ಭಾನುವಾರ, ಜೂನ್ 7, 2020
27 °C
17 ವರ್ಷದಿಂದ ನೀಗಿಲ್ಲ ಸಮಸ್ಯೆ, ಅಗ್ನಿಶಾಮಕ ದಳದ ಸಿಬ್ಬಂದಿಯ ಸಂಕಷ್ಟ ಸ್ಥಿತಿ

ಪಾವಗಡ: ಬೆಂಕಿ ನಂದಿಸಲು ನೀರಿಲ್ಲ!

ಕೆ.ಆರ್.ಜಯಸಿಂಹ Updated:

ಅಕ್ಷರ ಗಾತ್ರ : | |

ಪಾವಗಡ: ಬೇಸಿಗೆ ಬಂತೆಂದರೆ ಅಗ್ನಿಶಾಮಕ ದಳದ ಸಿಬ್ಬಂದಿಗೆ ಆತಂಕ. ಬೆಂಕಿ ಬಿದ್ದಿದೆ ಎಂಬ ಕರೆ ಬಂದರೆ ಎಲ್ಲಿಲ್ಲದ ದುಗುಡ.

ಪಟ್ಟಣದ ಅಗ್ನಿಶಾಮಕ ದಳದ ಸಿಬ್ಬಂದಿ ತಾಲ್ಲೂಕಿನಲ್ಲಿ ಎಲ್ಲೂ ಬೆಂಕಿ ಅವಘಡಗಳು ಸಂಭವಿಸದಿದ್ದರೆ ಸಾಕು ಎಂದು ಪ್ರಾರ್ಥಿಸುತ್ತಾರೆ. ಇದಕ್ಕೆ ನೀರಿನ ಅಭಾವವೇ ಪ್ರಮುಖ ಕಾರಣ. ಬೆಂಕಿ ನಂದಿಸುವ ಅಪಾಯಕಾರಿ ಕೆಲಸ ಒಂದೆಡೆಯಾದರೆ. ನೀರು ಹುಡುಕುವುದು ಅದಕ್ಕಿಂತಲೂ ಕಷ್ಟದ ಕೆಲಸ.

ದಿನಕ್ಕೆ ಎರಡಕ್ಕಿಂತ ಹೆಚ್ಚು ಅವಘಡಗಳು ಸಂಭವಿಸಿದರೆ ಏನೂ ಮಾಡಲಾಗದ ಸ್ಥಿತಿ. ಕೆಲಸ ಮಾಡುವ ಶಕ್ತಿ, ಮನಸ್ಸು ಇದ್ದರೂ ನೀರಿಲ್ಲದೆ ಕೈ ಕಟ್ಟಿ ಕೂರಬೇಕಾಗುತ್ತದೆ.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿನ ಕೊಳವೆಬಾವಿಯಲ್ಲಿ ಸಾಕಷ್ಟು ನೀರಿದ್ದರೂ ಪ್ರಯೋಜನವಿಲ್ಲ. ಸದ್ಯ ವಾರಕ್ಕೊಮ್ಮೆ ಅಥವಾ ಎರಡು ಬಾರಿ ನೀರು ಪೂರೈಸಲಾಗುತ್ತಿದೆ. ನಿತ್ಯ ಸಾವಿರಾರು ಲೀಟರ್ ನೀರು ಕೊಡಲು ಅವರಿಗೂ ಸಾಧ್ಯವಾಗುವುದಿಲ್ಲ. ವಿದ್ಯುತ್ ಬಿಲ್, ನಿರ್ವಹಣೆ ವೆಚ್ಚ ಇತ್ಯಾದಿಯ ನೆಪ ಹೇಳಿ ಎಪಿಎಂಸಿ ಸಿಬ್ಬಂದಿಯು ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ಸಾಗಹಾಕುತ್ತಾರೆ.

‘ಪುರಸಭೆಯ ನೀರು ಸಾಕಾಗುವುದಿಲ್ಲ. ವಸತಿ ನಿಲಯದ ದಿನಬಳಕೆಗೆ ನೀರು ಪೂರೈಸುತ್ತಿಲ್ಲ. ಮನೆಗಳಿಗೆ ಹಣ ತೆತ್ತು ಟ್ಯಾಂಕರ್ ನೀರು ಖರೀದಿಸಬೇಕು. ಇಂತಹ ಸ್ಥಿತಿಯಲ್ಲಿ ಅವರಿಂದ ಸಾವಿರಾರು ಲೀಟರ್ ನೀರು ನಿರೀಕ್ಷಿಸುವುದು ಹೇಗೆ’ ಎಂದು ಅಗ್ನಿಶಾಮಕ ದಳದ ಸಿಬ್ಬಂದಿಯೊಬ್ಬರು ಪ್ರಶ್ನಿಸುತ್ತಾರೆ.

ನೀರಿಗಾಗಿ ಖಾಸಗಿ ಕೊಳವೆ ಬಾವಿಗಳನ್ನು ಹುಡುಕಿಕೊಂಡು ಸಾಕಷ್ಟು ದೂರ ಹೋಗಬೇಕು. ಇದು ಒಂದು ದಿನದ ಕಷ್ಟವಲ್ಲ. ಒಮ್ಮೆ ನೀರು ಸಿಕ್ಕ ಕಡೆ ಮತ್ತೊಮ್ಮೆ ನೀರು ಸಿಗುತ್ತದೆ ಎಂಬ ಭರವಸೆ ಇರುವುದಿಲ್ಲ. ಮೊದಲು ಎಲ್ಲಿ ನೀರು ಸಿಗುತ್ತದೆ ಎಂದು ಹುಡುಕಬೇಕು, ನಂತರ ನೀರು ತುಂಬಿಸಿಕೊಂಡು ಬೆಂಕಿ ನಂದಿಸಬೇಕು.

ಪಟ್ಟಣದಲ್ಲಿ 2003 ರಲ್ಲಿಯೇ ಅಗ್ನಿಶಾಮಕ ಠಾಣೆ ಆರಂಭವಾಗಿದೆ. 2003ರಿಂದ 2007ರ ವರೆಗೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಠಾಣೆ ಇತ್ತು. 2007ರಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪಕ್ಕದಲ್ಲಿ ನಿರ್ಮಿಸಲಾದ ನೂತನ ಕಟ್ಟಡಕ್ಕೆ ಠಾಣೆಯನ್ನು ಸ್ಥಳಾಂತರಿಸಲಾಯಿತು. ಅಗ್ನಿಶಾಮಕ ಠಾಣೆ ಆರಂಭವಾಗಿ 17 ವರ್ಷ ಕಳೆದಿದೆ. ಆದರೆ ಈವರೆಗೆ ತುರ್ತು ಸೇವೆಗೆ ಅಗತ್ಯವಿರುವ ನೀರಿನ ಶಾಶ್ವತ ಮೂಲ ಕಲ್ಪಿಸು ವಲ್ಲಿ ಜನಪ್ರತಿನಿಧಿಗಳು, ಅಧಿಕಾರಿ ಗಳು ವಿಫಲರಾಗಿದ್ದಾರೆ.

3 ವಾಹನಗಳಿದ್ದು, ಅದರಲ್ಲಿ 2 ವಾಹನಗಳು ಕಾರ್ಯ ನಿರ್ವಹಿಸುತ್ತಿವೆ. ಮತ್ತೊಂದು ಸಂಪೂರ್ಣ ಹಾಳಾಗಿದೆ. ಈ ಹಿಂದೆ 2 ಕೊಳವೆ ಬಾವಿ ಕೊರೆಯಿಸಿ ನೀರು ಸಿಕ್ಕಿಲ್ಲ ಎಂದು ಸಂಬಂಧಿಸಿದವರು ಕೈ ತೊಳೆದುಕೊಂಡಿದ್ದಾರೆ. ಬೆಂಕಿ ಅವಘಡಗಳು ಹೆಚ್ಚು ಸಂಭವಿಸುವ ಪ್ರದೇಶ ಎಂದು ತಿಳಿದಿದ್ದರೂ ಯಾರೊಬ್ಬರೂ ಸಮಸ್ಯೆ ಬಗೆಹರಿಸುವ ಕಡೆ ಗಮನ ಹರಿಸುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.

ಸಿಬ್ಬಂದಿ ಕೊರತೆ
ಠಾಣೆಗೆ 41 ಸಿಬ್ಬಂದಿ ಮಂಜೂರು ಮಾಡಲಾಗಿದೆ. ಆದರೆ, 16 ಮಂದಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೂರು ವಾಹನಗಳಿಗೆ ಸದ್ಯ ಇರುವ ಸಿಬ್ಬಂದಿ ಸಾಕಾಗುವುದಿಲ್ಲ. ಒಂದು ವಾಹನ ಮೂಲೆ ಸೇರಿರುವುದರಿಂದ ಹೇಗೊ ಇರುವ ಸಿಬ್ಬಂದಿ ಬೆಂಕಿ ನಂದಿಸುವ ಕೆಲಸ ಮಾಡುತ್ತಿದ್ದಾರೆ. ಇದರೊಟ್ಟಿಗೆ ಕೊರೊನಾ ವೈರಸ್‌ ಹರಡದಂತೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಔಷಧಿ ಸಿಂಪಡಿಸುವ ಕೆಲಸಕ್ಕೂ ಇವರನ್ನು ಬಳಸಿಕೊಳ್ಳಲಾಗುತ್ತಿದೆ.

*
ಕೆಲಸಕ್ಕೆ ಬಾರದ ಯೋಜನೆಗಳಿಗೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ತುರ್ತು ಸೇವೆಗೆ ಅಗತ್ಯವಿರುವ ನೀರು ಪೂರೈಸದೆ ಇರುವುದು ಖಂಡನೀಯ.
-ಹರಿಕುಮಾರ್, ಪಾವಗಡ

*
ಇತ್ತೀಚೆಗೆ ಬೆಂಕಿ ಅವಘಡಗಳು ಹೆಚ್ಚುತ್ತಿವೆ. ಶಾಸಕರು, ಸಂಸದರು ತಮ್ಮ ಅನುದಾನದಲ್ಲಿ ಕೊಳವೆ ಬಾವಿ ಕೊರೆಸಿಕೊಟ್ಟರೆ ತಾಲ್ಲೂಕಿನ ಜನತೆಗೆ ಅನುಕೂಲವಾಗುತ್ತದೆ.
-ಷಾರಿಕ್, ಪಾವಗಡ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು