ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಸಿಯಾದ ಕೇಂದ್ರ ಸಚಿವ ಸ್ಥಾನ ನಿರೀಕ್ಷೆ

ಐದು ಬಾರಿ ಸಂಸದರಾದರೂ ಬಸವರಾಜ್ ಅವರಿಗೆ ದಕ್ಕದ ಕೇಂದ್ರ ಸಚಿವ ಸ್ಥಾನ, ಮುಖಂಡರು, ಕಾರ್ಯಕರ್ತರಲ್ಲಿ ಬೇಸರ
Last Updated 31 ಮೇ 2019, 10:08 IST
ಅಕ್ಷರ ಗಾತ್ರ

ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರದ ಸಂಸದ ಜಿ.ಎಸ್. ಬಸವರಾಜ್ ಅವರಿಗೆ ಕೇಂದ್ರ ಸಚಿವ ಸ್ಥಾನ ಸಿಗಲಿದೆ ಎಂಬ ಜಿಲ್ಲೆಯ ಅವರ ಅಭಿಮಾನಿಗಳು, ಬೆಂಗಲಿಗರು, ಪಕ್ಷದ ಮುಖಂಡರು, ಕಾರ್ಯಕರ್ತರ ನಿರೀಕ್ಷೆ ಹುಸಿಯಾಗಿದೆ.

ಜಿ.ಎಸ್. ಬಸವರಾಜ್ ಅವರು ಅತ್ಯಂತ ಹಿರಿಯರು. ರಾಜಕೀಯ ಮುತ್ಸದ್ಧಿಗಳು. 5ನೇ ಬಾರಿ ಸಂಸತ್‌ಗೆ ಆಯ್ಕೆಯಾಗಿದ್ದು, ಅವರಿಗೆ ಖಂಡಿತ ಕೇಂದ್ರ ಸಚಿವ ಸ್ಥಾನ ನಿಕ್ಕಿಯಾಗಿ ಸಿಗುತ್ತದೆ ಎಂದು ಅವರು ಗೆದ್ದ ದಿನವೇ (ಮೇ 23) ಮಾತುಗಳು ಕೇಳಿ ಬಂದಿದ್ದವು.

1984,1989,1999ರಲ್ಲಿ ಕಾಂಗ್ರೆಸ್ ಪಕ್ಷದಿಂದ, 2009ರಲ್ಲಿ ಬಿಜೆಪಿಯಿಂದ, 2019ರಲ್ಲಿ ಬಿಜೆಪಿಯಿಂದ ಸಂಸತ್‌ಗೆ ಆಯ್ಕೆಯಾಗಿದ್ದಾರೆ. ಸಂಸತ್‌ನ ಒಳಹೊರಗು, ಆಡಳಿತ ವೈಖರಿ, ಅಭಿವೃದ್ಧಿ ಪರ ದೂರದೃಷ್ಟಿಯುಳ್ಳವರಾಗಿದ್ದಾರೆ. ಅವರ ಸಾಮರ್ಥ್ಯವನ್ನು ಪಕ್ಷ ಗುರುತಿಸುತ್ತದೆ ಎಂದು ಪಕ್ಷದ ಮುಖಂಡರು ಹೇಳಿಕೊಂಡಿದ್ದರು.

ಯಾವ ಮಾನ ದಂಡದ ಮೇಲೆ?

ಸಂಸತ್‌ಗೆ ಹಿರಿಯ ಸದಸ್ಯರು, ಪಕ್ಷದ ಹಿರಿಯ ಮುಖಂಡರು, ಸಂಸದರಾಗಿ ಅಪಾರ ಅನುಭವ ಉಳ್ಳವರು. ಇನ್ನು ಜಾತಿ ಲೆಕ್ಕಾಚಾರಕ್ಕೆ ಬಂದರೆ ದಕ್ಷಿಣ ಕರ್ನಾಟಕದಲ್ಲಿ ಲಿಂಗಾಯತ ಕೋಟಾದಲ್ಲಿ ಸಚಿವ ಸ್ಥಾನ ಕೊಡಬೇಕೆಂದರೆ ಇವರಿಗೆ ಕೊಡಬೇಕು. ಇವರನ್ನ ಬಿಟ್ಟರೆ ಮತ್ಯಾರೂ ಇಲ್ಲ.

ಎಲ್ಲಕ್ಕಿಂತ ಮುಖ್ಯವಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನು 13,339 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ. ಮಾಜಿ ಪ್ರಧಾನಿಗಳು, ಅದೂ ಮೈತ್ರಿ ಅಭ್ಯರ್ಥಿ ಮುಂದೆ ಸೆಣಸಾಡಿ ಗೆಲ್ಲುವುದು ಸಾಮಾನ್ಯವೇ? ಇದೆಲ್ಲ ಅಂಶಗಳನ್ನು ಪರಿಗಣಿಸಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ಹಿರಿಯ ಮುಖಂಡರು ಗಮನಿಸಿರುತ್ತಾರೆ. ರಾಜ್ಯ ಘಟಕದ ಅಧ್ಯಕ್ಷರೂ ಬಸವರಾಜ್ ಅವರ ಆಡಳಿತ ಅನುಭವ, ಸಚಿವ ಸ್ಥಾನ ನೀಡುವುದರಿಂದ ಆಗುವ ರಾಜಕೀಯ ಲಾಭಗಳ ಬಗ್ಗೆ ಪಕ್ಷದ ವರಿಷ್ಠರಿಗೆ ಮಾಹಿತಿ ನೀಡಿರುತ್ತಾರೆ ಎಂದು ಪಕ್ಷದ ಮುಖಂಡರು ಅಪಾರ ಭರವಸೆಯಿಂದ ಹೇಳಿಕೊಂಡಿದ್ದರು.

ಆದರೆ, ಗುರುವಾರ ಮಧ್ಯಾಹ್ನದ ಹೊತ್ತಿಗೆ ಈ ನಿರೀಕ್ಷೆಗಳು ಹುಸಿಯಾಗಿವೆ. ದೆಹಲಿಯಲ್ಲೇ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಜಿ.ಎಸ್. ಬಸವರಾಜ್ ಅವರು ಸಚಿವ ಸ್ಥಾನಕ್ಕೆ ನಾನೂ ಒಬ್ಬ ಆಕಾಂಕ್ಷಿಯಾಗಿದ್ದೇನೆ? ನಾನೇಕೆ ಆಕಾಂಕ್ಷಿಯಾಗಬಾರದು? ಎಂದು ಪ್ರಶ್ನಿಸಿದ್ದರು.ಆದರೆ, ಅವರ ನಿರೀಕ್ಷೆ ಹುಸಿಯಾಗಿದೆ.

ವಯಸ್ಸಿನಲ್ಲಿ, ಅನುಭವದಲ್ಲಿ ಚಿಕ್ಕವರಾದವರಿಗೆ, ಬಲಿಷ್ಠರಲ್ಲದವರ ಮುಂದೆ ಗೆದ್ದವರಿಗೆ ಕೇಂದ್ರ ಸಚಿವ ಸ್ಥಾನಗಳು ಲಭಿಸಿವೆ. ಯಾವ ಉದ್ದೇಶಕ್ಕೆ ಬಸವರಾಜ್ ಅವರಿಗೆ ಸಚಿವ ಸ್ಥಾನ ನೀಡಿಲ್ಲವೊ ಗೊತ್ತಿಲ್ಲ. ಭವಿಷ್ಯದಲ್ಲಿ ಸಚಿವ ಸ್ಥಾನ ಕೊಡುವ ನಿರೀಕ್ಷೆ ಇದೆ ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ಹೇಳಿದರು.

ಐದು ಬಾರಿಯಾದರೂ ಅಧಿಕಾರ ಬಲ ಇಲ್ಲ: ಐದು ಬಾರಿ ಸಂಸದರಾದರೂ ಬಸವರಾಜ್ ಅವರಿಗೆ ಅಧಿಕಾರ ಬಲ ಇಲ್ಲ. ಬರೀ ಸಂಸತ್ ಸದಸ್ಯರಾಗಿ ಅಧಿಕಾರ ನಡೆಸಿಕೊಂಡು ಬಂದಿದ್ದಾರೆ. ಸಚಿವ ಸ್ಥಾನ ಲಭಿಸಿದರೆ ಕ್ಷೇತ್ರಕ್ಕೆ, ರಾಜ್ಯಕ್ಕೆ ಹೆಚ್ಚಿನ ಅನುಕೂಲತೆಗಳು ಆಗುತ್ತವೆ. ಅವರಿಗೆ ಸಚಿವ ಸ್ಥಾನ ಸಿಗಬೇಕಿತ್ತು ಎಂದು ಪಕ್ಷದ ಕಾರ್ಯಕರ್ತರು ಹೇಳುತ್ತಾರೆ.

ಎರಡುವರೆ ದಶಕದಲ್ಲಿ ಜಿಲ್ಲೆಗೆ ಪ್ರಾತಿನಿಧ್ಯ ಇಲ್ಲ: ಎರಡುವರೆ ದಶಕಗಳ ಹಿಂದೆ (ಪಿ.ವಿ.ನರಸಿಂಹರಾವ್ ಪ್ರಧಾನಿ ಆಗಿದ್ದಾಗ) ಸಂಸತ್ ಸದಸ್ಯರಾಗಿದ್ದ ಎಸ್. ಮಲ್ಲಿಕಾರ್ಜುನಯ್ಯ ಅವರು ಲೋಕಸಭಾ ಡೆಪ್ಯೂಟಿ ಸ್ಪೀಕರ್ ಆಗಿದ್ದರು. ಈ ಕ್ಷೇತ್ರದ ಪ್ರತಿನಿಧಿಗೆ ಎರಡುವರೆ ದಶಕದಲ್ಲಿ ಲಭಿಸಿದ ಮಹತ್ವದ ಹುದ್ದೆ ಇದು. ಮಲ್ಲಿಕಾರ್ಜುನ್ಯ ಅವರು ಈ ಹುದ್ದೆ ಅಲಂಕರಿಸಿದ್ದರು. ನಂತರ ಸಂಸದರಾವರಿಗೆ ಯಾವ ಉನ್ನತ ಸ್ಥಾನಗಳು ಲಭಿಸಿಲ್ಲ. ಬರೀ ಸಂಸತ್ ಸದಸ್ಯ ಸ್ಥಾನಕ್ಕೆ ಮಾತ್ರ ತೃಪ್ತಿಪಟ್ಟುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT