ಮಂಗಳವಾರ, ಮಾರ್ಚ್ 31, 2020
19 °C
ರಾಜ್ಯದ ವಿವಿಧೆಡೆ ನಡೆದ ವಂಚನೆ ಪ್ರಕರಣಗಳಲ್ಲಿ ಬೇಕಾಗಿದ್ದ ಅಂತರ ರಾಜ್ಯ ಕಳ್ಳರ ಬಂಧನ

ತುಮಕೂರು: ಎಟಿಎಂ ಕಾರ್ಡ್‌ ಮಾಹಿತಿ ಕದ್ದು ಹಣ ಡ್ರಾ ಮಾಡುತ್ತಿದ್ದ ಜಾಲ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಸ್ಕಿಮ್ಮಿಂಗ್‌ ಸಾಧನದ ಮೂಲಕ ಎಟಿಎಂ ಕಾರ್ಡ್‌ಗಳ ದತ್ತಾಂಶವನ್ನು ಕದ್ದು ಗ್ರಾಹಕರ ಖಾತೆಯಿಂದ ಹಣ ಡ್ರಾ ಮಾಡಿಕೊಳ್ಳುತ್ತಿದ್ದ ಅಂತರರಾಜ್ಯ ಖದೀಮರನ್ನು ತುಮಕೂರಿನ ಸೈಬರ್‌ ಅಪರಾಧ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಇಬ್ಬರು ಆರೋಪಿಗಳಿಂದ ನಕಲಿ ಎಟಿಎಂ ಕಾರ್ಡ್‌ ಮಾಡಲು ಬಳಸುತ್ತಿದ್ದ ಎರಡು ತಾಂತ್ರಿಕ ಸಾಧನಗಳು, 2 ಲ್ಯಾಪ್‌ಟಾಪ್‌, 19 ಎಟಿಎಂ ಕಾರ್ಡ್‌ಗಳು ಹಾಗೂ ₹53,000 ನಗದನ್ನು ಜಪ್ತಿ ಮಾಡಲಾಗಿದೆ.

ಆರೋಪಿಗಳು ಉತ್ತರ ಪ್ರದೇಶಕ್ಕೆ ಸೇರಿದವರಾಗಿದ್ದಾರೆ. ಬಂಧಿತ ಬ್ರಿಜ್‌ ಬನ್‌ ಸರೋಜ್‌, ಹರಿಲಾಲ್‌ ಎಂಬುವರು ಸ್ಕಿಮ್ಮಿಂಗ್ ಸಾಧನವನ್ನು ಎಟಿಎಂಗಳಲ್ಲಿ ಅಳವಡಿಸಿ ಕಾರ್ಡ್‌ಗಳ ದತ್ತಾಂಶವನ್ನು ಕದ್ದು ತರುತ್ತಿದ್ದರು.

ಆ ಮಾಹಿತಿಯನ್ನು ರಾಹುಲ್‌, ಅಂಕಿತ್‌, ಅಂಕುಶ್‌, ರಾಹುಲ್‌ ಸರೋಜ್‌ ಎಂಬ ಆರೋಪಿಗಳು ತಂತ್ರಾಂಶಗಳ ಮೂಲಕ ಬೇರೆ ಕಾರ್ಡ್‌ಗಳಿಗೆ ವರ್ಗಾಯಿಸಿಕೊಂಡು ಹಣವನ್ನು ಡ್ರಾ ಮಾಡುತ್ತಿದ್ದರು. ಈ ನಾಲ್ವರು ಆರೋಪಿಗಳ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದಾರೆ.

ಈ ಕಳ್ಳಜಾಲವು ತಿಪಟೂರು, ಶಿರಾ, ಅರಸೀಕೆರೆ, ತುಮಕೂರಿನಲ್ಲಿ ಸಕ್ರಿಯವಾಗಿತ್ತು. ತಮ್ಮ ಗಮನಕ್ಕೆ ಬಾರದೆಯೇ ಎಟಿಎಂನಿಂದ ಹಣ ಡ್ರಾ ಆಗಿರುವ ಕುರಿತು ಈ ಪ್ರದೇಶಗಳ ಕೆಲವರು ದೂರುಗಳನ್ನು ದಾಖಲಿಸಿದ್ದರು. ದೂರದಾರರಾದ ತಿಪಟೂರಿನ ಎಚ್‌.ಕೆ.ಬಸವರಾಜು ₹13,000, ಹಾಲುಕುರಿಕೆಯ ಪರಮೇಶ್ವರಯ್ಯ ₹23,500, ದಿಬ್ಬೂರಿನ ಮೈಲಾರ್‌ ರಾವ್ ₹20,000, ತುಮಕೂರಿನ ಮಹಮ್ಮದ್‌ ಜಾಬೀರ್ ಹುಸೇನ್‌ ₹15,500 ಅನ್ನು ಈ ಜಾಲದ ಕೈ ಚಳಕದಿಂದ ಕಳೆದುಕೊಂಡಿದ್ದರು.

ಈ ಕುರಿತು ಮಾಹಿತಿ ಸಂಗ್ರಹಿಸಿ, ಕಾರ್ಯಾಚರಣೆಗೆ ಇದಳಿದ್ದ ತಂಡಕ್ಕೆ ತುಮಕೂರಿನ ಚರ್ಚ್‌ ಸರ್ಕಲ್‌ ಬಳಿಯ ಎಸ್‌.ಬಿ.ಐ. ಎಟಿಎಂ ಬಳಿ ಇಬ್ಬರು ಅನುಮಾನಸ್ಪದವಾಗಿ ನಿಂತಿದ್ದು ಗಮನಕ್ಕೆ ಬಂತು. ಕೈಯಲ್ಲಿ ಕೀಬಂಚ್‌ ತರಹದ ವಸ್ತುಗಳನ್ನು ಹಿಡಿದುಕೊಂಡು ನಿಂತಿದ್ದ ಅವರನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ಈ ಅಪರಾಧ ಜಾಲ ಪತ್ತೆಯಾಗಿದೆ.

ಇದೇ ಜಾಲದ ಸದಸ್ಯರು ಕಲಬುರ್ಗಿ, ರಾಯಚೂರು, ಕೊಪ್ಪಳ, ಬೆಳಗಾವಿ, ಯಾದಗಿರಿ, ಚಿತ್ರದುರ್ಗ, ದಾವಣಗೆರೆ, ಹಾವೇರಿ, ಶಿವಮೊಗ್ಗ, ಚಿಕ್ಕಮಗಳೂರು, ಧಾರವಾಡ ಜಿಲ್ಲೆಯ ಎಟಿಎಂಗಳಲ್ಲೂ ಸ್ಕಿಮ್ಮಿಂಗ್ ಸಾಧನ ಅಳವಡಿಸಿ ಹಣ ಡ್ರಾ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ವಂಶಿಕೃಷ್ಣ ಅವರು ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.

ಈ ಜಾಲ ಪತ್ತೆಯ ಕಾರ್ಯಾಚರಣೆಯಲ್ಲಿದ್ದ ಇನ್‌ಸ್ಪೆಕ್ಟರ್‌ ಎಂ.ವಿ.ಶೇಷಾದ್ರಿ, ಪಿಎಸ್‌ಐ ಶಮೀನ್‌, ಸಿಬ್ಬಂದಿಯಾದ ಆಯೂಬ್‌ ಜಾನ್‌, ಶಿವಶಂಕರಪ್ಪ, ಎನ್‌.ಪರಮೇಶ್ವರಯ್ಯ, ಮಲ್ಲೇಶಯ್ಯ, ರಮೇಶ್‌, ಮಂಜುನಾಥ್‌ ಅವರನ್ನು ಎಸ್ಪಿ ಅವರು ಶ್ಲಾಘಿಸಿದ್ದಾರೆ.

***

ಆಭರಣ ಕಳ್ಳನ ಬಂಧನ: 330 ಗ್ರಾಂ. ಚಿನ್ನ ವಶ

ತುಮಕೂರು ಜಿಲ್ಲೆಯ ವಿವಿಧೆಡೆಯ ಮನೆ, ಜಾತ್ರೆ, ಬಸ್‌ಗಳಲ್ಲಿ ನಡೆದ ಆಭರಣ ಕಳ್ಳತನ ಪ್ರಕರಣಗಳಲ್ಲಿ ಬೇಕಾಗಿದ್ದ ಅಶೋಕ್‌(32) ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಇತನಿಂದ ₹13.86 ಲಕ್ಷ ಮೌಲ್ಯದ 330 ಗ್ರಾಂ. ತೂಕದ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ. 

ತುರುವೇಕೆರೆಯ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಈತನನ್ನು ವಶಕ್ಕೆ ಪಡೆದು, ವಿಚಾರಿಸಿದಾಗ ತಾನು ಮಾಡಿದ್ದ ಕಳ್ಳತನಗಳ ಕುರಿತು ಬಾಯಿಬಿಟ್ಟಿದ್ದಾನೆ.

ಹಾಸನದ ಹೊಳೆನರಸಿಪುರ ತಾಲ್ಲೂಕಿನ ಮಳಲಿ ಗ್ರಾಮದವನಾದ ಈತ ತುರುವೇಕೆರೆಯಲ್ಲಿ ನಡೆದ 3 ಕಳ್ಳತನ, ತಿಪಟೂರು, ಹುಳಿಯಾರು, ಅಮೃತೂರು ಠಾಣೆಗಳಲ್ಲಿ ನಡೆದ ತಲಾ ಒಂದು ಪ್ರಕರಣಗಳಲ್ಲಿ ಬೇಕಾಗಿದ್ದ.

ಆರೋಪಿಯನ್ನು ಪತ್ತೆ ಮಾಡಿದ ತಂಡದಲ್ಲಿದ್ದ ತುರುವೇಕೆರೆಯ ಸರ್ಕಲ್‌ ಇನ್‌ಸ್ಪೆಕ್ಟರ್‌ ಲೋಕೇಶ್‌, ಸಿಬ್ಬಂದಿಯಾದ ಗೋವಿಂದರಾಜು, ರಮೇಶ್‌, ಮಧುಸೂಧನ್‌, ಮುತ್ತಣ್ಣ, ಕುಮಾರ್‌ ಅವರನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಭಿನಂದಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು