ತುಮಕೂರು: ಗುಬ್ಬಿ ತಾಲ್ಲೂಕು ಎಂ.ಎನ್.ಕೋಟೆಯ ಅಶೋಕ ರಸ್ತೆಯಲ್ಲಿರುವ ವಾಸವಿ ಹಾರ್ಡ್‌ವೇರ್ ಹಾಗೂ ಎಲೆಕ್ಟ್ರಿಕಲ್ ಮಳಿಗೆ ಮೇಲೆ ಕೃಷಿ ಇಲಾಖೆ ಜಾಗೃತ ದಳದ ಅಧಿಕಾರಿಗಳು ದಾಳಿ ಮಾಡಿ ಅನಧಿಕೃತವಾಗಿ ದಾಸ್ತಾನು ಮಾಡಿದ್ದ, ಅವಧಿ ಮೀರಿದ ಕೀಟನಾಶಕಗಳನ್ನು ಜಪ್ತಿ ಮಾಡಿದ್ದಾರೆ.
ಅಗತ್ಯ ದಾಖಲಾತಿ ಹಾಗೂ ಪರವಾನಗಿ ಇಲ್ಲದೆ ಮಾರಾಟ ಮಾಡಲು ದಾಸ್ತಾನು ಮಾಡಿದ್ದ ಮತ್ತು ಅವಧಿ ಮೀರಿದ ವಿವಿಧ ಕಂಪನಿಗಳ ₹22,500 ಮೌಲ್ಯದ 127 ಕೆ.ಜಿ ಕೀಟನಾಶಕ ವಶಕ್ಕೆ ತೆಗೆದುಕೊಂಡಿದ್ದಾರೆ. ಜಪ್ತಿ ಮಾಡಿದ ಕೀಟನಾಶಕಗಳ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.
ಪರಿಶೀಲನೆ ನಡೆಸಲು ಅಧಿಕಾರಿಗಳು ಮುಂದಾದಾಗ ಅದಕ್ಕೆ ಅಂಗಡಿ ಮಾಲೀಕರು ಅವಕಾಶ ನೀಡಿರಲಿಲ್ಲ. ಮಳಿಗೆಗೆ ಬೀಗ ಹಾಕಿ, ಮರುದಿನ ಜಪ್ತಿ ಮಾಡಿದ್ದಾರೆ.
ಸಹಾಯಕ ಕೃಷಿ ನಿರ್ದೇಶಕ (ಜಾರಿದಳ) ವೈ.ಅಶ್ವತ್ಥನಾರಾಯಣ, ಕೃಷಿ ಅಧಿಕಾರಿ (ಪ್ರಭಾರ) ಎಂ.ಆರ್.ಮಹದೇವಯ್ಯ, ಸಹಾಯಕ ತಾಂತ್ರಿಕ ವ್ಯವಸ್ಥಾಪಕರಾದ ಅಶ್ವಿನಿ ದಾಳಿಯಲ್ಲಿ ಭಾಗವಹಿಸಿದರು.