ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ₹ 527 ಕೋಟಿ ಕಾಮಗಾರಿಗಳಿಗೆ ಶಂಕುಸ್ಥಾಪನೆ

ನಗರವನ್ನು ಮತ್ತಷ್ಟು ಸ್ಮಾರ್ಟ್‌ ಮಾಡಲು ಬರುತ್ತಿವೆ ಆಧುನಿಕ ಸೇವಾ ಸೌಲಭ್ಯಗಳು
Last Updated 7 ಜೂನ್ 2019, 15:28 IST
ಅಕ್ಷರ ಗಾತ್ರ

ತುಮಕೂರು: ಸ್ಮಾರ್ಟ್‌ ಸಿಟಿ ಯೋಜನೆಯಡಿ ನಗರದಲ್ಲಿನ ಸೇವಾ–ಸೌಲಭ್ಯಗಳನ್ನು ಮತ್ತಷ್ಟು ಸುಧಾರಿಸುವ ₹ 526.94 ಕೋಟಿ ಮೊತ್ತದ 29 ಕಾಮಗಾರಿಗಳಿಗೆ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಅವರು ಶುಕ್ರವಾರ ಚಾಲನೆ ನೀಡಿದರು. ಜತೆಗೆ ಯೋಜನೆಯಿಂದ ಅಭಿವೃದ್ಧಿಪಡಿಸಲಾದ ₹ 4.83 ಕೋಟಿ ವೆಚ್ಚದ ನಾಲ್ಕು ಮೂಲಸೌಲಭ್ಯಗಳನ್ನೂ ಉದ್ಘಾಟಿಸಿದರು.

ನಗರದಲ್ಲಿ ಅಳವಡಿಸಲಿರುವ ಸಿ.ಸಿ.ಟಿ.ವಿ. ಕ್ಯಾಮೆರಾಗಳು, ವಾಯು ಗುಣಮಟ್ಟ ಮಾಪಕಗಳು, ತುರ್ತು ಸ್ಪಂದನಾ ದೂರವಾಣಿ ಕರೆ ವ್ಯವಸ್ಥೆ ಮತ್ತು ರಚನೆಗೊಳ್ಳಲಿರುವ ತುಮಕೂರು ಒನ್‌ ಆ್ಯಪ್‌ ನಿರ್ವಹಣೆಯ ತಾತ್ಕಾಲಿಕ ಕೇಂದ್ರಿಕೃತ ಘಟಕವನ್ನು(ಐಸಿಎಂಸಿಸಿ) ಉದ್ಘಾಟಿಸಿದರು.

ಉಪ್ಪಾರಹಳ್ಳಿ ಮೇಲ್ಸೇತುವೆ ಕೆಳಗೆ ಅಭಿವೃದ್ಧಿ ಪಡಿಸಿರುವ ವಾಣಿಜ್ಯ ಪ್ರದೇಶ, ನಗರ ಕೇಂದ್ರ ಗ್ರಂಥಾಲಯದಲ್ಲಿ ರೂಪಿಸಿರುವ ಡಿಜಿಟಲ್‌ ಗ್ರಂಥಾಲಯ, ಸರ್ಕಾರಿ ಎಂಪ್ರೆಸ್‌ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ರಚಿಸಿರುವ ಡಿಜಿಟಲ್‌ ಕ್ಲಾಸ್‌ರೂಮ್‌ಗಳನ್ನು ಸಹ ಉದ್ಘಾಟಿಸಿದರು.

ನಗರ ಕೇಂದ್ರ ಗ್ರಂಥಾಲಯದ ಆವರಣದಲ್ಲಿ ಆಯೋಜಿಸಿದ್ದ ವಿವಿಧ ಕಾಮಗಾರಿಗಳ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಜಿ.ಪರಮೇಶ್ವರ ಮಾತನಾಡಿ, ತುಮಕೂರಿನ ಮೂಲಸೌಕರ್ಯಗಳನ್ನು ಅತ್ಯಾಧುನಿಕ ಮಾದರಿಯಲ್ಲಿ ಅಭಿವೃದ್ಧಿಪಡಿಸಲು, ಸುರಕ್ಷತೆ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಜನಾನುಕೂಲ ಬದಲಾವಣೆಗಳನ್ನು ತರಲು ಸ್ಮಾರ್ಟ್‌ ಸಿಟಿಯಲ್ಲಿ ಯೋಜನೆಗಳನ್ನು ರೂಪಿಸಿಕೊಂಡಿದ್ದೇವೆ. ಸಂಚಾರ ದಟ್ಟಣೆಯೇ ಉಂಟಾಗದ, ಗುಂಡಿಗಳೇ ಇಲ್ಲದ ವಿಶಾಲ ರಸ್ತೆಗಳ, ಸುಸಜ್ಜಿತ ವೈದ್ಯಕೀಯ ಸೌಲಭ್ಯವಿರುವ ಆಸ್ಪತ್ರೆ ನಿರ್ಮಾಣ, ನಗರವಾಸಿಗಳಿಗೆ 24 ಗಂಟೆಯೂ ನೀರು ಪೂರೈಕೆಗೆ ಅನುವಾಗುವ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದೇವೆ. ಇದಕ್ಕೆ ಸ್ಥಳೀಯ ಜನಪ್ರತಿನಿಧಿಗಳು ತುಂಬಾ ಚನ್ನಾಗಿಯೇ ಸಹಕಾರ ನೀಡುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ನಗರದಲ್ಲಿ ಹುಟ್ಟಿ ಬೆಳೆದ ಕ್ರೀಡಾಪಟುಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ. ಅಂತಹ ಮತ್ತಷ್ಟು ಕ್ರೀಡಾ ಪಟುಗಳು ತಯಾರಾಗಲು ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ ಆಗಲಿದೆ. ಈಗಿರುವ ಮಹಾತ್ಮಾ ಗಾಂಧಿ ಕ್ರೀಡಾಂಗಣದ ಹಳೆಯ ಪೆವಿಲಿಯನ್‌ ಅನ್ನು ಸಂಪೂರ್ಣವಾಗಿ ಕೆಡವುತ್ತೇವೆ. ಮೂರು ಅಂತಸ್ತಿನ ಹೊಸ ಪೆವಿಲಿಯನ್‌ ಕಟ್ಟುತ್ತೇವೆ. ಅದರಲ್ಲಿನ ಮೊದಲೆರಡು ಅಂತಸ್ತುಗಳಲ್ಲಿ ಕ್ರೀಡಾ ಕೂಟಗಳಲ್ಲಿ ಭಾಗವಹಿಸಲು ಬಂದಂತ ಕ್ರೀಡಾಪಟುಗಳು ಉಳಿದುಕೊಳ್ಳಲು ಡಾರ್ಮೆಂಟರಿಗಳ ವ್ಯವಸ್ಥೆ ಇರಲಿದೆ. ಮೂರನೆ ಮಹಡಿಯಲ್ಲಿ ಪೆವಿಲಿಯನ್‌ ಇರಲಿದೆ. ಹೊಸ ಸಿಂಥೆಟಿಕ್‌ ಟ್ರ್ಯಾಕ್‌ ಸಹ ನಿರ್ಮಾಣ ಆಗಲಿದೆ ಎಂದು ತಿಳಿಸಿದರು.

‘ಸಂಸದರು ಹೆಚ್ಚಿನ ಅನುದಾನ ತರಲಿ’
ರಾಜ್ಯ ಸರ್ಕಾರದ ನೀರಾವರಿ ಇಲಾಖೆಯಿಂದ ಅನುದಾನ ಹೊಂದಿಸಿ ಅಮಾನಿ ಕೆರೆ ಮತ್ತು ಮರಳೂರು ಕೆರೆಗಳಿಗೆ ನೀರು ತುಂಬಿಸಿ, ನಗರದಲ್ಲಿನ ನೀರಿನ ಬವಣೆಯನ್ನು ಸಂಪೂರ್ಣವಾಗಿ ನೀಗಿಸಲಾಗುವುದು ಎಂದು ಜಿ.ಪರಮೇಶ್ವರ ಹೇಳಿದರು.

ಕೇಂದ್ರ ಸರ್ಕಾರದ ಯೋಜನೆಗಳಿಂದ ಬಹಳಷ್ಟು ಅನುದಾನ ತರುವ ಅವಕಾಶ ಈಗ ಆರಿಸಿ ಬಂದಿರುವ ಬಸವರಾಜು ಅವರಿಗೆ ಇದೆ. ಅನುದಾನಗಳನ್ನು ತರುವ ಮಾತನ್ನು ಸಂಸದರಿಗೆ ತಲುಪಿಸಿ. ನಿಮಗೆ ಈ ಮಾತು ಹೇಳಿದರೆ, ಅವರಿಗೆ ತಲುಪುತ್ತದೆ ಎಂಬ ಗ್ಯಾರಂಟಿ ಇದೆ ಎಂದು ವೇದಿಕೆಯಲ್ಲಿದ್ದ ಸಂಸದ ಜಿ.ಎಸ್‌.ಬಸವರಾಜು ಅವರ ಮಗ ಜಿ.ಬಿ.ಜ್ಯೋತಿ ಗಣೇಶ್‌ ಅವರತ್ತ ತಿರುಗಿ ಹೇಳಿದರು.

‘ನಗರಕ್ಕೆ ಬೇಕು ಬೃಹತ್‌ ಉದ್ಯಾನ’
ಬೆಂಗಳೂರಿನಲ್ಲಿ ಇರುವ ಲಾಲ್‌ಬಾಗ್‌ ಮತ್ತು ಕಬ್ಬನ್‌ ಪಾರ್ಕ್‌ ರೀತಿಯ ಬೃಹತ್‌ ಉದ್ಯಾನವನ್ನು ತುಮಕೂರಿನಲ್ಲಿಯೂ ರೂಪಿಸಬೇಕಿದೆ ಎಂದು ಜಿ.ಪರಮೇಶ್ವರ ಹೇಳಿದರು.

ಈ ಉದ್ಯಾನ ರೂಪಿಸಲು ನಗರದಿಂದ ಗರಿಷ್ಠ 1 ಕಿ.ಮೀ. ಅಂತರದಲ್ಲಿ 100ರಿಂದ 200 ಎಕರೆಯಷ್ಟು ಜಮೀನು ಗುರುತಿಸಿ. ಅದರ ಅಭಿವೃದ್ಧಿಗೆ ಯೋಜನೆ ರೂಪಿಸೋಣ. ಉದ್ಯಾನ ನಿರ್ಮಾಣವಾದರೆ ವಾರಾಂತ್ಯದಲ್ಲಿ ಕುಟುಂಬದ ಸದಸ್ಯರು ಹೊರ ಸಂಚಾರ ಹೋಗಿ ಆರಾಮವಾಗಿ ವಿರಾಮ ಕಳೆಯಲು ಅನುಕೂಲ ಆಗಲಿದೆ ಎಂದು ಅಧಿಕಾರಿಗಳಿಗೆ ತಿಳಿಸಿದರು.

ಡಿಜಿಟಲ್‌ ಗ್ರಂಥಾಲಯದಲ್ಲಿ 5,000 ಇ–ಪುಸ್ತಕಗಳು
ನಗರದ ಕೇಂದ್ರ ಗ್ರಂಥಾಲಯದ ಮೊದಲ ಮಹಡಿಯಲ್ಲಿ ಡಿಜಿಟಲ್‌ ಗ್ರಂಥಾಲಯ ರೂಪಿಸಲಾಗಿದೆ.

‘ಇಲ್ಲಿ 20 ಕಂಪ್ಯೂಟರ್‌ಗಳಿವೆ. ಅವುಗಳಲ್ಲಿ 5,000ಕ್ಕೂ ಹೆಚ್ಚು ಇ–ಪುಸ್ತಕಗಳನ್ನು, 400ಕ್ಕೂ ಹೆಚ್ಚು ದಿನಪತ್ರಿಕೆ ಮತ್ತು ನಿಯತಕಾಲಿಕೆಗಳು, 200 ಕ್ಕೂ ಹೆಚ್ಚು ಸಂಶೋಧನಾ ಬರಹಗಳ ಜರ್ನಲ್‌ಗಳನ್ನು ಓದಬಹುದಾಗಿದೆ’ ಎಂದು ನಗರ ಮತ್ತು ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕಿ ಎನ್‌.ಸರಸ್ವತಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಗ್ರಂಥಾಲಯದಲ್ಲಿ ಕುಳಿತು ಓದಲು ಮೊಬೈಲ್‌ ಸಂಖ್ಯೆ ಮತ್ತು ಇ–ಮೇಲ್‌ನಿಂದ ನೋಂದಾಯಿಸಿಕೊಳ್ಳಬೇಕು. ಒಂದು ತಿಂಗಳವರೆಗೆ ಈ ಸೌಲಭ್ಯವನ್ನು ಉಚಿತವಾಗಿ ನೀಡುತ್ತೇವೆ. ಬಳಿಕ ಅತಿ ಕಡಿಮೆ ಶುಲ್ಕ ಭರಿಸಿಕೊಂಡು ಅಜೀವ ಸದಸ್ಯತ್ವ ನೀಡುತ್ತೇವೆ’ ಎಂದು ಅವರು ತಿಳಿಸಿದರು.

‘ಪ್ರತಿಯೊಬ್ಬರಿಗೆ ಕನಿಷ್ಠ 1 ಗಂಟೆ ಒಂದು ಗ್ರಂಥಾಲಯ ಬಳಸಲು ಅವಕಾಶ ನೀಡುತ್ತೇವೆ. ಬೇರೆಯವರು ಸರದಿಯಲ್ಲಿ ಇಲ್ಲದಿದ್ದರೆ ಒಂದು ಗಂಟೆಗೂ ಹೆಚ್ಚು ಕಾಲ ಗ್ರಂಥಾಲಯ ಬಳಸಲು ಅವಕಾಶ ನೀಡುತ್ತೇವೆ’ ಎಂದು ಅವರು ಮಾಹಿತಿ ನೀಡಿದರು.

‘ಝಿರೋ ಟ್ರಾಫಿಕ್‌ನಿಂದ ಆಂಬುಲೆನ್ಸ್‌ಗೆ ತಡೆ’
ಜಿ.ಪರಮೇಶ್ವರ ಅವರು ಜಿಲ್ಲಾಸ್ಪತ್ರೆ ಕಡೆಯಿಂದ ಕೆಎಸ್‌ಆರ್‌ಟಿಸಿ ಆವರಣದಲ್ಲಿನ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲು ಹೋಗಲು ಝಿರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು. ಇದರಿಂದ ಪುರಭವನದ ಮುಂಭಾಗದಿಂದ ಆಸ್ಪತ್ರೆಗೆ ತೆರಳುತ್ತಿದ್ದ ಆಂಬುಲೆನ್ಸ್‌ ಒಂದು ಕೆಲ ಕಾಲ ಸಂಚಾರ ದಟ್ಟಣೆಯಲ್ಲಿ ನಿಲ್ಲುವಂತಾಯಿತು.

ಆಂಬುಲೆನ್ಸ್‌ನ ಸೈರನ್‌ ಆಲಿಸಿದ ಸಂಚಾರ ಪೊಲೀಸರು ಉಪಮುಖ್ಯಮಂತ್ರಿಯ ಕಾರು ಪುರಭವನದ ಮುಂಭಾಗದಿಂದ ಹಾದು ಹೋಗುವ ಮುನ್ನವೇ ಆಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟರು.

‘ಕೆಲವು ದಿನ ತೊಂದರೆ ಸಹಿಸಿಕೊಳ್ಳಿ’
ಕೇಬಲ್‌ಗಳ ಜಾಲ, ಮಳೆನೀರು ಹರಿವಿನ ನಾಲೆ, ಒಳಚರಂಡಿಗಳು ನೆಲದಡಿಯಲ್ಲಿ ಇರುವ ಹಾಗೂ ಸೈಕಲ್‌ ಚಾಲನಾ ಪಥ ಇರುವ ಸ್ಮಾರ್ಟ್‌ ರಸ್ತೆಗಳು ನಗರದಲ್ಲಿ ನಿರ್ಮಾಣ ಆಗುತ್ತಿದೆ. ಇದಕ್ಕಾಗಿ ಅಲ್ಲಲ್ಲಿ ರಸ್ತೆಗಳನ್ನು ಅಗೆಯಲಾಗಿದೆ. ಇದರಿಂದ ಆಗುತ್ತಿರುವ ತೊಂದರೆಯನ್ನು ಕೆಲವು ದಿನಗಳ ಕಾಲ ಸಹಿಸಿಕೊಳ್ಳಿ ಎಂದು ಶಾಸಕ ಜಿ.ಬಿ.ಜ್ಯೋತಿ ಗಣೇಶ್‌ ಅವರು ಸಾರ್ವಜನಿಕರಿಗೆ ಹೇಳಿದರು.

ರಸ್ತೆ ಅಗೆದಿರುವಲ್ಲಿ ಯಾರಾದರೂ ಬಿದ್ದು ಪ್ರಾಣಹಾನಿ ಸಂಭವಿಸದಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ನಾವೀಗ ನೀರಿಗಾಗಿ ಹಾಸನದ ಒತ್ತಡದಲ್ಲಿ ಬದುಕುತ್ತಿದ್ದೇವೆ. ನಮ್ಮ ಜಿಲ್ಲೆಯ ಕೆರೆಗಳಲ್ಲಿ ಹೂಳು ತೆಗೆದು ನೀರು ತುಂಬಿಸಿಕೊಳ್ಳಬೇಕಿದೆ. ಆಗ ನೀರಿಗಾಗಿ ಹಾಸನದ ಮೇಲಿನ ಅವಲಂಬನೆ ಬಹುತೇಕ ತಪ್ಪಲಿದೆ ಎಂದರು.

‘ಜಿಲ್ಲಾಸ್ಪತ್ರೆ ಆದಾಯದಿಂದ ವೈದ್ಯರಿಗೆ ಪ್ರೋತ್ಸಾಹ ಧನ’
ತುಮಕೂರು ಜಿಲ್ಲಾಸ್ಪತ್ರೆಯು ಆಯುಷ್ಮಾನ–ಆರೋಗ್ಯ ಕರ್ನಾಟಕ ಆರೋಗ್ಯ ವಿಮೆ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ₹ 4 ಕೋಟಿ ಆದಾಯ ಗಳಿಸಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ ಹೇಳಿದರು.

ಗಳಿಸಿರುವ ಆದಾಯದಲ್ಲಿ ಶೇ 30ರಷ್ಟು ಮೊತ್ತವನ್ನು ವೈದ್ಯಾಧಿಕಾರಿಗಳಿಗೆ ಮತ್ತು ಆಸ್ಪತ್ರೆಯ ಸಿಬ್ಬಂದಿಗೆ ಪ್ರೋತ್ಸಾಹ ಧನವಾಗಿ ನೀಡುತ್ತೇವೆ. ಇದರಿಂದ ಅವರ ಕಾರ್ಯಕ್ಷಮತೆಯೂ ಹೆಚ್ಚಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಬಿ.ಎಸ್ಸಿ. ನರ್ಸಿಂಗ್‌ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಸತಿ ನಿಲಯ ನಿರ್ಮಿಸಲು ಒತ್ತಾಯ ಕೇಳಿಬಂದಿದೆ. ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಸಹಕಾರದೊಂದಿಗೆ ಅದನ್ನು ಕಟ್ಟಲಾಗುವುದು ಎಂದು ಭರವಸೆ ನೀಡಿದರು.

ಸ್ಮಾರ್ಟ್‌ ಸಿಟಿ ಲಿಮಿಟೆಡ್‌ನಿಂದ ಶಂಕುಸ್ಥಾಪನೆಗೊಂಡ ಪ್ರಮುಖ ಕಾಮಗಾರಿಗಳು

ಯೋಜನೆ;ಯೋಜನಾ ವೆಚ್ಚ(₹ ಕೋಟಿಗಳಲ್ಲಿ)

ಸರ್ಕಾರಿ ಎಂಪ್ರೆಸ್‌ ಬಾಲಕಿಯರ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನಲ್ಲಿ ಸಭಾಂಗಣ, ಪ್ರಯೋಗಾಲಯ, ಗ್ರಂಥಾಲಯ ನಿರ್ಮಾಣ; 13 ಕೋಟಿ

ಹೊರ ವರ್ತುಲ ರಸ್ತೆ 4 ಪಥಗಳಲ್ಲಿ ಅಭಿವೃದ್ಧಿ; 114.20 ಕೋಟಿ

ಅಶೋಕ ರಸ್ತೆ ಅಭಿವೃದ್ಧಿ; 16.8 ಕೋಟಿ

ಐಸಿಎಂಸಿಸಿ ಕೇಂದ್ರ ನಿರ್ಮಾಣ; 42 ಲಕ್ಷ

ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಮೇಲ್ದರ್ಜೆಗೆ; 93.78 ಕೋಟಿ

ಅಪಘಾತ ಚಿಕಿತ್ಸಾ ಕೇಂದ್ರ(ಟ್ರಾಮಾ); 56 ಕೋಟಿ

ಅಮಾನಿಕೆರೆಗೆ ಹೇಮಾವತಿ ನೀರು ತುಂಬಿಸುವ ಯೋಜನೆ; 56.55 ಕೋಟಿ

ಮಹಾತ್ಮ ಗಾಂಧಿ ಕ್ರೀಡಾ ಸಂಕೀರ್ಣ ಅಭಿವೃದ್ಧಿ; 49.97 ಕೋಟಿ

ನಗರ ಕೇಂದ್ರ ಗ್ರಂಥಾಲಯಕ್ಕೆ ಹೊಸ ಕಟ್ಟಡ ಮತ್ತು ನವೋದ್ಯಮಿಗಳಿಗೆ ತರಬೇತಿ ಕೇಂದ್ರ; 33.51 ಕೋಟಿ

****
ನಾವೆಲ್ಲ ಸೇರಿ ಎರಡು–ಮೂರು ವರ್ಷಗಳಲ್ಲಿ ತುಮಕೂರಿನ ಚಿತ್ರಣ ಬದಲಿಸೋಣ. ಈ ನಗರವನ್ನು ನೋಡಲೆಂದೇ ಹೊರಗಿನ ಜನರು ಬರುವಂತಾಗಬೇಕು.
-ಜಿ.ಪರಮೇಶ್ವರ, ಉಪಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT