ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು: ಸುಧಾರಿಸದ ಇಂದಿರಾ ಕ್ಯಾಂಟೀನ್‌

ಮೈಲಾರಿ ಲಿಂಗಪ್ಪ
Published : 10 ಆಗಸ್ಟ್ 2024, 6:29 IST
Last Updated : 10 ಆಗಸ್ಟ್ 2024, 6:29 IST
ಫಾಲೋ ಮಾಡಿ
Comments

ತುಮಕೂರು: ಇಂದಿರಾ ಕ್ಯಾಂಟೀನ್‌ಗಳು ಗುಣಮಟ್ಟದ ಆಹಾರ ಪೂರೈಕೆ, ರುಚಿ–ಶುಚಿಯಲ್ಲಿ ಹಿಂದೆ ಬಿದ್ದಿದ್ದು, ಒಂದು ವರ್ಷದಿಂದ ಆಹಾರ ಗುಣಮಟ್ಟದ ಪರೀಕ್ಷೆ ನಡೆದಿಲ್ಲ. ಜನರು ಆಹಾರ ಸೇವಿಸುವ ಮುನ್ನ ಒಮ್ಮೆ ಯೋಚಿಸಬೇಕಾಗಿದೆ.

ರೈಲು ನಿಲ್ದಾಣದ ರಸ್ತೆಯ ಕ್ಯಾಂಟೀನ್‌ನಲ್ಲಿ ಅಡುಗೆ ತಯಾರಿಸಿ, ಎಲ್ಲ ಕ್ಯಾಂಟೀನ್‌ಗಳಿಗೆ ಪೂರೈಸಲಾಗುತ್ತದೆ. ಆರು ತಿಂಗಳಿಗೊಮ್ಮೆ ಕ್ಯಾಂಟೀನ್‌ನ ಆಹಾರ ಗುಣಮಟ್ಟ ಪರೀಕ್ಷೆ ನಡೆಸಬೇಕು ಎಂಬ ನಿಯಮ ಇದೆ. ಆದರೆ ಸಕಾಲಕ್ಕೆ ಈ ಕೆಲಸ ಆಗುತ್ತಿಲ್ಲ. ಆರು ತಿಂಗಳ ಹಿಂದೆ ಆಹಾರ ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ಕ್ಯಾಂಟೀನ್‌ನ ಬೇಳೆ, ಅಕ್ಕಿ, ಸಕ್ಕರೆ ಇತರೆ ಆಹಾರ ಪದಾರ್ಥ ಪರೀಕ್ಷಿಸಿದ್ದರು. ಇದನ್ನು ಹೊರೆತುಪಡಿಸಿದರೆ ಆಹಾರವನ್ನು ಪರೀಕ್ಷೆಗೆ
ಒಳಪಡಿಸಿಲ್ಲ.

ಕ್ಯಾತ್ಸಂದ್ರ, ರೈಲು ನಿಲ್ದಾಣದ ರಸ್ತೆ, ಶಿರಾಗೇಟ್‌, ಮಂಡಿಪೇಟೆ ಸೇರಿದಂತೆ ಒಟ್ಟು ನಾಲ್ಕು ಕ್ಯಾಂಟೀನ್‌ಗಳಿವೆ. ಎಲ್ಲ ಕಡೆ ನೀರಿನ ಸಮಸ್ಯೆ ಇದೆ. ಕ್ಯಾನ್‌ಗಳ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ. ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟು ಮೂಲೆ ಸೇರಿವೆ. ಜನರು ಕುಡಿಯುವ ನೀರು ಎಷ್ಟು ಪರಿಶುದ್ಧ ಎನ್ನುವುದು ಸಹ ಖಾತ್ರಿಯಾಗುತ್ತಿಲ್ಲ. ಆಹಾರ ತಯಾರಿಸಲು, ಕುಡಿಯಲು ಬಳಸುವ ನೀರು ಸಹ ಪರೀಕ್ಷೆಗೆ ಒಳಪಟ್ಟಿಲ್ಲ.

ಪ್ರತಿಯೊಂದು ಕಡೆ ಪ್ರತ್ಯೇಕವಾಗಿ ಎರಡು ಶೌಚಾಲಯ ನಿರ್ಮಿಸಿದ್ದು, ಅವುಗಳಿಗೂ ಬೀಗ ಜಡಿಯಲಾಗಿದೆ. ಸೂಕ್ತ ನಿರ್ವಹಣೆ, ನೀರಿನ ಅಲಭ್ಯತೆಯಿಂದ ಬಾಗಿಲು ಹಾಕಲಾಗಿದೆ. ಸಿ.ಸಿ ಟಿ.ವಿ ಕ್ಯಾಮೆರಾಗಳು ಹಾಳಾಗಿದ್ದು, ಸರಿಪಡಿಸಿಲ್ಲ. ಕ್ಯಾಂಟೀನ್‌ನಲ್ಲಿ ಮೆನು ಪ್ರಕಾರ ಊಟ, ತಿಂಡಿ ಪೂರೈಸುತ್ತಿಲ್ಲ.

ಮೆನುವಿನಂತೆ ಗುರುವಾರ ರಾತ್ರಿ ಅನ್ನ, ತರಕಾರಿ ಸಾಂಬಾರ್, ಮೊಸರನ್ನ ಅಥವಾ ಬಿಸಿಬೇಳೆಬಾತ್ ಮತ್ತು‌‌ ಮೊಸರನ್ನ ಕೊಡಬೇಕು. ಆದರೆ ಚಿತ್ರಾನ್ನ ಕೊಟ್ಟಿದ್ದಾರೆ. ಯಾಕೆ ಹೀಗೆ ಅಂತ ಕೇಳುವವರೂ ಇಲ್ಲ. ಮಹಾನಗರ ಪಾಲಿಕೆ ಅಧಿಕಾರಿಗಳು ಖಾಸಗಿ ಸಂಸ್ಥೆಗೆ ಇಂದಿರಾ ಕ್ಯಾಂಟೀನ್‌ನ ಜವಾಬ್ದಾರಿ ವಹಿಸಿದ್ದು, ಇತ್ತ ತಿರುಗಿಯೂ ನೋಡುವುದಿಲ್ಲ ಎಂಬುವುದು ಸಾರ್ವಜನಿಕರ ಆರೋಪ.

ಎಲ್ಲ ಕಡೆ ಒಂದು ಸಮಯ ನಿಗದಿಪಡಿಸಿಲ್ಲ. ಗುರುವಾರ ರಾತ್ರಿ ಎಂಟು ಗಂಟೆಯಾದರೂ ಶಿರಾ ಗೇಟ್‌ ಬಳಿ ಇರುವ ಕ್ಯಾಂಟೀನ್‌ಗೆ ಊಟ ಸರಬರಾಜಾಗಿಲ್ಲ. ‘ಇಲ್ಲಿ ಕೇವಲ ಅರ್ಧಗಂಟೆ ಊಟ ಬಡಿಸಿ 9 ಗಂಟೆಗೆ ಬಾಗಿಲು ಹಾಕುತ್ತಾರೆ. ರಾತ್ರಿ ಸಮಯದಲ್ಲಿ ಎಲ್ಲ ಕ್ಯಾಂಟೀನ್‌ಗಳಲ್ಲಿ ಊಟ ಮಾಡುವವರ ಸಂಖ್ಯೆ ತೀರಾ ಕಡಿಮೆ ಇದೆ. ನಾಲ್ಕು ಕಡೆ ಸೇರಿ 100 ಜನ ಕೂಡ ಊಟಕ್ಕೆ ಬರುವುದಿಲ್ಲ’ ಎಂದು ನಗರದ ಮಂಜುನಾಥ್‌ ದೂರಿದರು.

ಡೆಂಗಿ ಆತಂಕ: ಕ್ಯಾಂಟೀನ್‌ಗಳ ಆವರಣದಲ್ಲಿ ಸ್ವಚ್ಛತೆ ಮಾಯವಾಗಿದ್ದು, ಇಲಿ, ಹೆಗ್ಗಣಗಳ ತಾಣವಾಗಿ ಬದಲಾಗಿವೆ. ಇಲ್ಲಿನ ಸಿಬ್ಬಂದಿ ಸೊಳ್ಳೆಗಳಿಂದ ಕಚ್ಚಿಸಿಕೊಂಡು ಡೆಂಗಿ ಜ್ವರದಿಂದ ಬಳಲುತ್ತಿದ್ದಾರೆ. ಮಂಡಿಪೇಟೆ ಕ್ಯಾಂಟೀನ್‌ನ ಸಿಬ್ಬಂದಿಯೊಬ್ಬರು ಜ್ವರದಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದಾರೆ.

ಮಧ್ಯಾಹ್ನ ಮತ್ತು ಬೆಳಗ್ಗೆ ಹೊತ್ತಿನಲ್ಲಿ ಹೆಚ್ಚಿನ ಜನರು ಕ್ಯಾಂಟೀನ್‌ಗೆ ಭೇಟಿ ನೀಡುತ್ತಾರೆ. ಮಂಡಿಪೇಟೆಯಲ್ಲಿ ಕೆಲಸ ಮಾಡುವ ಹಮಾಲಿಗಳು, ಗ್ರಾಹಕರು, ಜಿಲ್ಲಾ ಆಸ್ಪತ್ರೆಗೆ ಬರುವವರು, ಕಾಲೇಜು ವಿದ್ಯಾರ್ಥಿಗಳು ಮಧ್ಯಾಹ್ನದ ಊಟಕ್ಕೆ ಕ್ಯಾಂಟೀನ್‌ ಅವಲಂಬಿಸುತ್ತಿದ್ದಾರೆ. ಆದರೆ, ಅವರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಲ್ಲ.

ಕ್ಯಾಂಟೀನ್‌ ಸ್ಥಳಾಂತರಕ್ಕೆ ಒತ್ತಾಯ: ಕ್ಯಾತ್ಸಂದ್ರ ಹತ್ತಿರದ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ, ತಿಂಡಿ ಮಾಡುವರರ ಸಂಖ್ಯೆ ತೀರಾ ಕಡಿಮೆ ಇದೆ. ಪಕ್ಕದಲ್ಲೇ ಸಿದ್ಧಗಂಗಾ ಮಠ ಇರುವುದರಿಂದ ಹೆಚ್ಚಿನ ಜನರು ಮಠದ ಕಡೆಗೆ ಹೋಗುತ್ತಾರೆ. ಇದನ್ನು ಬೇರೆ ಕಡೆಗೆ ಸ್ಥಳಾಂತರಿಸಿದರೆ ತುಂಬಾ ಜನರಿಗೆ ಅನುಕೂಲವಾಗಲಿದೆ ಎಂಬ ಒತ್ತಾಯ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.

‘ಇಲ್ಲಿ ಟೋಕನ್‌ ವ್ಯವಸ್ಥೆ ಮಾಯವಾಗಿದ್ದು, ನೇರವಾಗಿ ಹಣ ಕೊಟ್ಟು ಆಹಾರ ಪಡೆಯಬಹುದು. ಇದರಿಂದಾಗಿ ಎಷ್ಟು ಜನರು ಬಂದು ಹೋಗಿದ್ದಾರೆ ಎಂಬುವುದರ ನಿಖರ ಲೆಕ್ಕ ಸಿಗುವುದಿಲ್ಲ. ಅಧಿಕಾರಿಗಳು ಇದೆಲ್ಲವನ್ನು ಕಂಡು ಕಾಣದಂತೆ ಸುಮ್ಮನಿದ್ದಾರೆ. ತಿಂಡಿಯೂ ರುಚಿಯಾಗಿ ಇರಲ್ಲ, ಕೆಲವೊಮ್ಮೆ ಸಾಂಬಾರ್‌ಗೆ ಉಪ್ಪು–ಖಾರ ಕೂಡ ಹಾಕಿರಲ್ಲ. ಕೈ ತೊಳೆಯಲು ನೀರು ಇಲ್ಲ. ಕುಡಿಯುವ ನೀರನ್ನೇ ಬಳಸಬೇಕಾಗುತ್ತದೆ. ಶೌಚಾಲಯ ಇದ್ದರೂ ಬಳಕೆಗೆ ನೀಡುತ್ತಿಲ್ಲ’ ಎಂದು ಕ್ಯಾತ್ಸಂದ್ರದ ಮನೋಜ್‌ ಹೇಳಿದರು.

ಮಹಾನಗರ ಪಾಲಿಕೆ ವ್ಯಾಪ್ತಿಯ ಅಂತರಸನಹಳ್ಳಿ ಮಾರುಕಟ್ಟೆ ಹಾಗೂ ಅಮಾನಿಕೆರೆ ಬಳಿ ಇಂದಿರಾ ಕ್ಯಾಂಟೀನ್‌ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಎರಡೂ ಕಡೆ ಕ್ಯಾಂಟೀನ್‌ ಆರಂಭಿಸಬೇಕು ಎಂದು ಈ ಭಾಗದ ಜನರು ಹಲವು ದಿನಗಳಿಂದ ಒತ್ತಾಯಿಸಿದ್ದರು.

‘ಈಗಿರುವ ನಾಲ್ಕು ಕ್ಯಾಂಟೀನ್‌ ನಿರ್ವಹಣೆ ಮಾಡಲು ಆಗುತ್ತಿಲ್ಲ. ಎಲ್ಲ ಕಡೆಗಳಲ್ಲಿ ತುಂಬಾ ಸಮಸ್ಯೆಗಳಿವೆ, ಅವುಗಳನ್ನು ಬಗೆಹರಿಸಿ ಜನರಿಗೆ ಉತ್ತಮ ಆಹಾರ ಪೂರೈಸಬೇಕು. ಅದನ್ನು ಬಿಟ್ಟು ಮತ್ತೆ ಹೊಸದಾಗಿ ಕ್ಯಾಂಟೀನ್‌ ತೆರೆದರೆ ಹೆಚ್ಚಿನ ಹೊರೆಯಾಗಲಿದೆ. ಅಧಿಕಾರಿಗಳು ಈ ನಿಟ್ಟಿನಲ್ಲಿ ಮತ್ತೊಮ್ಮೆ ಯೋಚಿಸಿ ಮುಂದಡಿ ಇಡಬೇಕು’ ಎಂದು ನಗರದ ಸುಂದರೇಶ್‌ ಪ್ರತಿಕ್ರಿಯಿಸಿದರು.

ಸಿಬ್ಬಂದಿ ಕೊರತೆ

‘ನಾಲ್ಕು ಇಂದಿರಾ ಕ್ಯಾಂಟೀನ್‌ಗಳಿಗೆ ಇನ್ನೂ ಕನಿಷ್ಠ 15 ಜನ ಸಿಬ್ಬಂದಿ ಬೇಕಾಗುತ್ತಾರೆ. ರೈಲು ನಿಲ್ದಾಣದ ರಸ್ತೆಯ ಕ್ಯಾಂಟೀನ್‌ನಲ್ಲಿ ಸ್ವಚ್ಛತೆ, ಟೋಕನ್‌ ವಿತರಣೆ, ಊಟ ಬಡಿಸಲು ಇನ್ನೂ 5 ಮಂದಿ ನೇಮಿಸಿಕೊಳ್ಳಬೇಕು. ಈಗ ಕೆಲಸ ಮಾಡುವವರಿಗೆ ಒತ್ತಡ ಹೆಚ್ಚಾಗಿದೆ’ ಎಂದು ಇಲ್ಲಿನ ಸಿಬ್ಬಂದಿ ಅಳಲು ತೋಡಿಕೊಂಡರು.

ಪ್ರತಿ ಕ್ಯಾಂಟೀನ್‌ಗೆ ಹೆಚ್ಚುವರಿಯಾಗಿ ತಲಾ ಮೂವರನ್ನು ನೇಮಿಸಿದರೆ ಉತ್ತಮ. ಸಿಬ್ಬಂದಿ ಕೊರತೆಯಿಂದ ಕ್ಯಾಂಟೀನ್‌ ಸಮರ್ಪಕವಾಗಿ ನಡೆಯುತ್ತಿಲ್ಲ. ಸ್ವಚ್ಛತೆ ಕಾಪಾಡಲು ಆಗುತ್ತಿಲ್ಲ ಎಂದರು.

ನೀರಿನ ಸಮಸ್ಯೆ ತುಂಬಾ ಇದೆ. ಕ್ಯಾಂಟೀನ್‌ನಲ್ಲಿ ಸ್ವಚ್ಛತೆ ಇರುವುದಿಲ್ಲ. ತಟ್ಟೆ ಸರಿಯಾಗಿ ತೊಳೆಯುವುದಿಲ್ಲ. ನೀರು ಕುಡಿಯಲು ಲೋಟದ ವ್ಯವಸ್ಥೆ ಮಾಡಿಲ್ಲ. ಇಂತಹ ಸಣ್ಣ–ಪುಟ್ಟ ಸಮಸ್ಯೆಗಳನ್ನು ಸರಿಪಡಿಸಬೇಕು.
ವಿನಯ್, ಆಟೊ ಚಾಲಕ
ದೂರದ ಊರುಗಳಿಂದ ಬರುವ ವಿದ್ಯಾರ್ಥಿಗಳು, ಸಾರ್ವಜನಿಕರು ಇಂದಿರಾ ಕ್ಯಾಂಟೀನ್‌ನಲ್ಲಿ ತಿಂಡಿ ತಿನ್ನುತ್ತಾರೆ. ಗುಣಮಟ್ಟದ ಆಹಾರ ಪೂರೈಸಲು ಆದ್ಯತೆ ನೀಡಬೇಕು. ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಕುಳಿತು ತಿನ್ನಲು ಆಸನದ ವ್ಯವಸ್ಥೆ ಮಾಡಿದರೆ ಉತ್ತಮ
ಶಶಾಂಕ್‌, ವಿದ್ಯಾರ್ಥಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT