ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆಗೆ ತ್ಯಾಜ್ಯ ಸುರಿಯುತ್ತಿರುವ ಕೈಗಾರಿಕೆಗಳು

ತುಮಕೂರು ಮಹಾನಗರ ಪಾಲಿಕೆ ಮುಂದುವರಿದ ಸಾಮಾನ್ಯ ಸಭೆಯಲ್ಲಿ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷರ ಒತ್ತಾಯ
Last Updated 13 ಸೆಪ್ಟೆಂಬರ್ 2019, 15:16 IST
ಅಕ್ಷರ ಗಾತ್ರ

ತುಮಕೂರು: ‘ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಕೈಗಾರಿಕಾ ಪ್ರದೇಶದ ಕೈಗಾರಿಕೆಗಳು ಕೆರೆಗಳಿಗೆ ತ್ಯಾಜ್ಯ ಸುರಿಯುತ್ತಿದ್ದು, ಕೂಡಲೇ ಇದನ್ನು ತಡೆಗಟ್ಟಬೇಕು’ ಎಂದು ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮಿನರಸಿಂಹರಾಜು ಒತ್ತಾಯ ಮಾಡಿದರು.

ಮೇಯರ್ ಲಲಿತಾ ರವೀಶ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆದಿದ್ದ ಸಾಮಾನ್ಯ ಸಭೆಯಲ್ಲಿ ಅಜೆಂಡಾ ವಿಷಯಗಳು ಚರ್ಚೆಗೆ ಬಂದಿರಲಿಲ್ಲ. ಅಲ್ಲದೇ ಯಾವುದೇ ನಿರ್ಣಯ ಕೈಗೊಳ್ಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಗುರುವಾರವೂ ಮುಂದುವರೆಯಿತು.

ಸಭೆಯಲ್ಲಿ ಮಾತನಾಡಿದ ಲಕ್ಷ್ಮಿನರಸಿಂಹರಾಜು, ‘ಈ ಕೈಗಾರಿಕೆಗಳು ಪಾಲಿಕೆಗೆ ಯಾವುದೇ ತೆರಿಗೆಯನ್ನು ನಿರ್ವಹಣೆಗೆಂದು ಕಟ್ಟುತ್ತಿಲ್ಲ. ಈ ಬಗ್ಗೆ ಅನೇಕ ಬಾರಿ ಗಮನ ಸೆಳೆದರೂ ಕ್ರಮ ಕೈಗೊಂಡಿಲ್ಲ’ ಎಂದು ದೂರಿದರು.

‘ಪಾಲಿಕೆಯಲ್ಲಿ ವಸತಿ ಮತ್ತು ವಾಣಿಜ್ಯ ಉದ್ದೇಶಕ್ಕೆ ಎರಡು ವಿಧದ ತೆರಿಗೆ ವಿಧಿಸಲಾಗುತ್ತಿದ್ದು, ಕೈಗಾರಿಕೆಗಳಿಗೆ ಪ್ರತ್ಯೇಕ ತೆರಿಗೆಯನ್ನು ನಿರ್ಧರಿಸುವ ಮೂಲಕ ಪಾಲಿಕೆಯ ಆದಾಯವನ್ನು ಹೆಚ್ಚಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.

ಇದಕ್ಕೆ ಉತ್ತರಿಸಿದ ಉಪ ಆಯುಕ್ತ ಯೋಗಾನಂದ್, ‘2013ರಿಂದ ಇಲ್ಲಿಯವರೆಗೆ ಕೈಗಾರಿಕೆಗಳಿಗೆ ತೆರಿಗೆ ಹಾಕಲಾಗಿದ್ದು, ತೆರಿಗೆ ಹಣ ಹೆಚ್ಚಿರುವುದರಿಂದ ಆಗಿನ ಸಣ್ಣ ಕೈಗಾರಿಕೆ ಸಚಿವರು ಹಾಗೂ ಆಗಿನ ಉಪ ಮುಖ್ಯಮಂತ್ರಿಗಳೊಂದಿಗೆ ಉದ್ಯಮಿಗಳು ಚರ್ಚಿಸಿ ತೆರಿಗೆ ಹಣವನ್ನು ಕಡಿಮೆ ಮಾಡುವಂತೆ ಒತ್ತಾಯಿಸಿದ್ದರು’ ಎಂದು ವಿವರಣೆ ನೀಡಿದರು.

’ತೆರಿಗೆಯನ್ನು ಸರ್ಕಾರ ಪರಿಷ್ಕರಿಸಿದ ನಂತರ ಪರಿಷ್ಕರಿಸಿದ ಮೊತ್ತವನ್ನು ಕಟ್ಟಬಹುದು. ಸದ್ಯಕ್ಕೆ ಈ ತೆರಿಗೆಯನ್ನು ಕಟ್ಟುವಂತೆ ಉದ್ಯಮಿಗಳ ಮನವೊಲಿಸಲಾಗುವುದು’ ಎಂದರು.

ಸದಸ್ಯೆ ಗಿರಿಜಾ ಧನಿಯಾಕುಮಾರ್ ’ನೀರು ಪೂರೈಕೆ ಕೊಳವೆ ಒಡೆದಾಗ ದುರಸ್ತಿ ಪಡಿಸುವ ನೌಕರರ ಸಮಸ್ಯೆ (ಲಿಕೇಜ್ ನೌಕರರ) ಹೆಚ್ಚಾಗಿದೆ. ಅಧಿಕಾರಿಗಳಿಗೆ ಹೇಳಿದರೂ ಸಮಸ್ಯೆ ಬಗೆಹರಿದಿಲ್ಲ. ಕೂಡಲೇ ಇದನ್ನು ಪರಿಹರಿಸಬೇಕು’ ಎಂದು ಸಭೆ ಗಮನ ಸೆಳೆದರು.

ಆಯುಕ್ತ ಟಿ.ಭೂಬಾಲನ್ ಮಾತನಾಡಿ, ‘ಈ ನೌಕರರ ಸಮಸ್ಯೆ ಇದೆ. ಗುತ್ತಿಗೆ ಮೂಲಕ ನೌಕರರನ್ನು ನೇಮಕ ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುವ ಕಾರ್ಯಕ್ರಮಗಳ ಸ್ವಚ್ಛತೆಗೆ ಪಾಲಿಕೆ ನೌಕರರನ್ನು ಕಳಿಸಲಾಗುತ್ತಿದೆ. ಇದಕ್ಕೆ ಅವಕಾಶ ಕೊಡಬಾರದು. ಕಾಲೇಜಿನ ಪ್ರಾಂಶುಪಾಲರು ಕಾರ್ಯಕ್ರಮ ಸಂಘಟಕರಿಂದ ಸ್ವಚ್ಛತೆಗೆಂದು ಹಣವನ್ನು ಪಡೆದಿರುತ್ತಾರೆ. ಹೀಗಾಗಿ, ಪೌರ ಕಾರ್ಮಿಕರನ್ನು ಸ್ವಚ್ಛತೆಗೆ ಕಳಿಸಬಾರದು ಎಂದು ಗಿರಿಜಾ ಧನಿಯಾಕುಮಾರ್ ಹೇಳಿದರು.

ಕಾಲೇಜಿನವರು ಸ್ವಚ್ಛತೆಗೆ ಹಣ ಪಡೆಯುತ್ತಿದ್ದರೆ ನಮ್ಮ ಪೌರ ಕಾರ್ಮಿಕರನ್ನು ಕಳಿಸುವುದಿಲ್ಲ ಎಂದು ಪಾಲಿಕೆ ಆಯುಕ್ತರು ಹೇಳಿದರು.

ಉಪ ಮೇಯರ್ ಬಿ.ಎಸ್. ರೂಪಶ್ರೀ, ಸ್ಥಾಯಿ ಸಮಿತಿ ಅಧ್ಯಕ್ಷೆ ಮಂಜುಳಾ, ಪಾಲಿಕೆ ಸದಸ್ಯರು ಹಾಗೂ ಪಾಲಿಕೆ ಅಧಿಕಾರಿಗಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT