ಮೊದಲು ಮೀಸಲಾತಿ, ಬಳಿಕ ವಾಲ್ಮೀಕಿ ಜಯಂತಿ

7
ವಾಲ್ಮೀಕಿ ಸಮುದಾಯದ ಮುಖಂಡರ ಸಭೆಯಲ್ಲಿ ಕುಪ್ಪೂರು ಶ್ರೀಧರನಾಯಕ ಒತ್ತಾಯ

ಮೊದಲು ಮೀಸಲಾತಿ, ಬಳಿಕ ವಾಲ್ಮೀಕಿ ಜಯಂತಿ

Published:
Updated:

ತುಮಕೂರು: ಕೇಂದ್ರ ಸರ್ಕಾರದ ಮಾದರಿಯಲ್ಲಿ ಪರಿಶಿಷ್ಟ ಪಂಗಡ ಸಮುದಾಯಕ್ಕೆ ಶೇ 7.5ರ ಮೀಸಲಾತಿಯನ್ನು ಜಾರಿಗೊಳಿಸಿದ  ನಂತರ ರಾಜ್ಯ ಸರ್ಕಾರ ವಾಲ್ಮೀಕಿ ಜಯಂತಿಯನ್ನು ಆಚರಿಸಬೇಕು ಎಂದು ರಾಜ್ಯ ವಾಲ್ಮೀಕಿ ಕ್ರಾಂತಿ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಕುಪ್ಪೂರು ಶ್ರೀಧರನಾಯಕ ಒತ್ತಾಯಿಸಿದರು.

ನಗರದಲ್ಲಿ ಸಂಘಟನೆಯ ಕಚೇರಿಯಲ್ಲಿ ಆಯೋಜಿಸಿದ್ದ ವಾಲ್ಮೀಕಿ ಸಮುದಾಯದ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೇವಲ ಜಯಂತಿ ಆಚರಣೆ, ಭಾಷಣಗಳಿಂದ ಸಮುದಾಯಕ್ಕೆ ಯಾವುದೇ ಪ್ರಯೋಜನವಿಲ್ಲ. ಕೇಂದ್ರ ಸರ್ಕಾರ ಸುಮಾರು 10 ವರ್ಷಗಳ ಹಿಂದೆ ಕುಲದೀಪ್‌ ಸಿಂಗ್ ಆಯೋಗದ ವರದಿಯನ್ನು ಆಧಾರಿಸಿ ಮೀಸಲಾತಿಯನ್ನು ಶೇ 3 ರಿಂದ ಶೇ 7.5ಕ್ಕೆ ಹೆಚ್ಚಳ ಮಾಡಿದೆ. ಅದೇ ರೀತಿ ರಾಜ್ಯ ಸರ್ಕಾರ ಮೊದಲು ಮೀಸಲಾತಿ ಹೆಚ್ಚು ಮಾಡಿ ನಂತರ ಜಯಂತಿ ಆಚರಿಸಿಬೇಕು. ಆಗ ಅದೊಂದು  ಅರ್ಥಪೂರ್ಣ ಕಾರ್ಯವಾಗುತ್ತದೆ ಎಂದರು.

ಮೀಸಲಾತಿ ಹೆಚ್ಚಳವಾಗದಿದ್ದರೆ ವಾಲ್ಮೀಕಿ ಸಮುದಾಯದಲ್ಲಿ ಸುಮಾರು 51 ಉಪ ಪಂಗಡಗಳು ಅನ್ಯಾಯಕ್ಕೆ ಒಳಗಾಗಲಿವೆ. ಅಲ್ಲದೆ ಹೊಸದಾಗಿ ಕೆಲ ಜಾತಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗಿದೆ ಎಂದು ಹೇಳಿದರು.

ಒಟ್ಟಾರೆ ಎಸ್ಟಿ ಸಮುದಾಯದ ಜನಸಂಖ್ಯೆಯನ್ನು ಆಧರಿಸಿ, ಮೀಸಲು ಪ್ರಮಾಣವನ್ನು ನಿಗದಿ ಮಾಡಿ ಸಮುದಾಯಕ್ಕೆ ಅನುಕೂಲ ಮಾಡಿಕೊಡಬೇಕು. ಇಲ್ಲವಾದಲ್ಲಿ ಮುಂದಿನ ಲೋಕಸಭಾ ಚುನಾವಣೆಯ ವೇಳೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರಧಾನ ಕಾರ್ಯದರ್ಶಿ ಧರಣಿಕುಮಾರ್ ನಾಯಕ್ ಮಾತನಾಡಿ, ’ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ವಾಲ್ಮೀಕಿ ಸಂಸ್ಥಾನ ಪೀಠದ ಶ್ರೀಶ್ರೀವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಗುಲ್ಬರ್ಗ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮಕ್ಕೆ ಜಿಲ್ಲೆಯಿಂದ ಹೆಚ್ಚು ಜನರು ಭಾಗವಹಿಸಿ ಯಶಸ್ವಿಗೊಳಿಸಬೇಕು’ ಎಂದು ಮನವಿ ಮಾಡಿದರು.

ಉಪನ್ಯಾಸಕರಾದ ಗಂಗಾಧರ್ ಕುಂಬಾರಹಳ್ಳಿ, ಮಾರಣ್ಣ ಪಾಳ್ಳೇಗಾರ ಹಾಗೂ ಅರ್ಜುನ ಪಾಳ್ಳೇಗಾರ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !