ಮಧುಗಿರಿ: ತಾಲ್ಲೂಕಿನ ಬುಳ್ಳಸಂದ್ರ ಗ್ರಾಮದಲ್ಲಿ ವಾಂತಿ, ಭೇದಿ ಕಾಣಿಸಿಕೊಂಡು ಮೂವರು ಸಾವನ್ನಪ್ಪಿದ್ದಾರೆ.
ಬುಳ್ಳಸಂದ್ರ ಗ್ರಾಮದ ತಿಮ್ಮಕ್ಕ (85), ಗಿರಿಯಮ್ಮ (90) ಹಾಗೂ ಮಡಕಶಿರಾ ತಾಲ್ಲೂಕಿನ ಸಿದ್ದಗಿರಿ ಗ್ರಾಮದ ಕಾಟಮ್ಮ (45) ಮೃತರು. ಇನ್ನೂ 6 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬುಳ್ಳಸಂದ್ರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಆರೋಗ್ಯ ಇಲಾಖೆ ವತಿಯಿಂದ ಕ್ಲಿನಿಕ್ ತೆರೆದು ಚಿಕಿತ್ಸೆ ನೀಡಲಾಗುತ್ತಿದೆ. ತೀವ್ರವಾಗಿ ಅಸ್ವಸ್ಥರಾಗಿದ್ದ ಇಬ್ಬರನ್ನು ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಲಾಗಿದೆ.
ತಾಲ್ಲೂಕಿನ ಬುಳ್ಳಸಂದ್ರ ಗ್ರಾಮದಲ್ಲಿ ಮುತ್ತುರಾಯ ಸ್ವಾಮಿ ಜಾತ್ರೆಗಾಗಿ ಮನೆಯಲ್ಲಿ ಅಡುಗೆ ಮಾಡಿದ್ದರು. ಆಹಾರ ಸೇವನೆಯಿಂದಾಗಿ 8 ಮಂದಿಗೆ ವಾಂತಿ, ಭೇದಿ ಕಾಣಿಸಿಕೊಂಡಿದೆ. ತೀವ್ರವಾಗಿ ಅಸ್ವಸ್ಥರಾಗಿದ್ದ ಮೂವರು ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ, ತಾ.ಪಂ ಇಒ ಲಕ್ಷ್ಮಣ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಶ್ರೀನಿವಾಸ್, ಪಿಡಿಒ ದಯಾನಂದ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.