ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯಮಂತ್ರಿ ವಿರುದ್ಧ ಅಸಮಾಧಾನವಿಲ್ಲ: ಸಿ.ಎಸ್‌.ಪುಟ್ಟರಾಜು

Last Updated 9 ಜೂನ್ 2018, 8:19 IST
ಅಕ್ಷರ ಗಾತ್ರ

ಮಂಡ್ಯ: ‘ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಮೇಲೆ ನನಗೆ ಅಸಮಾಧಾನವಿಲ್ಲ. ಸಣ್ಣ ನೀರಾವರಿ ಖಾತೆ ನೀಡಿರುವುದಕ್ಕೆ ಬೆಂಬಲಿಗರು ಬೇಸರಗೊಂಡಿದ್ದಾರೆ. ಸಚಿವ ಸ್ಥಾನ ತ್ಯಜಿಸುವಂತೆ ಒತ್ತಾಯ ಮಾಡುತ್ತಿದ್ದಾರೆ. ಈಗ ಅವರನ್ನು ಸಮಾಧಾನ ಮಾಡಿದ್ದೇನೆ. ಯಾವುದೇ ಗೊಂದಲವಿಲ್ಲ’ ಎಂದು ಸಚಿವ ಸಿ.ಎಸ್‌.ಪುಟ್ಟರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

ಮೈಸೂರು ಜಿಲ್ಲೆ, ಟಿ.ನರಸೀಪುರ ತಾಲ್ಲೂಕು ಮೂಗೂರು ಗ್ರಾಮದ ತ್ರಿಪುರ ಸುಂದರಿ ದೇವರಿಗೆ ಪೂಜೆ ಸಲ್ಲಿಸಲು ಶುಕ್ರವಾರ ರಾತ್ರಿಯೇ ತೆರಳಿದ್ದ ಅವರು ಶನಿವಾರ ಮಧ್ಯಾಹ್ನದವರೆಗೂ ಮೂಗೂರು ಗ್ರಾಮದಲ್ಲೇ ಉಳಿದಿದ್ದರು.

ದೂರವಾಣಿ ಮೂಲಕ ಮಾತನಾಡಿದ ಅವರು ‘ಸಚಿವನಾದ ನಂತರ ನನ್ನ ಮನೆ ದೇವರು ತ್ರಿಪುರ ಸುಂದರಿ ಅಮ್ಮನವರಿಗೆ ಪೂಜೆ ಸಲ್ಲಿಸಲು ಮೂಗೂರು ಗ್ರಾಮಕ್ಕೆ ಬಂದಿದ್ದೇನೆ. ಸಣ್ಣ ನೀರಾವರಿ ಖಾತೆ ನೀಡಿರುವುದಕ್ಕೆ ನನಗೆ ಬೇಸರವಿಲ್ಲ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಬೇಕು ಎಂಬುದು ನಮ್ಮೆಲ್ಲರ ಉದ್ದೇಶವಾಗಿತ್ತು. ಅದರಂತೆ ಮುಖ್ಯಮಂತ್ರಿಯಾಗಿದ್ದಾರೆ. ನಾನು ಸಚಿವ ಸ್ಥಾನ ನೀಡುವಂತೆ ಮನವಿಯನ್ನೂ ಮಾಡಿರಲಿಲ್ಲ. ಆದರೂ ಸ್ಥಾನ ನೀಡಿದ್ದಾರೆ, ಸಣ್ಣದು, ದೊಡ್ಡದು ಎಂದು ತಾರತಮ್ಯ ಮಾಡುವುದಿಲ್ಲ. ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಎಲ್ಲೂ ಹೇಳಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನವನ್ನೂ ನಾನು ಕೇಳಿಲ್ಲ. ಮದ್ದೂರು ಶಾಸಕ ಡಿ.ಸಿ.ತಮ್ಮಣ್ಣ ಅವರಿಗೆ ಸಾರಿಗೆ ಸಚಿವ ಸ್ಥಾನ ನೀಡಿರುವುದಕ್ಕೂ ನನಗೆ ಅಸಮಾಧಾನವಿಲ್ಲ. ಪಕ್ಷ ನೀಡಿರುವ ಹೊಣೆಯನ್ನು ಜವಾಬ್ದಾರಿಯಿಂದ ನಿರ್ವಹಣೆ ಮಾಡುತ್ತೇನೆ. ಶಾಂತಿಯಿಂದ ಇರುವಂತೆ ನನ್ನ ಬೆಂಬಲಿಗರಿಗೆ ಸೂಚನೆ ನೀಡಿದ್ದೇನೆ. ಶಾಸಕನಾಗಿದ್ದಕೊಂಡೇ ಜನರ ಸೇವೆ ಮಾಡಬಹುದು. ಸಾರಿಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ಯಾವುದೇ ಬೇಸರ ಇಲ್ಲ’ ಎಂದು ಹೇಳಿದರು.

ಅಂತರ ಕಾಯ್ದುಕೊಂಡಿಲ್ಲ
‘ನಾನೆಲ್ಲೂ ಅಜ್ಞಾತ ಸ್ಥಳಕ್ಕೆ ಹೋಗಿಲ್ಲ. ನನ್ನ ಮನೆ ದೇವರ ಸನ್ನಿಧಾನಕ್ಕೆ ಪೂಜೆ ಸಲ್ಲಿಸಲು ಬಂದಿದ್ದೇನೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಂದ ಅಂತರ ಕಾಯ್ದುಕೊಳ್ಳುವ ಪ್ರಶ್ನೆಯೇ ಇಲ್ಲ. ಅವರನ್ನು ಶೀಘ್ರ ಭೇಟಿ ಮಾಡುತ್ತೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT