ಗುರುವಾರ , ಸೆಪ್ಟೆಂಬರ್ 23, 2021
21 °C
ಇಳಿಕೆಯತ್ತ ಕೋಳಿ, ಮೀನು ಬೆಲೆ; ಬೇಳೆ ಬೆಲೆ ಕೊಂಚ ಏರಿಕೆ

ತರಕಾರಿ ಅಗ್ಗ: ಸೇಬು ತುಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ತರಕಾರಿ ಬೆಲೆಯಲ್ಲಿ ಇಳಿಕೆಯಾಗಿದ್ದರೆ, ಹಣ್ಣುಗಳ ಧಾರಣೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಆದರೆ ಸೇಬು ಹಣ್ಣಿನ ಬೆಲೆ ಸ್ವಲ್ಪ ಮಟ್ಟಿಗೆ ಇಳಿಕೆಯಾಗಿದೆ. ಕೋಳಿ, ಮೀನಿನ ಧಾರಣೆಯೂ ಕಡಿಮೆಯಾಗಿದೆ.

ತೀವ್ರವಾಗಿ ಏರಿಕೆ ಕಂಡಿದ್ದ ಬೀನ್ಸ್ ಬೆಲೆ ಕೆ.ಜಿ ₹20ಕ್ಕೆ, ಕ್ಯಾರೇಟ್ ಕೆ.ಜಿ ₹45–50ಕ್ಕೆ ಕುಸಿದಿದ್ದರೆ, ಹೂ ಕೋಸು ದುಬಾರಿಯಾಗಿದೆ. ಹಾಗಲಕಾಯಿ, ಹಸಿಮೆಣಸಿನಕಾಯಿ ಬೆಲೆ ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಅಲ್ಪ ಏರಿಕೆಯಾಗಿದೆ. ಮೆಂತ್ಯ ಸೊಪ್ಪು ಕೆ.ಜಿ ₹50ಕ್ಕೆ, ಪಾಲಕ್ ಕೆ.ಜಿ ₹40ಕ್ಕೆ ಹೆಚ್ಚಳವಾಗಿದ್ದು, ಕೊತ್ತಂಬರಿ ಕೆ.ಜಿ ₹15–20, ಸಬ್ಬಕ್ಕಿ ₹20ಕ್ಕೆ ಇಳಿಕೆಯಾಗಿದೆ. ಸೌತೆಕಾಯಿ ಒಂದು ಕಾಯಿಗೆ ₹5–6ಕ್ಕೆ ಮಾರಾಟವಾಗುತ್ತಿದೆ.

ಅಡುಗೆ ಎಣ್ಣೆ ಬೆಲೆ ಕಡಿಮೆಯಾಗುತ್ತಿಲ್ಲ, ಸನ್‌ಫ್ಲವರ್ ಕೆ.ಜಿ ₹153–158ಕ್ಕೆ, ಪಾಮಾಯಿಲ್ ಕೆ.ಜಿ ₹128–130ಕ್ಕೆ ಮಾರಾಟವಾಗುತ್ತಿದೆ. ಉದ್ದಿನ ಬೇಳೆ, ಹುರಿಗಡಲೆ, ಸಕ್ಕರೆ ಬೆಲೆ ಕೊಂಚ ದುಬಾರಿಯಾಗಿದೆ. ಇನ್ನೂ ಆಷಾಢ ಮುಗಿದು ಶ್ರಾವಣ ಕಾಲಿಡುತ್ತಿದ್ದು ಧಾನ್ಯಗಳ ಬೆಲೆ ಏರಿಕೆ ಆಗಬಹುದು ಎಂದು ಮಂಡಿಪೇಟೆ ವರ್ತಕರು ಹೇಳುತ್ತಾರೆ.

ಸೇಬು ಕಡಿಮೆ: ಕಳೆದ ಐದಾರು ತಿಂಗಳಿಂದ ಗಗನ ಮುಟ್ಟಿದ್ದ ಸೇಬು ಹಣ್ಣಿನ ಬೆಲೆ ನಿಧಾನವಾಗಿ ಕಡಿಮೆಯಾಗುತ್ತಿದೆ. ಕಾಶ್ಮೀರದಿಂದ ಸೇಬು ಬರುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಕಡಿಮೆಯಾಗಬಹುದು ಎಂದು ಹೇಳಲಾಗುತ್ತಿದೆ. ಮೂಸಂಬಿ ಧಾರಣೆಯೂ ಇಳಿಕೆಯಾಗಿದೆ. ಶ್ರಾವಣ ಮಾಸ, ವರಮಹಾಲಕ್ಷ್ಮಿ ಹಬ್ಬ ಬರುತ್ತಿದ್ದು, ಬಾಳೆ ಹಣ್ಣಿನ ಬೆಲೆ ಏರಿಕೆಯತ್ತ ಮುಖ ಮಾಡಿದೆ. ಉಳಿದಂತೆ ಇತರೆ ಹಣ್ಣುಗಳ ಧಾರಣೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ.

ಕೋಳಿ ಇಳಿಕೆ: ಕೋಳಿ ಬೆಲೆ ಈ ವಾರವೂ ಕೆ.ಜಿ.ಗೆ ₹10 ಕಡಿಮೆಯಾಗಿದ್ದು, ಬ್ರಾಯ್ಲರ್ ಕೋಳಿ ಕೆ.ಜಿ ₹160ಕ್ಕೆ, ರೆಡಿ ಚಿಕನ್ ₹230ಕ್ಕೆ, ಮೊಟ್ಟೆ ಕೋಳಿ ಕೆ.ಜಿ ₹120ಕ್ಕೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಮೀನು ಬೆಲೆ ಇಳಿಕೆ: ಮುಂಗಾರಿನಲ್ಲಿ ಸ್ಥಗಿತಗೊಂಡಿದ್ದ ಮೀನುಗಾರಿಕೆ ಚಟುವಟಿಕೆಗಳು ನಿಧಾನವಾಗಿ ಆರಂಭವಾಗುತ್ತಿದ್ದು, ಸಮುದ್ರಕ್ಕೆ ಮೀನುಗಾರರು ಇಳಿಯುತ್ತಿದ್ದಾರೆ. ಹಾಗಾಗಿ ದುಬಾರಿಯಾಗಿದ್ದ ಮೀನು, ಇಳಿಕೆಯತ್ತ ಮುಖ ಮಾಡಿದೆ. ಬಂಗುಡೆ ಕೆ.ಜಿ ₹300, ಬೂತಾಯಿ ಕೆ.ಜಿ ₹250, ಬಿಳಿಮಾಂಜಿ ಕೆ.ಜಿ ₹960, ಬೊಳಿಂಜರ್ ಕೆ.ಜಿ ₹230, ಸೀಗಡಿ ಕೆ.ಜಿ 550ಕ್ಕೆ ನಗರದ ಮತ್ಸ್ಯದರ್ಶಿನಿಯಲ್ಲಿ ಮಾರಾಟವಾಗುತ್ತಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.