ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನದಿಂದ ಬಲಿಷ್ಠ ಭಾರತ ನಿರ್ಮಾಣ

ರಾಷ್ಟ್ರೀಯ ಮತದಾನ ದಿನಾಚರಣೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ
Last Updated 25 ಜನವರಿ 2020, 12:50 IST
ಅಕ್ಷರ ಗಾತ್ರ

ತುಮಕೂರು: ಮತದಾನದ ಮೂಲಕ ಭಾರತವನ್ನು ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರವನ್ನಾಗಿ ನಿರ್ಮಾಣ ಮಾಡಲು ಸಾಧ್ಯ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಅಭಿಪ್ರಾಯಪಟ್ಟರು.

ನಗರದ ಬಾಲಭವನದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಮತದಾನ ದಿನದ ಅಂಗವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು.

ಇಂದು ರಾಷ್ಟ್ರದಾದ್ಯಂತ ಮತದಾನದ ದಿನ ಆಚರಣೆ ಮಾಡುತ್ತಿದ್ದು, ದೇಶದ 18ವರ್ಷ ಮೇಲ್ಪಟ್ಟ ಎಲ್ಲಾ ಯುವಕರು ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಬೇಕು ಎಂಬುದು ಈ ರಾಷ್ಟ್ರೀಯ ಮತದಾನ ದಿನದ ಮುಖ್ಯ ಉದ್ದೇಶವಾಗಿದೆ ಎಂದರು.

2011ರಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆಯಾದ ಹಾಗೂ ಚುನಾವಣೆಯಲ್ಲಿ ಭಾಗವಹಿಸುವವರ ಸಂಖ್ಯೆ ಶೇ 60 ರಷ್ಟು ಮಾತ್ರ ಇತ್ತು. ಇದೀಗ ಶೇ 80ಕ್ಕೂ ಹೆಚ್ಚು ಇದೆ. ಆಗ ಎಲ್ಲಾ ಜನರಿಗೆ ಮತದಾನ, ಪ್ರಜಾಪ್ರಭುತ್ವ ಹಾಗೂ ಮೂಲ ಅಂಶಗಳ ಬಗ್ಗೆ ಜಾಗೃತಿ ಇರಲಿಲ್ಲ. ಚುನಾವಣಾ ಪ್ರಚಾರದ ಸ್ವೀಪ್ ಕಾರ್ಯಕ್ರಮಗಳ ಮೂಲಕ ಮತದಾನದ ಸಾಕ್ಷರತೆ ನೀಡಲಾಗುತ್ತಿದೆ. ನಮ್ಮ ಜಿಲ್ಲೆಯ ಬಿಎಲ್‍ಓಗಳು 18ವರ್ಷ ಮೇಲ್ಪಟ್ಟ ಎಲ್ಲಾ ಯುವ ಜನರನ್ನು ಮತದಾರ ಪಟ್ಟಿಗೆ ಸೇರ್ಪಡೆ ಮಾಡಿದ್ದಾರೆ ಎಂದು ಹೇಳಿದರು.

ಒಳ್ಳೆಯ ನಾಯಕನನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದನ್ನು ಮನದಲ್ಲಿಟ್ಟುಕೊಂಡು ನಾವು ಯಾವುದೇ ಆಸೆ-ಆಮಿಷಗಳಿಗೆ ಬಲಿಯಾಗದೆ, ನಮ್ಮ ಅಮೂಲ್ಯ ಮತವನ್ನು ಸ್ವತಂತ್ರವಾಗಿ, ನ್ಯಾಯಸಮ್ಮತವಾಗಿ, ಮುಕ್ತವಾಗಿ ಸ್ವಇಚ್ಚೆಯಿಂದ ಚಲಾಯಿಸಬೇಕು. ಆಗ ಮಾತ್ರ ನಮ್ಮ ದೇಶ ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರವಾಗಲು ಸಾಧ್ಯ ಎಂದು ತಿಳಿಸಿದರು.

ಸಮಾರಂಭದಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ ಮತಗಟ್ಟೆ ಅಧಿಕಾರಿಗಳು ಹಾಗೂ ಪ್ರಬಂಧ ಮತ್ತು ರಸಪ್ರಶ್ನೆಯ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಲಾಯಿತು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದ ಟೌನ್‍ಹಾಲ್ ವೃತ್ತದಿಂದ ಬಾಲಭವನದವರೆಗೂ ಅರಿವಿನ ಜಾಥಾ ನಡೆಯಿತು. ತಹಶೀಲ್ದಾರ್ ಮೋಹನ್, ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಕೃಷ್ಣಮೂರ್ತಿ, ಕಂದಾಯ ಅಧಿಕಾರಿ ತುಕರಾಮ್ ನಾಯಕ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ನಟರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT