ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಸಾಧನೆಗೆ ಸದಾ ಪ್ರೋತ್ಸಾಹಿಸಿ

ಪ್ರತಿಭಾ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಸಂಸದ ಜಿ.ಎಸ್‌.ಬಸವರಾಜು
Last Updated 14 ಜುಲೈ 2019, 20:00 IST
ಅಕ್ಷರ ಗಾತ್ರ

ತುಮಕೂರು: ಪೋಷಕರು ಮಕ್ಕಳನ್ನು ನಿರುತ್ಸಾಹಿಗೊಳಿಸಬಾರದು. ಹೊಸ ಕೆಲಸ ಮಾಡಲು ಹೊರಟ ಮಕ್ಕಳನ್ನು ಪ್ರೋತ್ಸಾಹಿಸಬೇಕು ಎಂದು ಸಂಸದ ಜಿ.ಎಸ್‌.ಬಸವರಾಜು ಹೇಳಿದರು.

ಜಿಲ್ಲಾ ವೀರಶೈವ–ಲಿಂಗಾಯತ ಸೇವಾ ಸಮಿತಿ ಭಾನುವಾರ ಆಯೋಜಿಸಿದ್ದ ‘ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಸಮಾರಂಭ’ದಲ್ಲಿ ಅವರು ಮಾತನಾಡಿದರು.

ಇಂದಿನ ಬಹುತೇಕ ಪೋಷಕರು ಮಕ್ಕಳು ವಿವಿಧ ರಂಗಗಳಲ್ಲಿ ಮುಂದೆ ಬರಲು ಬಿಡುವುದಿಲ್ಲ. ಮಕ್ಕಳೇ ತಂದೆ–ತಾಯಿಯಿಂದ ದೂರವಾಗಬೇಕು. ವಿದೇಶಗಳಲ್ಲಿ ಅಧ್ಯಯನ ಮಾಡಬೇಕು. ಸ್ವಾವಲಂಬಿಗಳಾಗಬೇಕು. ಇದಕ್ಕಾಗಿ ಸರ್ಕಾರಿ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವಿದ್ಯಾರ್ಥಿನಿಯರೇ ಇಂದು ಶೈಕ್ಷಣಿಕ ರಂಗದಲ್ಲಿ ಮೇಲುಗೈ ಸಾಧಿಸುತ್ತಿದ್ದಾರೆ. ವಿದ್ಯಾರ್ಥಿಗಳು ವಿದ್ಯಾರ್ಥಿನಿಯರೊಂದಿಗೆ ಅಧ್ಯಯನದ ಸ್ಪರ್ಧೆಗೆ ಇಳಿಯಬೇಕು. ಇಲ್ಲದಿದ್ದರೆ, ಹುಡುಗರೆಲ್ಲ ಝಿರೋ ಆಗಿಬಿಡುತ್ತಿರಾ. ಅಲ್ಲಿ–ಅಲ್ಲಿ ಅಲೆಯಬಾರದು. ಹರಟೆ ಹೊಡೆಯುತ್ತ ಕಾಲಹರಣ ಮಾಡಬಾರದುಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಚನ್ನಾಗಿ ಓದಿ ಬೇರೊಬ್ಬರ ಬಳಿ ಕೆಲಸ ಕೇಳಿಕೊಂಡು ಹೋಗಬಾರದು. ಮತ್ತೊಬ್ಬರಿಗೆ ಕೆಲಸ ಕೊಡುವ ಉದ್ಯಮಿಗಳು ಆಗಬೇಕು. ಕೇಂದ್ರ ಸರ್ಕಾರ ಉದ್ಯಮಗಳನ್ನು ಸ್ಥಾಪಿಸಲು ನೆರವು ನೀಡುತ್ತಿದೆ. ಅದನ್ನು ಬಳಸಿಕೊಂಡು ನವಭಾರತ ಕಟ್ಟುವ ಮೋದಿ ಅವರ ಕನಸುಗಳನ್ನು ನೀವೆಲ್ಲ ನನಸು ಮಾಡಬೇಕು ಎಂದರು.

ನಮ್ಮ ಸಮುದಾಯದಲ್ಲಿಯೂ ಆರ್ಥಿಕವಾಗಿ ಹಿಂದುಳಿದ ಜನರು ಇದ್ದಾರೆ. ಮುಸಲ್ಮಾನರು ಕೊಟ್ಟಂತೆ ದುಡಿಮೆಯ ಒಂದು ಭಾಗವನ್ನು ಸಮುದಾಯಕ್ಕಾಗಿ ನೀಡುವ ಪದ್ಧತಿಯನ್ನು ನಾವು ಬೆಳೆಸಿಕೊಳ್ಳಬೇಕು. ದುಡಿಮೆಯ ಶೇ 10 ಅಥವಾ ಶೇ 15ರಷ್ಟಾದರೂ ಸಮುದಾಯಕ್ಕೆ ನೀಡಬೇಕು ಎಂದು ಹೇಳಿದರು.

ನೀವೆಲ್ಲ ಒಟ್ಟಾಗಿ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸುವ ಮೂಲಕ ತುಮಕೂರಿನ ಮರ್ಯಾದೆ ಉಳಿಸಿದ್ದೀರಾ. ಜಿಲ್ಲೆಯಲ್ಲಿ ಹೊಸ ಕೈಗಾರಿಕೆಗಳು ಸ್ಥಾಪನೆಯಾಗುತ್ತಿವೆ. ಇದರಿಂದ ಉದ್ಯೋಗ ಅವಕಾಶಗಳು ಹೆಚ್ಚುತ್ತವೆ. ನಿರುದ್ಯೋಗ ಕಡಿಮೆ ಆಗುತ್ತದೆ ಎಂದು ತಿಳಿಸಿದರು.

ಸಮಾಜ ಭದ್ರವಾಗಿದ್ದರೆ ನಾವು ಭದ್ರವಾಗಿರುತ್ತೇವೆ. ಭೇದ–ಭಾವ ಇಲ್ಲದೆ ಬದುಕುವುದನ್ನು ಶಿವಕುಮಾರ ಸ್ವಾಮೀಜಿ ಹೇಳಿಕೊಟ್ಟಿದ್ದಾರೆ. ಅವರು ಇದ್ದಿದ್ದರೆ ಇಂದಿನ ರಾಜಕಾರಣಿಗಳ ನಡೆಯ ಕುರಿತು ಖಂಡಿತ ಮರುಕ ಪಡುತ್ತಿದ್ದರು. ಪೂಜ್ಯರ ಆದರ್ಶಗಳನ್ನು ನಾವೆಲ್ಲ ಮೈಗೂಡಿಸಿಕೊಳ್ಳಬೇಕು. ಶೀಲವಂತಿಕೆ, ದುಡಿಮೆಯ ಗುಣ ಬೆಳೆಸಿಕೊಳ್ಳಬೇಕು ಎಂದರು.

ಬಿಜೆಪಿ ರೈತ ಮೋರ್ಚಾ ರೈತ ಘಟಕದ ಅಧ್ಯಕ್ಷ ಲಕ್ಷ್ಮಣ ಸವದಿ, ನಮ್ಮ ಸಮುದಾಯ ಒಗ್ಗಟ್ಟಾದರೆ, ಸಂಘಟಿತವಾದರೆ ಎಲ್ಲರು ನಮ್ಮ ಜತೆ ಬರುತ್ತಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ನೀವೆಲ್ಲ ಒಗ್ಗಟ್ಟು ಪ್ರದರ್ಶನ ಮಾಡಿದ್ದೀರಿ. ಹಾಗೆಯೇ ಸಮುದಾಯದ ಎಲ್ಲರನ್ನೂ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಮುಂದೆ ತರಲು ಸಹಾಯ, ಸಹಕಾರ ನೀಡಿ ಎಂದು ಮನವಿ ಮಾಡಿದರು.

ಸಮಾರಂಭದಲ್ಲಿ ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಅರುಣ್‌ ವಿ.ಸೋಮಣ್ಣ, ಡಿವೈಎಸ್‌ಪಿ ಎಚ್‌.ಜಿ.ತಿಪ್ಪೇಸ್ವಾಮಿ, ಜಿಲ್ಲಾ ಆರೋಗ್ಯಾಧಿಕಾರಿ ವೀರಭದ್ರಯ್ಯ, ಉದ್ಯಮಿ ಎಸ್‌.ಡಿ.ದಿಲೀಪ್‌ಕುಮಾರ್‌, ಪಾಲಿಕೆ ಸದಸ್ಯರಾದ ಮಂಜುಳಾ ಆದರ್ಶ್‌, ಟಿ.ಎಂ.ಮಹೇಶ್‌, ನಿರ್ಮಲಾ ಶಿವಕುಮಾರ್‌, ಸಮುದಾಯದ ಮುಖಂಡರಾದ ಕೊಪ್ಪಲ್‌ ನಾಗರಾಜ್‌ ಇದ್ದರು.

ಸೇವಾ ಸಮಿತಿ ಅಧ್ಯಕ್ಷ ಟಿ.ಎನ್‌.ರುದ್ರೇಶ್‌, ಸಮುದಾಯದ ಯುವಜನರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಮಿತಿಯಿಂದ ಉಚಿತ ತರಬೇತಿ ನೀಡಲು ಯೋಜಿಸಿದ್ದೇವೆ. ಇದಕ್ಕೆ ಎಲ್ಲರೂ ಕೈಜೋಡಿಸಬೇಕು. ಸಮಿತಿಯೂ ಪ್ರತಿವರ್ಷ ಪ್ರತಿಭಾ ಪುರಸ್ಕಾರ ಮತ್ತು ಜಯಂತಿಗಳನ್ನು ಆಚರಿಸುತ್ತ ಬರುತ್ತಿದೆ ಎಂದು ತಿಳಿಸಿದರು.

ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕ ಗಳಿಸಿದ ಸಮುದಾಯದ 190 ವಿದ್ಯಾರ್ಥಿಗಳಿಗೆ ಹಾಗೂ ಪಿ.ಯು.ಸಿ.ಯಲ್ಲಿ ಹೆಚ್ಚು ಅಂಕ ಪಡೆದ 120 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಪುರಸ್ಕಾರವು ಕೈಗಡಿಯಾರ, ಸ್ಮರಣಿಕೆ, ಶಾಲು, ಪ್ರಮಾಣಪತ್ರ ಒಳಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT