ಗುರುವಾರ , ನವೆಂಬರ್ 14, 2019
19 °C
ಶ್ರೀದೇವಿ ವೈದ್ಯಕೀಯ ಕಾಲೇಜಿನ ಮಕ್ಕಳ ವೈದ್ಯರ ಸಾಧನೆ

ಅವಧಿಪೂರ್ವವಾಗಿ ಜನಿಸಿದ 740 ಗ್ರಾಂ ತೂಕವಿದ್ದ ಮಗುವಿಗೆ ಯಶಸ್ವಿ ಚಿಕಿತ್ಸೆ

Published:
Updated:
Prajavani

ತುಮಕೂರು: ಅವಧಿಪೂರ್ವ ಜನಿಸಿದ 740 ಗ್ರಾಂ ತೂಕವಿದ್ದ ಶಿಶುವನ್ನು ಆರೈಕೆ ಮಾಡಿ, ಯಶಸ್ವಿ ಚಿಕಿತ್ಸೆ ನೀಡಿದ ಶ್ರೀದೇವಿ ವೈದ್ಯಕೀಯ ಕಾಲೇಜಿನ ವೃದ್ಯರ ಸಾಧನೆ ಎಲ್ಲರ ಗಮನ ಸೆಳೆದಿದೆ.

ಶ್ರೀದೇವಿ ವೈದ್ಯಕೀಯ ಕಾಲೇಜಿನಲ್ಲಿ ಜುಲೈ 27ರಂದು 28 ವಾರಕ್ಕೆ ಸಿಜೇರಿಯನ್ ಮೂಲಕ ಜನಿಸಿದ ಅವಧಿ ಪೂರ್ವ ಗಂಡುಮಗು 740 ಗ್ರಾಂ ತೂಕವಿತ್ತು. ಹುಟ್ಟಿದಾಗ ಶ್ವಾಸಕೋಶ ಬೆಳವಣಿಗೆ ಆಗದ ಕಾರಣ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಶಿಶುವನ್ನು 3 ದಿನ ವೆಂಟಿಲೇಟರ್‌ನಲ್ಲೇ ಇಡಲಾಗಿತ್ತು. ಸೆಂಟ್ರಲ್ ಲೈನ್ ಮೂಲಕ ಔಷಧಿಗಳನ್ನು ನೀಡಲಾಯಿತು. ನಂತರ ಉಸಿರಾಟದ ತೊಂದರೆ ಕಡಿಮೆ ಆದಾಗ ಮಗುವಿಗೆ ತಾಯಿಯ ಹಾಲನ್ನು ಜಿಒ ಟ್ಯೂಬ್ ಮೂಲಕ ಕೊಡಲಾಯಿತು. ಸ್ವಲ್ಪ ದಿನದ ಬಳಿಕ ತಾಯಿಯ ಹಾಲನ್ನು ಕರೆದು ನೀಡಲಾಯಿತು.

ಮಗುವನ್ನು 51 ದಿನ ಎನ್‌ಐಸಿಯುನಲ್ಲಿ ಇಡಲಾಗಿತ್ತು. ದಿನೇ ದಿನೇ ಮಗುವಿನ ತೂಕ ಹೆಚ್ಚಳವಾಗಿ ಅ.16ರಂದು ಮಗು ಆಸ್ಪತ್ರೆಯಿಂದ ಬಿಡುಗಡೆಯಾಗುವ ವೇಳೆಗೆ 1,260 ಗ್ರಾಂ ತೂಕ ಆಗಿದೆ.

ನವಜಾತ ಶಿಶು ತಜ್ಞರಾದ ಡಾ.ಜಿ.ಅರುಣ್‍ಕುಮಾರ್, ಮಕ್ಕಳ ತಜ್ಞರಾದ ಡಾ.ವೈ.ಎಮ್.ಶಿಲ್ಪಶ್ರೀ, ಡಾ.ಎಚ್.ಪಲ್ಲವಿ, ಡಾ.ಶಶಿಧರ್, ಡಾ.ನಿಸಾರ್ ಅಹಮದ್ ಮಗುವಿಗೆ ಚಿಕಿತ್ಸೆ ನೀಡಿದರು. ಶುಶ್ರೂಷಕರಾದ ಪುಷ್ಪಾವತಿ, ಮಂಜುಶ್ರೀ, ಅನಿತಾ ಹಾಗೂ ಶ್ರೀದೇವಿ ಮಗುವಿನ ಆರೈಕೆ ಮಾಡಿದ್ದಾರೆ.

ಈ ಸಾಧನೆಗೆ ಶ್ರೀದೇವಿ ವೈದ್ಯಕೀಯ ಕಾಲೇಜಿನ ಅಧ್ಯಕ್ಷ ಡಾ.ಎಮ್.ಆರ್. ಹುಲಿನಾಯ್ಕರ್, ವೈದ್ಯಕೀಯ ನಿರ್ದೇಶಕ ಡಾ.ರಮಣ್ ಹುಲಿನಾಯ್ಕರ್, ಮಾನವ ಸಂಪನ್ಮೂಲ ವಿಭಾಗ ನಿರ್ದೆಶಕ ಎಮ್.ಎಸ್‍ಪಾಟೀಲ್ ಹಾಗೂ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಮುಖ್ಯಸ್ಥೆ ಡಾ.ರೇಖಾ ಗುರುಮೂರ್ತಿ ವೈದ್ಯಕೀಯ ತಂಡವನ್ನು ಅಭಿನಂದಿಸಿದ್ದಾರೆ.

ಒಂದು ಬಾರಿಯೂ ಸೋಂಕು ತಗುಲಿಲ್ಲ
ಅವಧಿಪೂರ್ವ ಜನಿಸಿದ ಮಗುವಿಗೆ ಸಾಮಾನ್ಯವಾಗಿ ಸೋಂಕು ತಗಲುವ ಪ್ರಮಾಣ ಹೆಚ್ಚಿರುತ್ತದೆ. ರೋಗನಿರೋಧಕ ಶಕ್ತಿ ತೀರಾ ಕಡಿಮೆ ಇರುತ್ತದೆ. ಆದರೆ, ಈ ಮಗುವಿಗೆ ಹುಟ್ಟಿನಿಂದ ಇಂದಿನವರೆಗೆ ಒಂದುಬಾರಿಯೂ ಸೋಂಕು ತಗುಲಿಲ್ಲ. ಅತಿ ಕಡಿಮೆ ಆಂಟಿಬಯೊಟಿಕ್‌ ಬಳಸಿ ಮಗುವಿಗೆ ಚಿಕಿತ್ಸೆ ನೀಡಲಾಗಿದೆ. ನಮ್ಮ ಚಿಕಿತ್ಸೆಗೆ ತಕ್ಕಂತೆ ಮಗುವಿನ ಸ್ಪಂದನೆಯೂ ಚೆನ್ನಾಗಿತ್ತು. ಈಗ ಮಗು ಆರೋಗ್ಯಪೂರ್ಣವಾಗಿದೆ.
-ಡಾ.ಅರುಣ್‌ಕುಮಾರ್‌, ನವಜಾತ ಶಿಶು ತಜ್ಞ

ಪ್ರತಿಕ್ರಿಯಿಸಿ (+)