ಶನಿವಾರ, ಡಿಸೆಂಬರ್ 7, 2019
21 °C
ಶಿರಾಗೇಟ್ ವಿವಿದೋದ್ದೇಶ ಸೌಹಾರ್ದ ಸಹಕಾರಿ ನಿಯಮಿತದ 8ನೇ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಕೆ.ದೊರೈರಾಜ್ ಕಳವಳ

ಆರ್ಥಿಕ ಹಿಂಜರಿತ ಸಹಕಾರ ಚಳವಳಿಗೆ ಸಂಕಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ರಾಷ್ಟ್ರದಲ್ಲಿ ಉಂಟಾಗಿರುವ ಆರ್ಥಿಕ ಹಿಂಜರಿತದಿಂದ ರೈತರು, ಕಾರ್ಮಿಕರು, ಜನಸಾಮಾನ್ಯರ ಆದಾಯ, ಉಳಿಕೆ ಇಳಿಮುಖವಾಗುತ್ತಿದ್ದು, ಇದರಿಂದ ಸಹಕಾರಿ ಚಳವಳಿ ಸಂಕಟಕ್ಕೆ ಸಿಲುಕುವಂತಾಗಿದೆ ಎಂದು ಕೆ.ದೊರೈರಾಜ್ ಕಳವಳ ವ್ಯಕ್ತಪಡಿಸಿದರು.

ನಗರದ ಶಿರಾಗೇಟ್ ವಿವಿದೋದ್ದೇಶ ಸೌಹಾರ್ದ ಸಹಕಾರಿ ನಿಯಮಿತದ 8ನೇ ವರ್ಷದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದರು.

ದೇಶದ ಆರ್ಥಿಕ ದುಸ್ಥಿತಿ ಹದಗೆಟ್ಟಿದ್ದು, ಇದರಿಂದ ಖಾಸಗಿ ಬದುಕು, ಪ್ರಜ್ಞಾವಂತರ ಭಾವನೆ ಮತ್ತು ಬದುಕಿಗೆ ಅರ್ಥವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿಷಾದಿಸಿದರು.

ಮುಖ್ಯ ಅತಿಥಿಯಾದ ನಿವೃತ್ತ ಸಹಕಾರಿ ಸಹಾಯಕ ನಿಬಂಧಕ ಎಚ್.ಡಿ.ಶಿವಣ್ಣ ಮಾತನಾಡಿ, ‘ಸಹಕಾರ ಸಂಘಗಳು ಲಾಭ ಪಡೆಯಲು ದೊಡ್ಡ ಮಟ್ಟದ ಯೋಜನೆಗಳಿಗೆ ಕೆಲಸಕ್ಕೆ ತೊಡಗಬೇಕಾಗಿದೆ. ಸಹಕಾರಿಗಳು ನಿಸ್ವಾರ್ಥತೆಯಿಂದ ದುಡಿದರೆ ಯಶಸ್ಸು ಸಾಧಿಸಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

ಭೈರವಿ ಸಮಾಜದ ಅಧ್ಯಕ್ಷೆ ಸುಜಾತ ಮಾತನಾಡಿ, ’ಸಂಘ ಸಂಸ್ಥೆಗಳು ಕಟ್ಟುವುದು ಕಷ್ಟಕರವಾದುದು. ಹೊರಗೆ ನಿಂತು ಟೀಕೆ ಮಾಡುವ ಟೀಕೆಗಳಿಗೆ ಅಂಜದೇ ರಚನಾತ್ಮಕವಾಗಿ ಕೆಲಸ ಮಾಡಿಕೊಂಡು ಮುಂದೆ ಸಾಗಬೇಕು’ ಎಂದರು.

ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್ ಮುಜೀಬ್ ಮಾತನಾಡಿ, ’ರೈತರು, ಕಾರ್ಮಿಕರು, ಜನಸಾಮಾನ್ಯರು ಕೊಳ್ಳುವ ಶಕ್ತಿ ಇಲ್ಲದೇ ಮಾರುಕಟ್ಟೆ ಸೊರಗಿದೆ. ಮತ್ತೊಂದೆಡೆ ಕೇಂದ್ರ ಸರ್ಕಾರ ಕಾರ್ಪೊರೇಟ್ ತೆರಿಗೆ ಮತ್ತು ಸಾಲಗಳನ್ನು ಮನ್ನಾ ಮಾಡುತ್ತಿದೆ. ಬಿಕ್ಕಟ್ಟಿನಲ್ಲೂ ಬಂಡವಾಳಗಾರರು ಲಾಭ ಮಾಡಿಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿದರು.

ಅಧ್ಯಕ್ಷತೆವಹಿಸಿದ್ದ ಸಂಘದ ಅಧ್ಯಕ್ಷ ಎ.ಲೋಕೇಶ್, ‘ಸಂಘವು ಸಮಾಜದ ಕಟ್ಟ ಕಡೆಯ ಜನರಿಗೆ ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಿ ನೆರವಾಗುವ ಉದ್ದೇಶವಿದೆ. ಶ್ರಮಿಕರಿಗೆ ಸಾಲ ಕೊಡಲು ಸಂಘವು ಉತ್ಸುಕವಾಗಿದೆ’ ಎಂದರು.

ಸಂಘದ ಉಪಾಧ್ಯಕ್ಷ ಬಿ.ಷಣ್ಮುಖಪ್ಪ,ನಿರ್ದೇಶಕರಾದ ಕೃಷ್ಣಪ್ಪ, ಸುನಂದ, ಶಾಂತರಾಜು, ಶಶಿಕಲ ಉಪಸ್ಥಿತರಿದ್ದರು.
ಡಿ.ಆನಂದರಾಜು ಸ್ವಾಗತಿಸಿ, ಬಿ.ಜಿ.ಶಶಿಧರ್ ವಂದಿಸಿದರು. ವಿಧುರ ನಾರಾಯಣಾಚಾರ್ ನಿರೂಪಿಸಿದರು.

 

ಪ್ರತಿಕ್ರಿಯಿಸಿ (+)