ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪನಗರ ಯೋಜನೆ: 26 ಮೆಮು ರೈಲು ಖರೀದಿ, ಜೋಡಿಹಳಿ ನಿರ್ಮಾಣ

Last Updated 2 ಫೆಬ್ರುವರಿ 2018, 19:52 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಉಪನಗರ ರೈಲು ಯೋಜನೆ ಜಾರಿಗೊಳಿಸುವಾಗ 26 ಹೊಸ ಮೆಮು ರೈಲುಗಳನ್ನು ಖರೀದಿಸಲು ಹಾಗೂ ಯಶವಂತಪುರ– ಚನ್ನಸಂದ್ರ ಮತ್ತು ಬೈಯಪ್ಪನಹಳ್ಳಿ– ಹೊಸೂರು ಮಾರ್ಗಗಳಲ್ಲಿ ಜೋಡಿಹಳಿ ಅಳವಡಿಸಲು ರಾಜ್ಯ ಸರ್ಕಾರ ಆದ್ಯತೆ ನೀಡಲಿದೆ.

ಉಪನಗರ ರೈಲು ಯೋಜನೆಯ ಎಲ್ಲ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ನಿರ್ವಹಿಸುವ ಸಲುವಾಗಿ ವಿಶೇಷ ಉದ್ದೇಶದ ಘಟಕ (ಎಸ್‌ಪಿವಿ) ಸ್ಥಾಪಿಸುವ ನಿಟ್ಟಿನಲ್ಲಿ  ಪ್ರಯತ್ನಗಳು ನಡೆದಿವೆ. ನಗರ ಭೂಸಾರಿಗೆ ನಿರ್ದೇಶನಾಲಯವು (ಡಲ್ಟ್‌ ) 2017ರ ಜುಲೈನಲ್ಲೇ ಎಸ್‌ಪಿವಿಯ ಕರಡನ್ನು ಸಿದ್ಧಪಡಿಸಿತ್ತು. ಸಮಗ್ರ ಯೋಜನೆ ಜಾರಿಗೊಳಿಸುವಾಗ ಯಾವ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳಬೇಕು ಎಂಬ ಬಗ್ಗೆ ಮಾಹಿತಿ ನೀಡುವಂತೆ ಕೋರಿ ರೈಲ್ವೆ ಇಲಾಖೆ ಡಲ್ಟ್‌ಗೆ ಪತ್ರ ಬರೆದಿತ್ತು.

ಈ ಯೋಜನೆಗೆ ₹ 349 ಕೋಟಿ  ಹೂಡಿಕೆ ಮಾಡಲು ರಾಜ್ಯ ಸಚಿವ ಸಂಪುಟವು ಈಗಾಗಲೇ ಮಂಜೂರಾತಿ ನೀಡಿದೆ. ಸಾಂಪ್ರದಾಯಿಕ ರೈಲುಗಳನ್ನು ಮೇಲ್ದರ್ಜೆಗೇರಿಸಲು ಪ್ರತ್ಯೇಕ ₹ 345 ಕೋಟಿ ಅನುದಾನ ಒದಗಿಸುವ ಪ್ರಸ್ತಾವಕ್ಕೂ ಸಮ್ಮತಿ ದೊರಕಿದೆ. ಕಾಮಗಾರಿ ಅನುಷ್ಠಾನಕ್ಕಾಗಿ ಎಸ್‌ಪಿವಿ ರಚಿಸಿದ ಬಳಿಕ ಅದರಲ್ಲಿ ರಾಜ್ಯದ ಪಾಲು ಭರಿಸುವುದಕ್ಕೂ ಸಂಪುಟ ಒಪ್ಪಿಗೆ ಸೂಚಿಸಿದೆ. ಮೊದಲ ಹಂತದಲ್ಲಿ ₹ 1,745 ಕೋಟಿ ವೆಚ್ಚದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಡಲ್ಟ್‌ ಆಯುಕ್ತ ದರ್ಪಣ್‌ ಜೈನ್‌ ತಿಳಿಸಿದರು.

ಉಪನಗರ ರೈಲು ಅಭಿವೃದ್ಧಿಪಡಿಸುವ ₹ 17,000 ಕೋಟಿ ವೆಚ್ಚದ ಯೋಜನೆಗೆ ಕೇಂದ್ರ ಸರ್ಕಾರ ಮಂಜೂರಾತಿ ನೀಡಿದೆ. ಇದರೊಂದಿಗೆ ರಾಜ್ಯದ ಹೂಡಿಕೆ ಪ್ರಸ್ತಾವಗಳಿಗೂ ಸಮ್ಮತಿಯ ಮುದ್ರೆ ಸಿಕ್ಕಿದಂತಾಗಿದೆ. ಆದರೆ ಈ ಯೋಜನೆಯಲ್ಲಿ ಏನೆಲ್ಲ ಕಾಮಗಾರಿಗಳು ಅಡಕವಾಗಿವೆ ಎಂಬ ಬಗ್ಗೆ ರಾಜ್ಯಸರ್ಕಾರದ ಅಧಿಕಾರಿಗಳಿಗೆ ಸ್ಪಷ್ಟ ಮಾಹಿತಿ ಇನ್ನೂ ಸಿಕ್ಕಿಲ್ಲ.

ರಾಜ್ಯ ಸರ್ಕಾರ ಕೈಗೊಳ್ಳಲು ಉದ್ದೇಶಿಸಿರುವ ಯೋಜನೆ ಹಾಗೂ ಕೇಂದ್ರ ಅನುಷ್ಠಾನಗೊಳಿಸಲು ಮುಂದಾಗಿರುವ ಯೋಜನೆಗಳ ನಡುವೆ ಯಾವ ತರಹದ ಸಮನ್ವಯ ಇರಲಿದೆ ಎಂಬುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

58 ಹೊಸ ರೈಲು ಸೇವೆ ಆರಂಭಿಸುವುದು ಹಾಗೂ ರೈಲು ಮೂಲಸೌಕರ್ಯವನ್ನು ಮೇಲ್ದರ್ಜೆಗೇರಿಸುವುದು ನಮ್ಮ ಆದ್ಯತೆ. ಇದರಿಂದ ಈಗಿರುವ ಸಬ್‌ ಅರ್ಬನ್‌ ರೈಲು ಜಾಲ ದ್ವಿಗುಣಗೊಳ್ಳಲಿದೆ. 2 ಲಕ್ಷ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ದರ್ಪಣ್‌ ಜೈನ್‌ ತಿಳಿಸಿದರು.

ಕೇಂದ್ರ ಸರ್ಕಾರವು ಕಳೆದ ವರ್ಷ ಬಿಡುಗಡೆ ಮಾಡಿದ್ದ ಹೊಸ ಸಬ್‌ಅರ್ಬನ್‌ ರೈಲು ನೀತಿಯ ಪ್ರಕಾರ ಒಟ್ಟು ಯೋಜನಾ ವೆಚ್ಚದಲ್ಲಿ ಶೇ 80ರಷ್ಟು ಅನುದಾನ ಹೊಂದಿಸುವ ಹೊಣೆ ರಾಜ್ಯ ಸರ್ಕಾರದ ಮೇಲಿದೆ. ಕೇಂದ್ರ ಸರ್ಕಾರ ಕೇವಲ ಶೇ 20ರಷ್ಟು ಹೂಡಿಕೆ ಮಾಡಲಿದೆ.

ಕೇಂದ್ರ ಸರ್ಕಾರ ಯೋಜನೆಯ ಶೇ 50ರಷ್ಟು ಪಾಲನ್ನು ಭರಿಸಬೇಕು ಎಂದು ರಾಜ್ಯ ಸರ್ಕಾರ ಒತ್ತಾಯಿಸಿತ್ತು. ಇದಕ್ಕೆ ರೈಲ್ವೆ ಸಚಿವ ಪೀಯೂಷ್‌ ಗೋಯಲ್‌ ಕಳೆದ ತಿಂಗಳು ಒಪ್ಪಿಗೆ ಸೂಚಿಸಿದ್ದರು.

‘ಈ ಯೋಜನೆಯಲ್ಲಿ ರಾಜ್ಯ ಸರ್ಕಾರ ಎಷ್ಟು ಪಾಲು ಭರಿಸಬೇಕು ಎಂಬ ಬಗ್ಗೆ ಇನ್ನೆರಡು ದಿನಗಳಲ್ಲಿ ಸ್ಪಷ್ಟತೆ ಸಿಗಲಿದೆ’ ಎಂದು ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT