ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕನಾಯಕನಹಳ್ಳಿ | ಉಲ್ಬಣದ ಹಾದಿಯಲ್ಲಿ ನೀರಿನ ಸಮಸ್ಯೆ

ಚಿಕ್ಕನಾಯಕನಹಳ್ಳಿ ತಾಲ್ಲೂಕು ಹೊಸಹಳ್ಳಿಯಲ್ಲಿ ನೀರಿಗೆ ಹಾಹಾಕಾರ
Last Updated 24 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ಚಿಕ್ಕನಾಯಕನಹಳ್ಳಿ: ಕೊರೊನಾ ಭೀತಿ, ಲಾಕ್‌ಡೌನ್‌ನಿಂದ ಸಾರ್ವಜನಿಕರು ಒಂದೆಡೆ ಆತಂಕಕ್ಕೆ ಒಳಗಾಗಿದ್ದರೆ, ಇನ್ನೊಂದೆಡೆ ಬೇಸಿಗೆ ಪರಿಣಾಮ ಕುಡಿಯುವ ನೀರಿನ ಸಮಸ್ಯೆ ಹೈರಾಣಾಗಿಸಿದೆ.

ತಾಲ್ಲೂಕಿನ ಕೆಲವು ಹಳ್ಳಿಗಳಲ್ಲಿ ನೀರಿಗಾಗಿ ಖಾಲಿ ಬಿಂದಿಗೆ ಹಿಡಿದು ಸರತಿ ಸಾಲು ನಿಲ್ಲುವುದು ಸಾಮಾನ್ಯವಾಗಿದೆ. ಪಟ್ಟಣದ ಹೊರ ವಲಯದ ಹೊಸಹಳ್ಳಿಯಲ್ಲಿ ಈಗಾಗಲೇ ನೀರಿನ ಹಾಹಾಕಾರ ಆರಂಭವಾಗಿದೆ. ಜನತೆ ದಿನ ಬೆಳಗಾದರೆ ಗ್ರಾಮದಲ್ಲಿರುವ ನೀರಿನ ಟ್ಯಾಂಕ್ ಮುಂದೆ ಬಿಂದಿಗೆ ಹಿಡಿದು ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ನಾಲ್ಕು ಬಿಂದಿಗೆ ನೀರು ಹಿಡಿಯಲೂ ಗಂಟೆಗಟ್ಟಲೆ ಕಾಯಬೇಕಾದ ಸ್ಥಿತಿ ಉದ್ಭವಿಸಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ.

‘ಬೆಂಗಳೂರಿನಿಂದ ಮಕ್ಕಳು, ಮೊಮ್ಮಕ್ಕಳು ಮನೆಗೆ ಬಂದಿದ್ದಾರೆ. ಮೊದಲಿಗಿಂತ ಹೆಚ್ಚಾಗಿ ನೀರು ಖರ್ಚಾಗುತ್ತಿದೆ. ಬೇಸಿಗೆ ಬೇರೆ, ಬಿಸಿಲಿನ ದಗೆಗೆ ಸರತಿ ಸಾಲಿನಲ್ಲಿ ನಿಲ್ಲುವುದಕ್ಕೂ ತೊಂದರೆ’ ಎಂದು ಗೋಡೆಕೆರೆ ಗ್ರಾಮದ ಗೃಹಣಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ಬೋರ್‌ವೆಲ್‌ ನೀರು: ಪಟ್ಟಣದ ಪುರಸಭಾ ವ್ಯಾಪ್ತಿಯಲ್ಲಿ 23,208 ಜನಸಂಖ್ಯೆ ಇದೆ. ಕೊರೊನಾ ಲಾಕ್‌ಡೌನ್‌ನಿಂದಾಗಿ ಹೊರಗಡೆ ಉದ್ಯೋಗ ಮಾಡುತ್ತಿದ್ದ ಜನರು ಪಟ್ಟಣಕ್ಕೆ ಬಂದಿರುವುದರಿಂದ ಜನಸಂಖ್ಯೆ ಹೆಚ್ಚಾಗಿದೆ.

‘ಸದ್ಯ ಪುರಸಭೆಯಲ್ಲಿ ಕೊರೆಸಿರುವ 46 ಕೊಳವೆಬಾವಿಗಳಲ್ಲಿ 21ರಲ್ಲಿ ಮಾತ್ರ ನೀರು ಬರುತ್ತಿದೆ. ನಿತ್ಯ ಒಬ್ಬ ವ್ಯಕ್ತಿಗೆ 75 ಲೀಟರ್‌ ನೀರು ಅಗತ್ಯವಿದೆ. ಪುರಸಭಾ ವ್ಯಾಪ್ತಿಯಲ್ಲಿ ನೀರಿನ ಟ್ಯಾಂಕ್, ಬೀದಿ ನಲ್ಲಿ ಇರುವ ಕಡೆ ನಿಧಾನವಾಗಿ ನೀರು ಹರಿಸಲಾಗುತ್ತಿದೆ. ಕೆಲವು ಕಡೆ 8 ದಿನಕ್ಕೊಮ್ಮೆ, 10 ದಿನಕ್ಕೊಮ್ಮೆ ನೀರು ಹರಿಸಲಾಗುತ್ತಿದೆ. ಸದ್ಯಕ್ಕೆ ಪಟ್ಟಣದಲ್ಲಿ ನೀರಿಗೆ ಯಾವುದೇ ತೊಂದರೆ ಇಲ್ಲ’ ಎಂದು ಪುರಸಭೆ ಎಂಜಿನಿಯರ್ ಯೋಗಾನಂದ್ ಬಾಬು ತಿಳಿಸಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ತಾಲ್ಲೂಕಿನಲ್ಲಿ ಬೇಸಿಗೆ ಸಮಯದಲ್ಲಿ ನೀರಿನ ಸಮಸ್ಯೆ ಉದ್ಭವಿಸಬಹುದೆಂದು 51 ಗ್ರಾಮಗಳನ್ನು ಪಟ್ಟಿ ಮಾಡಿಕೊಂಡಿದೆ.

ಹೊಸ ಕೊಳವೆಬಾವಿಗೆ ಜೂನ್‌ನಲ್ಲಿ ಆದೇಶ
ಟಾಸ್ಕ್‌ಫೋರ್ಸ್ ಅಡಿಯಲ್ಲಿ ತಾಲ್ಲೂಕಿಗೆ ಅಗತ್ಯವಾಗಿ ನೀರಿನ ಸಮಸ್ಯೆ ಇರುವ ಕಡೆ 8 ಕೊಳವೆಬಾವಿ ಕೊರೆಯಲು ಶಾಸಕರು ಅನುಮತಿ ನೀಡಿದ್ದಾರೆ. ಉಳಿದಂತೆ ನೀರಿನ ಸಮಸ್ಯೆ ಎದುರಾದ ಕಡೆ ಗ್ರಾಮ ಪಂಚಾಯಿತಿಯಿಂದ 14ನೇ ಹಣಕಾಸು ಯೋಜನೆ ಅಡಿ ಟ್ಯಾಂಕರ್ ಮೂಲಕ ನೀರು ಹರಿಸಿ ಸಮಸ್ಯೆ ಬಗೆಹರಿಸಲಾಗುವುದು. ಹೊಸದಾಗಿ ಕೊಳವೆಬಾವಿ ಕೊರೆಯಿಸಲು ಇಲಾಖೆಗೆ ಜೂನ್ ನಂತರ ಆದೇಶ ಬರಲಿದೆ.
–ರಮೇಶ್, ಎಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಚಿಕ್ಕನಾಯಕನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT