ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರ ಜೀವ ಉಳಿಸಿದ ಲಸಿಕೆ

‘ರಕ್ಷಣೆ’ಗೆ ನಿಂತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಂಶಿಕೃಷ್ಣ
Last Updated 3 ಮೇ 2021, 3:44 IST
ಅಕ್ಷರ ಗಾತ್ರ

ತುಮಕೂರು: ಜನರ ಜತೆಗೆ ಸಂಪರ್ಕದಲ್ಲಿ ಇರುವ ಬಹುತೇಕ ಇಲಾಖೆಗಳ ಅಧಿಕಾರಿಗಳು, ನೌಕರ ವರ್ಗದವರಲ್ಲಿ ಒಬ್ಬರಲ್ಲ ಒಬ್ಬರಿಗೆ ಕೊರೊನಾ ಸೋಂಕು ಕಾಡುತ್ತಿದೆ. ಸಾವಿನ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ದೊಡ್ಡ ಸಂಖ್ಯೆಯಲ್ಲಿ ಜನರ ಜತೆಗೆ ಸಂಪರ್ಕದಲ್ಲಿ ಇರುವ ಪೊಲೀಸರಿಗೂ ಕೋವಿಡ್–19 ಕಾಡುತ್ತಿದ್ದರೂ ಲಸಿಕೆ ಪಡೆದ ಪರಿಣಾಮ ಸಾವಿನ ದವಡೆಯಿಂದ ಪಾರಾಗಿದ್ದಾರೆ.

ಅಂಚೆ ಇಲಾಖೆ, ಶಿಕ್ಷಕರು, ನಗರ ಸ್ಥಳೀಯ ಸಂಸ್ಥೆ, ಪೌರಕಾರ್ಮಿಕರು, ವೈದ್ಯರು, ನರ್ಸ್, ವೈದ್ಯಕೀಯ ಸಿಬ್ಬಂದಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಸೇರಿದಂತೆ ಹಲವರು ಕೊರೊನಾ ಸೋಂಕಿಗೆ ತುತ್ತಾಗುತ್ತಿದ್ದಾರೆ. ಕೋವಿಡ್ ಕೆಲಸದಲ್ಲಿ ತೊಡಗಿಸಿಕೊಂಡವರಿಗೆ ಸೋಂಕಿನ ಜತೆಗೆ ಸಾವು ಸಂಭವಿಸುತ್ತಿರುವುದು ಆತಂಕವನ್ನು ಹೆಚ್ಚಿಸಿದೆ. ಪೊಲೀಸ್ ಇಲಾಖೆಯಲ್ಲೂ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ನಾಲ್ಕು ದಿನಗಳಲ್ಲಿ 20ಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದೆ. ಆದರೆ ಮುನ್ನೆಚ್ಚರಿಕೆ ವಹಿಸಿದ್ದು, ಜೀವ ರಕ್ಷಿಸಿದೆ.

ಕರ್ಫ್ಯೂ, ಲಾಕ್‌ಡೌನ್ ಸೇರಿದಂತೆ ಭದ್ರತೆ, ಕಾನೂನು ಸುವ್ಯವಸ್ಥೆ ಕಾಪಾಡುವ ಸಮಯದಲ್ಲಿ ಪೊಲೀಸರು ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಇಂತಹ ಸಮಯದಲ್ಲಿ ಎಷ್ಟೇ ಎಚ್ಚರ ವಹಿಸಿದರೂ ಸೊಂಕು ತಗುಲುವುದರಿಂದ ತಪ್ಪಿಸಿಕೊಳ್ಳುವುದು ಕಷ್ಟಕರ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಮುಂದಾಲೋಚನೆಯಿಂದ ಕೈಗೊಂಡ ಕ್ರಮಗಳಿಂದಾಗಿ ಪೊಲೀಸರು ಜೀವ ತೆರುವುದರಿಂದ ಪಾರಾಗಿದ್ದಾರೆ.

ಜಿಲ್ಲೆಯಲ್ಲಿ ಅಧಿಕಾರಿಗಳು, ಪೊಲೀಸರು ಸೇರಿದಂತೆ ಒಟ್ಟು 1996 ಸಿಬ್ಬಂದಿ ಇದ್ದಾರೆ. ಅವರಲ್ಲಿ 1904 ಮಂದಿಗೆ ಲಸಿಕೆ ಸಿಗುವಂತೆ ನೋಡಿಕೊಂಡಿದ್ದಾರೆ. 92 ಮಂದಿಗೆ ವೈದ್ಯಕೀಯ ಕಾರಣಕ್ಕೆ ಲಸಿಕೆ ಹಾಕಿಸಿಲ್ಲ. ಮೊದಲ ಹಾಗೂ ಎರಡನೇ ಹಂತದ ಲಸಿಕೆ ಹಾಕಿಸಲಾಗಿದೆ. ಎಲ್ಲಾ ಠಾಣೆ, ಪೊಲೀಸರಿಗೆ ಮಾಸ್ಕ್, ಸ್ಯಾನಿಟೈಸರ್ ವ್ಯವಸ್ಥೆ ಮಾಡಿಸಿದ್ದಾರೆ. ಮುನ್ನೆಚ್ಚರಿಕೆ ವಹಿಸುವ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಎಷ್ಟೇ ಎಚ್ಚರವಿದ್ದರೂ ಸೊಂಕು ತಗುಲುವುದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಈವರೆಗೆ 112 ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದ್ದು, 110 ಮಂದಿ ಹೋಮ್ ಕ್ವಾರಂಟೈನ್‌ನಲ್ಲಿ ಇದ್ದಾರೆ. ಇಬ್ಬರು ಮಾತ್ರ ಕೋವಿಡ್ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

‘ಜೂಮ್’ ಆ್ಯಪ್ ಮೂಲಕ ವಿಡಿಯೋ ಕಾನ್ಫರೆನ್ಸ್ ನಡೆಸಿ ಸೋಂಕು ತಗುಲಿದ ಸಿಬ್ಬಂದಿಗೆ ಧೈರ್ಯ ತುಂಬುವ ಕೆಲಸದಲ್ಲಿ ಎಸ್‌ಪಿ ನಿರತರಾಗಿದ್ದಾರೆ. ಸೋಂಕಿತರ ಕುಟುಂಬದವರಿಗೂ ನೈತಿಕ ಬೆಂಬಲ ವ್ಯಕ್ತಪಡಿಸಿದ್ದಾರೆ. ಜತೆಗೆ ವಾರ್‌ರೂಮ್ ತೆರೆದು ಪ್ರತಿ ದಿನವೂ ಪೊಲೀಸರ ಆರೋಗ್ಯ ವಿಚಾರಿಸಲು ವ್ಯವಸ್ಥೆ ಮಾಡಿದ್ದಾರೆ. ಆರೋಗ್ಯ ಸಮಸ್ಯೆ ಇದ್ದರೆ ವೈದ್ಯರ ನೆರವು ದೊರಕಿಸಿಕೊಡಲಾಗುತ್ತಿದೆ. ಪೊಲೀಸರ ಕುಟುಂಬಗಳಲ್ಲಿ 45 ವರ್ಷಕ್ಕಿಂತ ಮೇಲ್ಪಟ್ಟವರು ಲಸಿಕೆ ಪಡೆದಿರುವ ವಿವರ, ಲಸಿಕೆ ಪಡೆಯಬೇಕಾದ 18 ವರ್ಷಕ್ಕಿಂತ ಮೇಲ್ಪಟ್ಟವರ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT