ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಣಸೆಹಣ್ಣಿನ ಬೆಲೆ ಕ್ವಿಂಟಲ್‌ಗೆ ₹6 ಸಾವಿರ ಕುಸಿತ

Last Updated 15 ಜನವರಿ 2019, 4:31 IST
ಅಕ್ಷರ ಗಾತ್ರ

ತುಮಕೂರು: ರಾಜ್ಯದ ಪ್ರಮುಖ ಹುಣಸೆ ಬೆಳೆಯುವ ಪ್ರದೇಶವಾದ ಜಿಲ್ಲೆಯ ರೈತರ ಪಾಲಿಗೆ ಸಂಕ್ರಾಂತಿ ಶುಭ ಸೂಚನೆ ಕೊಟ್ಟಿಲ್ಲ. ಎಪಿಎಂಸಿಯಲ್ಲಿಹುಣಸೆಹಣ್ಣಿನ ಬೆಲೆ ತೀವ್ರವಾಗಿ ಕುಸಿದಿದೆ. ಬೆಲೆ ಕುಸಿದ ರೀತಿ ಕಂಡ ರೈತರು ಮತ್ತು ದಲ್ಲಾಳಿಗಳು ಸೋಮವಾರ ಅಕ್ಷರಶಃ ತತ್ತರಿಸಿದರು.

ಈ ವರ್ಷದ ಮೊದಲ ಹುಣಸೆ ವಹಿವಾಟು ಜ.3ರಂದು ನಡೆಯಿತು.ಮೊದಲ ದಿನ ಉತ್ತಮ ದರ್ಜೆ (ಕರಿಪುಳಿ) ಹುಣಸೆಹಣ್ಣು ಕ್ವಿಂಟಲ್‌ಗೆ₹15ರಿಂದ 21 ಸಾವಿರದವರೆಗೂ ಮಾರಾಟವಾಯಿತು. ಸೋಮವಾರ (ಜ.14) ನಡೆದ ವಹಿವಾಟಿನಲ್ಲಿಹುಣಸೆ ಬೆಲೆ ಕ್ವಿಂಟಲ್‌ಗೆ₹8500ಕ್ಕೆ ಇಳಿಯಿತು.

‘ನಾನು ಅಂದುಕೊಂಡಿದ್ದ ಬೆಲೆಗೂ ಮಾರುಕಟ್ಟೆ ಬೆಲೆಗೂ ₹7 ಸಾವಿರದಷ್ಟು ವ್ಯತ್ಯಾಸವಿದೆ. ಈ ಮೊತ್ತಕ್ಕೆ ಮಾರಿದರೆ ನಮಗೆ ಏನೂ ಗಿಟ್ಟುವುದಿಲ್ಲ’ ಎಂದುತೋವಿನಕರೆ ಗ್ರಾಮದಿಂದ ಹಣ್ಣು ತಂದಿದ್ದರಾಜಣ್ಣ ಪ್ರತಿಕ್ರಿಯಿಸಿದರು. ‘ಗುರುವಾರ (ಜ.10) ಕ್ವಿಂಟಲ್‌ ಹಣ್ಣಿಗೆ ₹ 15 ಸಾವಿರ ಧಾರಣೆ ಇತ್ತು. ಈಗ ಏಕಾಏಕಿ ₹9 ಸಾವಿರಕ್ಕೆ ಕುಸಿದಿದೆ. ಹಣ್ಣು ತಂದಿರುವ ರೈತರಿಗೆ ಏನು ಹೇಳುವುದೋ ಗೊತ್ತಾಗುತ್ತಿಲ್ಲ’ ಎಂದು ಮಂಡಿ ವರ್ತಕರು ಹೇಳಿದರು.

ಮೊದಲ ವಹಿವಾಟಿನಲ್ಲಿ ಉತ್ತಮ ಬೆಲೆ ಕುದುರಿದ್ದು ಗಮನಿಸಿದ್ದ ರೈತರು ಮತ್ತು ದಲ್ಲಾಳಿಗಳು ಸೋಮವಾರಹೆಚ್ಚು ಮಾಲು ತಂದಿದ್ದರು. ಈ ವರ್ಷ ತುಮಕೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಹುಣಸೆ ಇಳುವರಿ ಚೆನ್ನಾಗಿದೆ. ಹೀಗಾಗಿ ಬೆಲೆ ಕುಸಿದಿದೆ ಎನ್ನುವ ವಿಶ್ಲೇಷಣೆ ಚಾಲ್ತಿಯಲ್ಲಿದೆ.

ಇದೇ ಮೊದಲು:ತುಮಕೂರು ಮಾರುಕಟ್ಟೆಯಲ್ಲಿ ಜ.3ಕ್ಕೆ ಹುಣಸೆ ವಹಿವಾಟು ಆರಂಭವಾಗಿರುವುದು ಇದೇ ಮೊದಲು. ದೇಶದ ಪ್ರಮುಖ ಹುಣಸೆ ಮಾರುಕಟ್ಟೆ ಎನಿಸಿರುವಆಂಧ್ರ ಪ್ರದೇಶದ ಹಿಂದೂಪುರದಲ್ಲಿ ಪ್ರತಿವರ್ಷ ಜ.3ಕ್ಕೆ ಹುಣಸೆ ವಹಿವಾಟು ಆರಂಭವಾಗುತ್ತದೆ. ಅದೇ ಮಾದರಿಯಲ್ಲಿ ತುಮಕೂರಿನಲ್ಲಿಯೂ ಈ ವರ್ಷ ವಾಡಿಕೆಗೆ ಮೊದಲೇ ಹುಣಸೆ ವಹಿವಾಟು ಆರಂಭಿಸಲಾಯಿತು.ಫೆಬ್ರುವರಿ 15ರಿಂದ ಮರ್ಚ್‌ 15ರವರೆಗೆ ಹುಣಸೆ ಆವಕ ಹೆಚ್ಚು.ಏಪ್ರಿಲ್‌ ತಿಂಗಳಲ್ಲಿ ಇಳಿಮುಖವಾಗುವ ಆವಕ, ಜುಲೈಗೆ ಮುಗಿಯುತ್ತದೆ.

ಸಮೃದ್ಧ ಇಳುವರಿ:ಕಳೆದ ವರ್ಷ ಹುಣಸೆ ಇಳುವರಿ ಕುಂಠಿತಗೊಂಡಿತ್ತು. ಹಳ್ಳಿ ತಿರುಗಿ ಮರದ ಇಳುವರಿ ಕೊಳ್ಳುವ ದಲ್ಲಾಳಿಗಳು ರೈತರಿಗೆ ಕ್ವಿಂಟಲ್‌ಗೆ ಸರಾಸರಿ ₹3ಸಾವಿರ ಪಾವತಿಸಿದ್ದರು. ಸಂಸ್ಕರಣೆ, ಸಾಗಣೆ ಖರ್ಚಿನ ನಂತರ ಕ್ವಿಂಟಲ್‌ಗೆ ಸರಾಸರಿ ₹6 ಸಾವಿರದಷ್ಟು ಖರ್ಚು ಬಂದಿತ್ತು. ತುಮಕೂರು ಮಾರುಕಟ್ಟೆಯಲ್ಲಿ ಒಂದು ಕ್ವಿಂಟಲ್‌ ಹುಣಸೆಹಣ್ಣಿಗೆ₹20ಸಾವಿರ ಸಿಕ್ಕಿತ್ತು.ಕಳೆದ ವರ್ಷ ಗಳಿಸಿದ್ದ ಲಾಭದ ಲೆಕ್ಕಾಚಾರದಲ್ಲಿ ಈ ವರ್ಷವೂ ಉತ್ತಮ ಧಾರಣೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ದಲ್ಲಾಳಿಗಳು ರೈತರಿಂದ ಮರ ಖರೀದಿಸುವಾಗ ಸರಾಸರಿ ₹6 ಸಾವಿರ ಬೆಲೆ ಕಟ್ಟಿದ್ದರು. ಆದರೆ ಇಳುವರಿ ಹೆಚ್ಚಾಗಿರುವುದರಿಂದ ಬೆಲೆ ಕುಸಿತದ ಭೀತಿ ಎದುರಾಗಿದೆ.

ಪರ್ಯಾಯ ಬೆಳೆ:ಬರದ ನೆರಳಿನಲ್ಲಿರುವ ತುಮಕೂರು, ಚಿತ್ರದುರ್ಗ ಜಿಲ್ಲೆಗಳ ಗ್ರಾಮೀಣ ಪ್ರದೇಶಗಳಲ್ಲಿ ಈಚೆಗೆ ರೈತರು ಹುಣಸೆಯತ್ತ ವಾಲುತ್ತಿದ್ದಾರೆ. ಒಣಗಿದ ಅಡಿಕೆ ತೋಟಗಳಲ್ಲಿ ಹುಣಸೆ ನೆಲೆ ಕಂಡುಕೊಂಡಿದೆ.ಒಂದು ಎಕರೆಗೆ ಸುಮಾರು 20 ಮರ ಬೆಳೆಸುವುದು ವಾಡಿಕೆ.10 ವರ್ಷದ ನಂತರ ಫಸಲು ಸಿಗುತ್ತದೆ. 30 ವರ್ಷ ಮೇಲ್ಪಟ್ಟ ಮರಗಳಲ್ಲಿ ಸರಾಸರಿ ₹2.5 ಕ್ವಿಂಟಲ್ ಇಳುವರಿ ಸಿಗುತ್ತದೆ. ಕಳೆದ ಬಾರಿ ತೋಪಿಗಿಂತಲೂ ಬಿಡಿ ಮರಗಳಲ್ಲಿಯೇ ಹೆಚ್ಚು ಫಸಲು ಸಿಕ್ಕಿತ್ತು. ಗ್ರಾಮೀಣ ಪ್ರದೇಶಗಳಲ್ಲಿ ಜನವರಿಯಿಂದ ಏಪ್ರಿಲ್‌ವರೆಗೆ ಮಹಿಳೆಯರಿಗೆ ಹುಣಸೆ ಸಂಸ್ಕರಣೆ ಪರ್ಯಾಯ ಉದ್ಯೋಗ ಮೂಲವೂ ಹೌದು.ಒಂದು ಕೆಜಿ ಹುಣಸೆ ಹಣ್ಣನ್ನು ಸಂಸ್ಕರಿಸಿದರೆ₹20 ಕೂಲಿ ಸಿಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT