ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸಿದ ಅಂತರ್ಜಲ; ಹೆಚ್ಚಿದ ಬವಣೆ

ಕುಣಿಗಲ್‌ ತಾಲ್ಲೂಕು 37 ಗ್ರಾಮಗಳಲ್ಲಿ ಬಿಗಡಾಯಿಸಿದ ಕುಡಿಯುವ ನೀರಿನ ಸಮಸ್ಯೆ
Last Updated 27 ಏಪ್ರಿಲ್ 2020, 16:55 IST
ಅಕ್ಷರ ಗಾತ್ರ

ಕುಣಿಗಲ್: ತಾಲ್ಲೂಕಿನಲ್ಲಿ ತಾಪಮಾನ 36 ಡಿಗ್ರಿಗೇರುತ್ತಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ಉಲ್ಬಣಗೊಳ್ಳುತ್ತಿದೆ. ತಾಲ್ಲೂಕು ಆಡಳಿತ ಸಹ ಸಮಸ್ಯೆಗೆ ಸ್ಪಂದಿಸಲು ಯತ್ನಿಸುತ್ತಿದ್ದರೂ, ಪ್ರಯೋಜನವಾಗುತ್ತಿಲ್ಲ. ಕಾರಣ ಅಂತರ್ಜಲ ಸಮಸ್ಯೆ.

ತಾಲ್ಲೂಕಿನ 36 ಗ್ರಾಮ ಪಂಚಾಯಿತಿ ಪೈಕಿ 15 ಗ್ರಾ.ಪಂ.ಗಳ 37 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಒಂದುವರೆ ತಿಂಗಳಿಂದ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.

ತಾಲ್ಲೂಕಿನಲ್ಲಿ 93 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, 78 ಘಟಕಗಳು ಚಾಲ್ತಿಯಲ್ಲಿವೆ. 15 ಘಟಕಗಳು ದುರಸ್ತಿಯಾಗಬೇಕಿದೆ.

ಈ ಹಿಂದೆ ಟ್ಯಾಂಕರ್ ನೀರು ಸರಬರಾಜಿನಲ್ಲಿ ಅವ್ಯವಹಾರ ನಡೆದ ಕಾರಣ ಸರ್ಕಾರ ನಿಯಮಗಳಲ್ಲಿ ಬದಲಾವಣೆ ಮಾಡಿದೆ. ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವವರು ನೀರನ್ನು ಟ್ಯಾಂಕರ್‌ಗೆ ತುಂಬುವ ಮತ್ತು ವಿತರಣೆ ಮಾಡುವ ಚಿತ್ರಗಳನ್ನು ಆ್ಯಪ್ ಮೂಲಕ ಅಪ್ಲೋಡ್ ಮಾಡಿದರೆ ಮಾತ್ರ ಬಿಲ್ ಪಾವತಿಯ ವ್ಯವಸ್ಥೆ ಜಾರಿಗೆ ತರಲಾಗಿದೆ. ಅಲ್ಲದೆ ನೀರು ಸರಬರಾಜಾಗುವ ಮಾರ್ಗದ ಮಾಹಿತಿ ನೀಡಲು ಜಿಪಿಎಸ್ ವ್ಯವಸ್ಥೆ ಸಹ ಮಾಡಲಾಗಿದೆ.

ಈ ಹೊಸ ವ್ಯವಸ್ಥೆ ಜಾರಿಯಾದ ಕಾರಣನಿಯಮಾವಳಿಗಳನ್ನು ಮೀರಲು ಸಾಧ್ಯವಾಗದ ಟ್ಯಾಂಕರ್ ಮಾಲೀಕರು ಟ್ಯಾಂಕರ್‌ ಒಂದಕ್ಕೆ ₹650 ದರ ನಿಗದಿ ಮಾಡಿದ್ದಾರೆ. ಈ ಮೊದಲು ₹550 ನೀಡಲಾಗುತಿತ್ತು ಎಂದು ಅಧಿಕಾರಿಗಳು ತಿಳಿಸಿದರು.

ಕಳೆದ ವರ್ಷ ಅಮೃತೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿತ್ತು. ಮಾರ್ಕೋನಹಳ್ಳಿ ಜಲಾಶಯದಿಂದ ಅಮೃತೂರು ಹೋಬಳಿ ಸಾಲುಕೆರೆಗಳಿಗೆ ನೀರು ಹರಿಸಿದ ಪರಿಣಾಮ ಅಂತರ್ಜಲ ಹೆಚ್ಚಾಗಿದೆ. ಕೊತ್ತಗೆರೆ, ಎಡೆಯೂರು, ಹುತ್ರಿದುರ್ಗ ಹೋಬಳಿಯಲ್ಲಿ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ಪಂಚಾಯಿತಿಯಿಂದ ಟ್ಯಾಂಕರ್ ಮೂಲಕ ಮತ್ತು ಖಾಸಗಿ ಕೊಳವೆಬಾವಿಗಳಿಂದ ನೀರು ಪಡೆದು ವಿತರಿಸಲಾಗುತ್ತಿದೆ.

ಅಂತರ್ಜಲ ಹೆಚ್ಚಿಸಿ

ಕೊಳವೆಬಾವಿಗಳನ್ನು ಕೊರೆಸುವುದರಿಂದ ಸಮಸ್ಯೆ ಬಗೆಹರಿಯಲ್ಲ. ಕೊಳವೆಬಾವಿ ಕೊರೆಯುವುದನ್ನು ಸ್ಥಗಿತಗೊಳಿಸಿ, ಅಂತರ್ಜಲ ಹೆಚ್ಚಿಸುವ ಜತೆಗೆ ಸ್ಥಳೀಯ ಕೆರೆಗಳಿಗೆ ನೀರು ತುಂಬುವಂತೆ ಮಾಡಿ. ಕೆರೆಗಳಿಂದ ನೀರು ಸರಬರಾಜಿಗೆ ಕ್ರಮತೆಗೆದುಕೊಳ್ಳುವ ಮೂಲಕ ಶಾಶ್ವತ ಪರಿಹಾರದತ್ತ ಗಮನ ಹರಿಸಬೇಕಿದೆ.

- ಕೆ.ಎಸ್.ಬಲರಾಂ, ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ

***

ಶಾಶ್ವತ ವ್ಯವಸ್ಥೆಗೆ ಗಮನ

ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಪಿಡಿಒಗಳು ಗಮನ ಹರಿಸಿ, ಕೂಡಲೇ ಮಾಹಿತಿ ನೀಡಿದರೆ ಟ್ಯಾಂಕರ್ ಮೂಲಕ ಸರಬರಾಜಿಗೆ ವ್ಯವಸ್ಥೆ ಮಾಡಲಾಗುವುದು. ಈಗಾಗಲೇ ನೀರಿನ ಸಮಸ್ಯೆ ಇರುವ 42 ಗ್ರಾಮಗಳನ್ನು ಗುರುತಿಸಲಾಗಿದ್ದು, 76 ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ತಾತ್ಕಾಲಿಕ ವ್ಯವಸ್ಥೆಗಿಂತಲೂ ಶಾಶ್ವತ ವ್ಯವಸ್ಥೆಗೆ ಗಮನ ಹರಿಸಲು ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗಿದೆ.

- ವಿಶ್ವನಾಥ್, ತಹಶೀಲ್ದಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT