ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರಟಗೆರೆ: ಅಕ್ರಮ ಗಣಿಗಾರಿಕೆ ಅವ್ಯಾಹತ

ದಾಖಲೆಗಳಿಗೆ ಸೀಮಿತವಾದ ನಿಯಮ: ಸ್ಥಳೀಯರ ನಿತ್ಯ ಗೋಳು
Last Updated 5 ಮಾರ್ಚ್ 2021, 3:55 IST
ಅಕ್ಷರ ಗಾತ್ರ

ಕೊರಟಗೆರೆ: ತಾಲ್ಲೂಕಿನಲ್ಲಿ ಕಲ್ಲು ಗಣಿಗಾರಿಕೆ ಹಾಗೂ ಜಲ್ಲಿ ಕ್ರಷರ್‌ಗಳು ಅವ್ಯಾಹತವಾಗಿ ನಡೆಯುತ್ತಿದೆ.

ಚನ್ನರಾಯನದುರ್ಗ ಹೋಬಳಿ ಯಲ್ಲಿ ಖನಿಜ ಸಂಪತ್ತು ನಿತ್ಯ ಲೂಟಿಯಾಗುತ್ತಿದೆ. ಏಳೆಂಟು ವರ್ಷಗಳ ಹಿಂದೆ ಈ ಭಾಗದಲ್ಲಿನ ಕಲ್ಲುಗಣಿಗಾರಿಕೆ ಪ್ರಾರಂಭವಾಗಿದ್ದು, ಇಲ್ಲಿನ ಬೆಟ್ಟಗುಡ್ಡಗಳು ಕರಗುತ್ತಿವೆ.

ಬಹುತೇಕ ಕಲ್ಲುಗಣಿಗಾರಿಕೆ ಹಾಗೂ ಕ್ರಷರ್‌ಗಳಲ್ಲಿ ಸರ್ಕಾರದ ನಿಯಮಗಳು ಕೇವಲ ಕಾಗದ ಪತ್ರಗಳಲ್ಲಿ ಸೀಮಿತವಾಗಿದೆ. ಆದೇಶಗಳನ್ನು ಗಾಳಿಗೆ ತೂರಲಾಗಿದೆ. ಇದರಿಂದಾಗಿ ಸ್ಥಳೀಯ ನಿವಾಸಿಗಳು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ.

ಬಂಡೆ ಸಿಡಿಸಲು ಬಳಸುವ ಜಿಲೆಟಿನ್‌ನಿಂದಾಗಿ ವಿಪರೀತ ಶಬ್ಧ, ದೂಳು ಹೊರಬರುತ್ತದೆ. ಕುಡಿಯುವ ನೀರು ಮಲಿನವಾಗುತ್ತಿದೆ. ದೂಳಿನಿಂದಾಗಿ ಅಸ್ತಮಾ ಸೇರಿದಂತೆ ಉಸಿರಾಟದ ತೊಂದರೆಗಳಿಗೆ ತುತ್ತಾಗುವಂತಾಗಿದೆ. ಜಿಲೆಟಿನ್‌ ಸೇರಿದಂತೆ ಯಾವುದೇ ಸ್ಫೋಟಕಗಳಿಗೆ ಭದ್ರತೆ ಇಲ್ಲ. ಬಯಲಿನಲ್ಲಿ ಶೇಖರಣೆ ಮಾಡಲಾಗುತ್ತದೆ. ಕಲ್ಲುಬಂಡೆ ಸ್ಫೋಟದ ವೇಳೆ ಸಿಡಿದ ಬಂಡೆ ಚೂರು ಅಕ್ಕಪಕ್ಕದ ವ್ಯವಸಾಯ ಭೂಮಿಗಳಿಗೆ ಸಿಡಿಯುತ್ತವೆ. ಹಾಗೂ ಇದರಿಂದ ಹೊರಹೊಮ್ಮುವ ದೂಳು ಕೂಡ ವ್ಯವಸಾಯದ ಭೂಮಿಯಲ್ಲಿನ ಬೆಳೆಗಳ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಬಂಡೆ ಸಿಡಿದು ಕಾರ್ಮಿಕರು ಮೃತಪಟ್ಟಿರುವ ನಿದರ್ಶನಗಳು ಸಾಕಷ್ಟಿವೆ.

ಕ್ರಷರ್‌ಗಳಲ್ಲಿ ಅಕ್ರಮ ನಡೆಯುತ್ತಿದ್ದರೂ, ಜಿಲ್ಲೆಯ ಅಧಿಕಾರಿಗಳು ತಲೆಕೆಡಿಸಿಕೊಳ್ಳುತ್ತಿಲ್ಲ. ಆಗೊಮ್ಮೆ ಈಗೊಮ್ಮೆ ನೆಪಮಾತ್ರಕ್ಕೆ ಭೇಟಿ ನೀಡಿ ಸಾರ್ವಜನಿಕರ ಕಣ್ಣೊರೆಸುತ್ತಿದ್ದಾರೆ. ಕ್ರಷರ್‌ಗಳಲ್ಲಿ ಅಕ್ರಮ ಜಿಲೆಟಿನ್ ದಾಸ್ತಾನು ಇಟ್ಟಿರುವ ಬಗ್ಗೆ ಹಾಗೂ ನಿಯಮ ಉಲ್ಲಂಘನೆ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಇದ್ದರೂ ಕ್ರಮವಹಿಸುತ್ತಿಲ್ಲ ಎನ್ನುತ್ತಾರೆ ಸ್ಥಳೀಯರು.

ಕ್ರಷರ್‌ಗಳಲ್ಲಿ ಮಾಲಿನ್ಯ ಇಲಾಖೆ ನಿಯಮಗಳನ್ನು ಗಾಳಿಗೆ ತೂರಿದ್ದರೂ, ಜಿಲ್ಲೆಯ ಮಾಲಿನ್ಯ ನಿಯಂತ್ರಣ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ. ಶಬ್ಧ, ವಾಯು, ಪರಿಸರ ಮಾಲಿನ್ಯ ನಡೆಯುತ್ತಿದ್ದರೂ ಯಾವುದೇ ಕ್ರಷರ್ ವಿರುದ್ಧ ಪ್ರಕರಣ ದಾಖಲಾಗಿಲ್ಲ.

ಕಾರ್ಮಿಕರಿಗೆ ಭದ್ರತೆ ಇಲ್ಲ: ತಾಲ್ಲೂಕಿನ ಬಹುತೇಕ ಕ್ರಷರ್‌ಗಳಲ್ಲಿ ಕೆಲಸ ಮಾಡುತ್ತಿರುವವರು ಹೊರ ರಾಜ್ಯದವರು. ಇಲ್ಲಿನ ಕಾರ್ಮಿಕರಿಗೆ ಗಣಿ ಮಾಲೀಕರು ಯಾವುದೇ ಭದ್ರತೆ ಒದಗಿಸುತ್ತಿಲ್ಲ. ಕಾರ್ಮಿಕ ಇಲಾಖೆ ಪ್ರಕಾರ ಯಾವುದೇ ಸವಲತ್ತುಗಳನ್ನೂ ಒದಗಿಸುತ್ತಿಲ್ಲ. ಹೀಗಿದ್ದರೂ ಕಾರ್ಮಿಕ ಇಲಾಖೆ ಯಾವುದೇ ಕ್ರಮ ವಹಿಸಿಲ್ಲ ಎಂಬ ಆರೋಪಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT