ಶನಿವಾರ, ನವೆಂಬರ್ 23, 2019
17 °C

ಕೆರೆಯಲ್ಲಿ ಕಾಲು ಜಾರಿ ಬಿದ್ದು ಇಬ್ಬರು ಮಕ್ಕಳ ಸಾವು

Published:
Updated:
Prajavani

ಕೊಡಿಗೇನಹಳ್ಳಿ (ಮಧುಗಿರಿ ತಾ): ಮಣ್ಣಿನಲ್ಲಿ ತಾವೇ ಮಾಡಿದ್ದ ಗಣೇಶ ಮೂರ್ತಿಯನ್ನು ಕೆರೆಯಲ್ಲಿ ಬಿಡಲು ಹೋದಾಗ ಜಾರಿ ಬಿದ್ದು ಅಣ್ಣ-ತಂಗಿ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ  ಸಮೀಪದ ಬ್ಯಾಲ್ಯ ಗ್ರಾಮದಲ್ಲಿ ಗುರುವಾರ ನಡೆದಿದೆ.

ದಿಲೀಪ್(11) ಹಾಗೂ ಅಶ್ವಿನಿ(8) ಮೃತಪಟ್ಟವರು. ಇಬ್ಬರೂ ಅಣ್ಣತಂಗಿಯಾಗಿದ್ದು, ಇವರು ಬಿ.ಎಂ. ನಾಗರಾಜು ಹಾಗೂ ಮದೂಡಮ್ಮ ದಂಪತಿ ಮಕ್ಕಳಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಮಕ್ಕಳಿಗೆ ಶಾಲೆ ದಸರಾ ರಜೆ  ಇದ್ದುದರಿಂದ ಆಟವಾಡಲು ಮಣ್ಣಿನಲ್ಲಿ ಗಣೇಶನ ಮೂರ್ತಿಯನ್ನು ತಯಾರಿಸಿದ್ದರು. ತಮಾಷೆಗೆ ಮನೆಯ ಸುತ್ತಮುತ್ತಲಿನ ಏಳೆಂಟು ಮಕ್ಕಳೊಂದಿಗೆ ಸೇರಿ ಮಣ್ಣಿನ ಗಣೇಶನನ್ನು ಕೆರೆಯಲ್ಲಿ ಬಿಡಲು ತೆರಳಿದ್ದಾಗ  ಈ ಇಬ್ಬರು ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ.

ಮೊದಲು ಬಾಲಕಿ ಅಶ್ವಿನಿ ಕೆರೆಯಲ್ಲಿ ಕಾಲು ಜಾರಿದ್ದಾಳೆ. ಆಕೆಯ ರಕ್ಷಣೆಗೆ ಅವರ ಅಣಣ್ಣ ದಿಲೀಪ್  ಮುಂದಾದಾಗ ಇಬ್ಬರು ಕೆರೆಯ ಗುಂಡಿಯಲ್ಲಿ ಕಾಲು ಜಾರಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಇಬ್ಬರೂ ಮಕ್ಕಳು ಮುಳುಗುತ್ತಿದ್ದುದನ್ನು ಕಂಡ ಇತರ ಮಕ್ಕಳು ಗ್ರಾಮದೊಳಗಡೆ ಬಂದು ಆ ಮಕ್ಕಳ ಪೋಷಕರಿಗೆ ತಿಳಿಸಲು ಹೋಗಿದ್ದಾರೆ. ಆದರೆ, ಅವರು ಕೂಲಿ ಕೆಲಸಕ್ಕೆ ಹೋಗಿದ್ದರಿಂದ ನಂತರ ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಗ್ರಾಮಸ್ಥರು ಹೋಗಿ ರಕ್ಷಣೆ ಮಾಡುವಷ್ಟರಲ್ಲಿ ಮಕ್ಕಳು ಮೃತಪಟ್ಟಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.

 ಕೆರೆಯ ಆಳ ಸುಮಾರು 13 ಅಡಿಗಿಂತ ಹೆಚ್ಚಾಗಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

‘ಬುಧವಾರ ರಾತ್ರಿ ಮನೆಯಲ್ಲಿ ಮಕ್ಕಳಿಗಾಗಿ ಸಿಹಿಯೂಟ ಮಾಡಿ ತಾವು ತಿಂದು ಬೆಳಿಗ್ಗೆ ಕೂಡ ಮಕ್ಕಳು ತಿನ್ನಲೆಂದು ತೆಗೆದಿಟ್ಟು ಕೂಲಿ ಕೆಲಸಕ್ಕೆ ತೆರಳಿದ್ದೆವು.ವಿಧಿಯಾಟ ನಮ್ಮ ಮಕ್ಕಳನ್ನು ಈ ರೀತಿ ಮಾಡಿದೆ ಎಂದು ತಾಯಿ ಮದೂಡಮ್ಮ, ತಂದೆ ನಾಗರಾಜು ರೋಧಿಸುತ್ತಿದ್ದುದು ನೆರೆದ ಜನರ ಹೃದಯ ಕಲಕಿತು.

ಮಧುಗಿರಿ  ಡಿವೈಎಸ್ಪಿ ಧರಣೇಶ್, ಕೊಡಿಗೇನಹಳ್ಳಿ  ಸಬ್‌ ಇನ್‌ಸ್ಪೆಕ್ಟರ್ ಪಾಲಾಕ್ಷಪ್ರಭು ಭೇಟಿ ನೀಡಿ ಪರಿಶೀಲಿಸಿದರು. ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)