ಸೋಮವಾರ, ನವೆಂಬರ್ 18, 2019
28 °C
ಜಿಲ್ಲಾ ಅಂಗವಿಕಲರ ಕಲ್ಯಾಣ ವೇದಿಕೆಯ ಒತ್ತಾಯ

ಯು.ಡಿ.ಐ. ಚೀಟಿ ಕೊಡಿಸಿ ಸ್ವಾಮಿ

Published:
Updated:

ತುಮಕೂರು: ಎಂ.ಆರ್‌.ಡಬ್ಲ್ಯೂ ಮತ್ತು ವಿ.ಆರ್‌.ಡಬ್ಲ್ಯೂ ಕಾರ್ಯಕರ್ತರಿಗೆ ಸೂಕ್ತ ತರಬೇತಿ ನೀಡಿ, ಅಂಗವಿಕಲರ ಗುರುತಿನ ಚೀಟಿ(ಯು.ಡಿ.ಐ.) ವಿತರಿಸುವ ಕಾರ್ಯವನ್ನು ಸರಳಿಕರಿಸಬೇಕು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣ ವೇದಿಕೆ ಅಧ್ಯಕ್ಷ ಸಿ.ಗಂಗರಾಜು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಅವರು ಬುಧವಾರ ಮಾತನಾಡಿದರು.

ಈ ಮೊದಲು 8 ವಿಧಗಳ ನ್ಯೂನ್ಯತೆಗಳಲ್ಲಿ ಒಂದನ್ನು ಹೊಂದಿದ್ದರೆ ಅಂಗವಿಕಲ ಎಂದು ಗುರುತಿಸಲಾಗುತ್ತಿತ್ತು. ಈಗ 21 ವಿಧಗಳ ನ್ಯೂನ್ಯತೆಗಳನ್ನು ಪಟ್ಟಿ ಮಾಡಲಾಗಿದೆ. ಅಂಗವಿಕಲರನ್ನು ಗುರುತಿಸುವ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರು (ಎಂ.ಆರ್‌.ಡಬ್ಲ್ಯೂ) ಮತ್ತು ಗ್ರಾಮದಲ್ಲಿನ ಪುನರ್ವಸತಿ ಕಾರ್ಯಕರ್ತರಿಗೆ(ವಿ.ಆರ್‌.ಡಬ್ಲ್ಯೂ) ಸೂಕ್ತ ತರಬೇತಿ ನೀಡಿಲ್ಲ. ಹಾಗಾಗಿ ಅವರು ಅಂಗವಿಕಲರನ್ನು ಗುರುತಿಸುವಲ್ಲಿ ಎಡುವುತ್ತಿದ್ದಾರೆ. ಇದರಿಂದ ಗುರುತಿನ ಚೀಟಿ ವಿತರಿಸುವ ಕಾರ್ಯವು ವಿಳಂಬ ಆಗುತ್ತಿದೆ ಎಂದು ದೂರಿದರು.

ಯು.ಡಿ.ಐ.ಗಾಗಿ ಅರ್ಜಿ ಸಲ್ಲಿಸಲು ಅಂಗವಿಕಲರು ಸೈಬರ್‌ ಕೇಂದ್ರಗಳಿಗೆ ಅಲೆಯಬೇಕಾಗಿದೆ. ಸುಮಾರು ₹ 400 ಖರ್ಚು ಮಾಡಬೇಕಿದೆ. ಇದನ್ನು ತಪ್ಪಿಸಲು ಪ್ರತಿ ತಾಲ್ಲೂಕು, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸೇವಾ ಕೇಂದ್ರಗಳನ್ನು ತೆರೆಯಬೇಕು. ಅಲ್ಲಿ ಕಂಪ್ಯೂಟರ್‌ ಬಲ್ಲ ಅಂಗವಿಕಲರನ್ನೆ ನಿಯೋಜಿಸಿಕೊಂಡು ಅರ್ಜಿಗಳನ್ನು ಸ್ವೀಕರಿಸಬೇಕು. ಇದರಿಂದ ಉದ್ಯೋಗವು ಸೃಷ್ಟಿಯಾಗುತ್ತದೆ ಎಂದರು. 

ಆನ್‌ಲೈನ್‌ ಮೂಲಕ ಸಲ್ಲಿಕೆಯಾದ ಅರ್ಜಿಗಳ ಅನುಸಾರ ಅಂಗವಿಕಲರನ್ನು ಜಿಲ್ಲಾ ಆಸ್ಪತ್ರೆಗೆ ಕರೆಸಿ, ವೈದ್ಯಕೀಯ ಪರೀಕ್ಷೆ ಮಾಡಿಸುವ ಪ್ರಕ್ರಿಯೆ ತಿಂಗಳುಗಟ್ಟಲೇ ವಿಸ್ತರಿಸುತ್ತಿದೆ. ಪುನರ್ವಸತಿ ಕಾರ್ಯಕರ್ತರು ಮತ್ತು ತಾಲ್ಲೂಕು ಕೇಂದ್ರಗಳಲ್ಲಿನ ಸರ್ಕಾರಿ ವೈದ್ಯರೇ ಪರೀಕ್ಷೆ ಮಾಡಿ, ಅಂಗವೈಕಲ್ಯದ ಪ್ರಮಾಣ ಪತ್ರ ವಿತರಿಸಿದರೆ, ವಿಳಂಬ ತಪ್ಪಲಿದೆ ಎಂದು ಅವರು ತಿಳಿಸಿದರು.

ಜಿಲ್ಲೆಯಲ್ಲಿ ಸುಮಾರು 65,000 ಅಂಗವಿಕಲರು ಇದ್ದಾರೆ. ಅದರಲ್ಲಿ 45,000 ಅಂಗವಿಕಲರ ಬಳಿ ಹಳೆಯ ಗುರುತಿನ ಚೀಟಿ ಇದೆ. ಅವರೆಲ್ಲರೂ ಯು.ಡಿ.ಐ. ಪಡೆಯಲು ಜಿಲ್ಲಾ ಕಚೇರಿಗಳಿಗೆ ಅಲೆಯಬೇಕಿದೆ. ಈ ಪ್ರಕ್ರಿಯೆಯನ್ನು ವಿಕೇಂದ್ರಿಕರಣ ಮಾಡಬೇಕು. ಇದರಿಂದ ಅಂಗವಿಕಲರಿಗೆ ಆಗುತ್ತಿರುವ ಓಡಾಟದ ತೊಂದರೆ, ಸಂಚಾರದ ಖರ್ಚು, ಸಮಯವೂ ಉಳಿತಾಯ ಆಗುತ್ತದೆ ಎಂದು ಹೇಳಿದರು.

ಯು.ಡಿ.ಐ. ಚೀಟಿ ಕೊಡಿಸಲು ದಲ್ಲಾಳಿಗಳು ಹುಟ್ಟಿಕೊಂಡಿದ್ದಾರೆ. ಇಲಾಖೆ ಅವರಿಗೆ ಕಡಿವಾಣ ಹಾಕಬೇಕು ಎಂದು ಅವರು ಒತ್ತಾಯಿಸಿದರು.

ವೇದಿಕೆಯ ಪ್ರಧಾನ ಕಾರ್ಯದರ್ಶಿ ಹಿನಾಯತ್‌ಖಾನ್‌, ಉಪಾಧ್ಯಕ್ಷ ನರಸಿಂಹರಾಜು, ಕಾರ್ಯದರ್ಶಿಗಳಾದ ಅಂಜನಮೂರ್ತಿ, ವರದರಾಜು ಇದ್ದರು.

ಪ್ರತಿಕ್ರಿಯಿಸಿ (+)