನೀವೆಲ್ಲ ಕಂಬಿ ಹಿಂದೆ ಹೋಗಬೇಕಾಗುತ್ತದೆ ಹುಷಾರು ಎಂದು ಎಚ್ಚರಿಸಿದರು.

ಆ ಕಸ ವಿಲೇವಾರಿ ಘಟಕದ ಸುತ್ತಲಿನ ಊರುಗಳನ್ನು ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಅಭಿವೃದ್ಧಿಪಡಿಸಲು ಯೋಚಿಸಿದ್ದೇನೆ. ಅಲ್ಲಿನ ಅಭಿವೃದ್ಧಿಗೆ ಪೂರಕವಾದ ವರದಿ ಸಿದ್ಧಪಡಿಸಿ ಎಂದು ಸೂಚಿಸಿದರು.

ರಸ್ತೆಗಳ ವಿಭಜಕದ ಮೇಲೆ ಕುರುಚಲ ಗಿಡಗಳನ್ನು ನೆಡಲು ಎಷ್ಟು ಲಕ್ಷ ಖರ್ಚು ಮಾಡಿದ್ದೀರಾ, ಅದನ್ನು ಕಾಲ–ಕಾಲಕ್ಕೆ ಯಾಕೆ ಟ್ರಿಮ್‌ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.

10.5 ಕಿ.ಮೀ. ಉದ್ದದ ರಸ್ತೆ ವಿಭಜಕದಲ್ಲಿ ಸಸಿಗಳನ್ನು ಬೆಳೆಸಲು ₹ 19 ಲಕ್ಷ ವ್ಯಯಿಸುತ್ತಿದ್ದೇವೆ. ಮಳೆ ಬಂದ ಕಾರಣಕ್ಕೆ ಟ್ರಿಮ್‌ ಕೆಲಸ ಮಾಡಿರಲಿಲ್ಲ. ಎರಡು ವಾರಗಳಲ್ಲಿ ಕೆಲಸ ಮಾಡಿ ಮುಗಿಸುತ್ತೇವೆ ಎಂದು ಅಧಿಕಾರಿಗಳು ಉತ್ತರಿಸಿದರು.

ಜನವಸತಿ ಪ್ರದೇಶದಲ್ಲಿ 8 ಮೀಟರ್‌ಗಿಂತ ಹೆಚ್ಚಿನ ಎತ್ತರದ ವಿದ್ಯುತ್‌ ಕಂಬಗಳನ್ನು ಅಳವಡಿಸಬೇಡಿ ಎಂದು ಸಲಹೆ ನೀಡಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್‌, ಸಹ ಅಧಿಕಾರಿಗಳಿಂದ ಉತ್ತರ ಪಡೆಯಲು ಹಿಂದೆ ಬೀಳಲಿಲ್ಲ. ನಗರದಲ್ಲಿ ಅನುಷ್ಠಾನಗೊಳ್ಳುತ್ತಿರುವ ಎಲ್ಲ ಯೋಜನೆಗಳ ಮಾಹಿತಿ ಒಂದೇ ಸೂರಿನಡಿಯ ’ಅಭಿವೃದ್ಧಿ ಗ್ರಂಥಾಲಯ‘ದಲ್ಲಿ ಲಭ್ಯ ಆಗುವಂತೆ ಮಾಡಿ. 2022ರ ಗುರಿ ಇಟ್ಟುಕೊಂಡು ಕೆಲಸ ಮಾಡಿ. ಇ–ಆಫೀಸ್‌ಗಳನ್ನು ರೂಪಿಸಿ ಎಂದು ಸಲಹೆ ನೀಡಿದರು.

ಯೋಜನೆ ರೂಪಿಸುವಾಗ ಬಡಾವಣೆಗಳ ಹಿತರಕ್ಷಣಾ ವೇದಿಕೆಗಳ ಸಲಹೆಗಳನ್ನು ಪರಿಗಣಿಸಿ. ನಗರದ ಸುತ್ತಲಿನ 10 ಕಿ.ಮೀ. ವ್ಯಾಪ್ತಿಯಲ್ಲಿನ ಸರ್ಕಾರಿ ಆಸ್ತಿಗಳ ಮಾಹಿತಿ ಕಲೆಹಾಕಿ ಎಂದು ಹೇಳಿದರು.

ವೆಚ್ಚದ ಪ್ರತ್ಯೇಕ ಲೆಕ್ಕ ಕೊಡಿ: ಪ್ರತಿ ಕಾಮಗಾರಿಯ ನಿರ್ಮಾಣ ವೆಚ್ಚ(ಸಿವಿಲ್‌) ಮತ್ತು ಅದರಲ್ಲಿ ಅಳವಡಿಸುವ ತಾಂತ್ರಿಕ ಉಪಕರಣಗಳ(ಐ.ಟಿ.) ವೆಚ್ಚದ ಪ್ರತ್ಯೇಕ ಲೆಕ್ಕ ಕೊಡಿ ಎಂದು ಶಾಸಕರು ಸೂಚಿಸಿದರು.

*

ವ್ಯಾಪಾರಿಗಳ ಕೇಂದ್ರಿತ ಕಾಮಗಾರಿ

ಪ್ರತಿ ಕಾಮಗಾರಿಗೆ ಅಗತ್ಯಕ್ಕಿಂತ ಹೆಚ್ಚಿನ ಮೊತ್ತವನ್ನು ನಿಗದಿ ಪಡಿಸಲಾಗಿದೆ. ಅದರಿಂದ ಸಾರ್ವಜನಿಕ ಹಣ ದುರುಪಯೋಗ ಆಗುತ್ತಿದೆ. ಕಾಮಗಾರಿಗೆ ಬೇಕಾದ ಸಾಮಗ್ರಿಗಳನ್ನು(ಕಬ್ಬಿಣ, ಸಿಮೆಂಟ್‌, ಯಂತ್ರೋಪಕರಣಗಳು) ಪೂರೈಸುವ ವ್ಯಾಪಾರಿಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಯೋಜನೆಗಳನ್ನು ರೂಪಿಸಲಾಗಿದೆ ಎಂಬ ಮಾತು ಕೇಳಿಬರುತ್ತಿದೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್‌ ವಿಷಯ ಪ್ರಸ್ತಾಪಿಸಿದರು.

ಕರ್ನಾಟಕ ಸರ್ಕಾರ ನಿಗದಿಪಡಿಸಿರುವ ದರ ಪಟ್ಟಿ(ಎಸ್‌.ಆರ್.)ಯಂತೆ ಕಾಮಗಾರಿಯ ಅಂದಾಜು ವೆಚ್ಚ ನಿಗದಿಪಡಿಸಲಾಗಿದೆ. ಅದರಲ್ಲಿ ವ್ಯಾಪಾರಿಗಳಿಗೆ ಲಾಭ ಮಾಡಿಕೊಡುವ ಉದ್ದೇಶ ಇಲ್ಲ ಎಂದು ಸ್ಮಾರ್ಟ್‌ ಸಿಟಿಯ ಸಲಹೆಗಾರರೊಬ್ಬರು ಉತ್ತರಿಸಿದರು.

ತಕ್ಷಣ ಮತ್ತೊಬ್ಬ ಅಧಿಕಾರಿ ಎದ್ದುನಿಂತು, ವ್ಯಾಪಾರಿಗಳ ದೃಷ್ಟಿಯಲ್ಲಿ ಇಟ್ಟುಕೊಂಡು ರೂಪಿಸಿ, ಅನುಷ್ಠಾನ ಗೊಳಿಸಿದ ಒಂದೇ ಒಂದು ಯೋಜನೆಯನ್ನು ಉದಾಹರಿಸಿ ಎಂದು ಶಾಸಕರಿಗೆ ಸವಾಲು ಹಾಕಿದರು.

ವರದಿ ಸಮೇತ ನಿಮಗೆ ತಿಳಿಸುತ್ತೇನೆ ಎಂದು ಶಾಸಕರು ಸಮಜಾಯಿಸಿ ನೀಡಿ ಸುಮ್ಮನಾದರು.

*

ಕಟ್ಟಡ ತ್ಯಾಜ್ಯ ವಿಲೇವಾರಿ: ಯಾರ ಜವಾಬ್ದಾರಿ

ನಗರದಲ್ಲಿ ಎಲ್ಲೆಂದರಲ್ಲಿ ಕಟ್ಟಡ ನಿರ್ಮಾಣ ತ್ಯಾಜ್ಯ ಸುರಿಯಲಾಗುತ್ತಿದೆ. ಅದನ್ನು ವಿಲೇವಾರಿ ಮಾಡುವುದು ಯಾರ ಜವಾಬ್ದಾರಿ ಎಂಬ ಮಾತು ಸಭೆಯಲ್ಲಿ ಪ್ರಸ್ತಾಪವಾಯಿತು.

ಮಹಾನಗರ ಪಾಲಿಕೆ ಆಯುಕ್ತ ಸಿ.ಎಲ್‌.ಶಿವಕುಮಾರ್‌, ಖಾಲಿ ಕೆರೆಗಳು, ಸರ್ಕಾರದ ಖರಾಬು ಜಮೀನಿನಲ್ಲಿ ಕಟ್ಟಡ ತ್ಯಾಜ್ಯ ಸುರಿಯುವ ಪರಿಪಾಠ ಹಿಂದಿನಿಂದಲೂ ಇದೆ. ಕಟ್ಟಡ ನಿರ್ಮಾಣ ತ್ಯಾಜ್ಯದ ವಿಲೇವಾರಿ ನಮ್ಮಿಂದ ಆಗಲ್ಲ. ಆ ಕೆಲಸ ಮಾಡಿದರೆ, ಪಾಲಿಕೆಯೇ ದಿವಾಳಿ ಆಗುತ್ತದೆ ಎಂದು ಹೇಳಿದರು.

ಜಿ.ಎಸ್‌.ಬಸವರಾಜು ಪ್ರತಿಕ್ರಿಯಿಸುತ್ತ, ಮನೆ ಕಟ್ಟುವವರಿಂದ ಮುಂಗಡವಾಗಿ ಇಂತಿಷ್ಟು ಸಾವಿರ ಹಣವನ್ನು ಜಮೆ ಮಾಡಿಕೊಳ್ಳಿ. ಅವರು ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡಿದರೆ, ಹಣ ವಾಪಸ್ಸು ಕೊಡಿ. ಇಲ್ಲದಿದ್ದರೆ, ಅದೇ ಹಣ ಮುಟ್ಟುಗೋಲು ಹಾಕಿಕೊಂಡ ಕಟ್ಟಡ ತ್ಯಾಜ್ಯ ವಿಲೇವಾರಿಗೆ ಬಳಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಕಟ್ಟಡ ತ್ಯಾಜ್ಯ ಸುರಿಯುವವರ ಮೇಲೆ ಕಣ್ಣಿಡಲು ಜಾಗೃತದಳ ನಿಯೋಜಿಸಿ ಎಂದು ಶಾಸಕರು ಸಹ ಕಿವಿಮಾತು ಹೇಳಿದರು. ಇದಕ್ಕೆ ಆಯುಕ್ತರು ‘ಅದನ್ನು ಮಾಡುತ್ತೇವೆ’ ಎಂದು ತಲೆ ಅಲ್ಲಾಡಿಸಿದರು.

ಪ್ರತಿಕ್ರಿಯಿಸಿ (+)