ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಎಂ.ಗೆಲ್ಲಿಸಲು ಜಾತಿಗೊಬ್ಬ ನಾಯಕರಿಂದ ಪ್ರಚಾರ

ಬಾದಾಮಿ ರೈತ ಸಮಾವೇಶದಲ್ಲಿ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಕುಮಾರಸ್ವಾಮಿ ಲೇವಡಿ
Last Updated 6 ಮೇ 2018, 6:57 IST
ಅಕ್ಷರ ಗಾತ್ರ

ಬಾದಾಮಿ: ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದಲ್ಲಿ ಹೊರಗಿನ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಇವರನ್ನು ಆಯ್ಕೆಮಾಡಿದರೆ ರಾಜೀನಾಮೆ ಕೊಟ್ಟು ಹೋಗುವರು ನಿಮ್ಮ ಪರಿಸ್ಥಿತಿ ಏನು ಎಂಬುವುದನ್ನು ವಿಚಾರಿಸಿ ಸ್ಥಳೀಯ ಯುವಕ ಜೆಡಿಎಸ್‌ ಪಕ್ಷದ ಅಭ್ಯರ್ಥಿ ಹನುಮಂತ ಮಾವಿನಮರದಗೆ ಬೆಂಬಲಿಸಿ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಇಲ್ಲಿನ ಬನಶಂಕರಿ ರಸ್ತೆಯ ಪಕ್ಕದಲ್ಲಿ ಶುಕ್ರವಾರ ಬಾದಾಮಿ ವಿಧಾನಸಭಾ ಮತಕ್ಷೇತ್ರದಲ್ಲಿ ರೈತರ ಸಮಾವೇಶ ಮತ್ತು ಜೆಡಿಎಸ್‌ ಪಕ್ಷದ ಅಭ್ಯರ್ಥಿ ಹನುಮಂತ ಮಾವಿನಮರದ ಚುನಾವಣಾ ಪ್ರಚಾರ ಸಮಾರಂಭದಲ್ಲಿ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.

ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಕ್ಷೇತ್ರದ ಅಭಿವೃದ್ಧಿಗಾಗಿ ಬಂದಿಲ್ಲ ಜಾತಿ ಮತ್ತು ಹಣದ ಬಲದಿಂದ ಇಲ್ಲಿ ಸ್ಪರ್ಧಿಸಿದ್ದಾರೆ ಎಂದು ಟೀಕಿಸಿದರು.

‘ಮುಖ್ಯಮಂತ್ರಿ ಸೋಲುವ ಭೀತಿಯಿಂದ ಈ ಕ್ಷೇತ್ರದಲ್ಲಿ ಜಾತಿಗೊಬ್ಬ ನಾಯಕರು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದರಾಮಯ್ಯ 25 ವರ್ಷ ಚಾಮುಂಡಿ ಕ್ಷೇತ್ರದಲ್ಲಿ ಆಯ್ಕೆಯಾಗಿದ್ದಾರೆ. ಅಲ್ಲಿ ಏನೂ ಅಭಿವೃದ್ಧಿ ಮಾಡಿಲ್ಲ. ಚಾಮುಂಡಿ ಕ್ಷೇತ್ರವನ್ನು ಬಿಟ್ಟು ಬೇರೆ ಕಡೆಗೆ ಹೋಗುವುದಿಲ್ಲ ಎಂದವರು ಚಾಮುಂಡಿ ಕ್ಷೇತ್ರದಲ್ಲಿ ಸೋಲಿನ ಭಯದಿಂದ ಹೆದರಿ ಬಾದಾಮಿ ಕ್ಷೇತ್ರಕ್ಕೆ ಜಾತಿ ಬಲದಿಂದ ಬಂದಿದ್ದಾರೆ. ಬಳ್ಳಾರಿಯ ಶ್ರೀರಾಮುಲು ಸಿದ್ದರಾಮಯ್ಯ ಅವರನ್ನು ಸೋಲಿಸಲು ಬಂದಿದ್ದಾರೆ. ಅಭಿವೃದ್ಧಿ ಮಾಡಲು ಬಂದಿಲ್ಲ. ಇವರೇನು ಅಭಿವೃದ್ಧಿ ಮಾಡಬಲ್ಲರು ಎಂಬುವುದನ್ನು ಮತದಾರರು ಯೋಚಿಸಬೇಕಿದೆ’ ಎಂದರು.

ಕಾಂಗ್ರೆಸ್‌, ಬಿಜೆಪಿ ಲೂಟಿಕೋರರು ಎಂದು ಪರಸ್ಪರ ಮೂದಲಿಸುತ್ತಾರೆ. ಎರಡೂ ಪಕ್ಷದವರು ಜನತೆಯ ತೆರಿಗೆ ಹಣವನ್ನು ಲೂಟ ಮಾಡಿ ಚುನಾವಣೆಯಲ್ಲಿ ನಿಮ್ಮನ್ನು ಖರೀದಿ ಮಾಡುತ್ತಾರೆ. ಆದ್ದರಿಂದ ಮತದಾರರು ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದರು.

ಮಾಧ್ಯಮದವರ ಮೇಲೆ ಕೋಪ: ‘ಸ್ಥಳೀಯ ಮಾಧ್ಯಮದವರಿಗೆ ಹನುಮಂತ ಮಾವಿನ ಮರದ ಹೇಗೆ ಎಂಬುವುದು ಗೊತ್ತಿದೆ. ಆದರೆ ಬೆಂಗಳೂರಿನ ಮಾಧ್ಯಮದವರಿಗೆ ಗೊತ್ತಿಲ್ಲ. ಕಾಂಗ್ರೆಸ್‌ ಪಕ್ಷದ ಜೊತೆಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಗುಲ್ಲೆಬ್ಬಿಸಿದ್ದಾರೆ. ಮಾವಿನಮರದ ಅವರ ಶಕ್ತಿ ಅವರಿಗೇನು ಗೊತ್ತು. ಹಣಕ್ಕೆ ಮಾರಾಟವಾಗುವ ವ್ಯಕ್ತಿಯಲ್ಲ. ಬಾದಾಮಿ ಕ್ಷೇತ್ರದಲ್ಲಿ ಗಂಡಸಾಗಿ ಸಾಬೀತು ಮಾಡಿದ್ದಾರೆ. ಒಂದು ವರ್ಷದಿಂದ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಇವರು ಹೇಗೆ ಒಳ ಒಪ್ಪಂದ ಮಾಡಿಕೊಳ್ಳಲು ಸಾಧ್ಯ’ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

‘ಹನುಮಂತ ಮಾವಿನಮರದ ಅವರನ್ನು ಆರಿಸಿ ಕಳಿಸಿ ಇವರನ್ನು ಸಚಿವರನ್ನಾಗಿ ಮಾಡುತ್ತೇನೆ’ ಎಂದಾಗ ಸಭಿಕರು ಕೇಕೆ ಚಪ್ಪಾಳೆ ಹಾಕಿದರು.

‘ರಾಜ್ಯದಲ್ಲಿ ಜೆಡಿಎಸ್‌ ಪಕ್ಷವು ಅಧಿಕಾರಕ್ಕೆ ಬರುತ್ತದೆ. ಕಾಂಗ್ರೆಸ್‌ ಮತ್ತು ಬಿಜೆಪಿ ತಪ್ಪು ಸಮೀಕ್ಷೆ ಮಾಡಿಸಿ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷದ ಬಲ ಕುಗ್ಗುವಂತೆ ಮಾಡಿದ್ದಾರೆ. ಚುನಾವಣೆಯ ನಂತರ ಇವರಿಬ್ಬರೂ ಜೆಡಿಎಸ್‌ ಮನೆ ಬಾಗಿಲು ತಟ್ಟಬೇಕು’ ಎಂದು ಕುಮಾರಸ್ವಾಮಿ ತಿರುಗೇಟು ನೀಡಿದರು.

‘ವರ್ಷದಿಂದ ಮತಕ್ಷೇತ್ರದಲ್ಲಿ ಪಕ್ಷದ ಪ್ರಚಾರ ಮಾಡಿದ್ದೇನೆ. ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವೆ. ನಿಮ್ಮ ಮನೆಯ ಮಗನಿಗೆ ಮತ ಹಾಕಿ ಆಶೀರ್ವಾದ ಮಾಡಿ’ ಎಂದು ಜೆಡಿಎಸ್‌ ಪಕ್ಷದ ಅಭ್ಯರ್ಥಿ ಹನುಮಂತ ಮಾವಿನಮರದ ವೇದಿಕೆಯ ಮೇಲಿಂದ ಜನತೆಗೆ ನಮಸ್ಕರಿಸಿದರು. ಮುಖಂಡರಾದ ಬಸವರಾಜ ಹೊರಟ್ಟಿ, ಶರವಣ, ಶಾಹೀದಾ ಕೌಸರ್, ಘನಶ್ಯಾಮ ಭಾಂಡಗೆ, ಮೋಹಿನುದ್ದೀನ್ ಅಲ್ತಾಫ್, ರವಿ ಹುಣಶ್ಯಾಳ, ಎಂ.ಎಸ್‌.ಹಿರೇಹಾಳ  ಇದ್ದರು.

**
ಜಾತಿ, ಹಣದ ಬಲದಿಂದ ಸ್ಪರ್ಧಿಸಿ ಕ್ಷೇತ್ರ ಬಿಟ್ಟು ಹೋಗುವ ನಾಯಕರ ಬದಲಿಗೆ ಸ್ಥಳೀಯ ಅಭ್ಯರ್ಥಿ ಹನಮಂತ ಮಾವಿನಮರದವರನ್ನು ಗೆಲ್ಲಿಸಿ
- ಕುಮಾರಸ್ವಾಮಿ, ಅಧ್ಯಕ್ಷ, ಜೆಡಿಎಸ್ ರಾಜ್ಯ ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT