ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಮತ ಎಣಿಕೆಗೂ ಮುನ್ನವೇ ಗೆಲುವಿನ ಸಂಭ್ರಮಾಚರಣೆ!

ಸಚಿವ ಶ್ರೀನಿವಾಸ್, ಶಾಸಕ ಗೌರಿಶಂಕರ್, ಪಕ್ಷದ ಕಾರ್ಯಕರ್ತರಿಂದ ಸಿದ್ಧತೆ
Last Updated 22 ಮೇ 2019, 15:31 IST
ಅಕ್ಷರ ಗಾತ್ರ

ತುಮಕೂರು: ಲೋಕಸಭಾ ಚುನಾವಣೆ ಮತ ಎಣಿಕೆ ಮುನ್ನಾ ದಿನವೇ ಜೆಡಿಎಸ್‌, ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಎಚ್.ಡಿ.ದೇವೇಗೌಡ ಅವರು ಗೆದ್ದ ರೀತಿ ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಸಂಭ್ರಮಿಸುತ್ತಿದ್ದಾರೆ!

ಬರೀ ಕಾರ್ಯಕರ್ತರು, ಬೆಂಬಲಿಗರಷ್ಟೇ ಅಲ್ಲ. ಸಣ್ಣ ಕೈಗಾರಿಕಾ ಸಚಿವ ಎಸ್.ಆರ್.ಶ್ರೀನಿವಾಸ್,ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಡಿ.ಸಿ.ಗೌರಿಶಂಕರ್ ಅವರೂ ಕೂಡಾ ಅಷ್ಟೇ ಉತ್ಸುಕರಾಗಿದ್ದಾರೆ. ಮುಖಂಡರು ಸಂಭ್ರಮಾಚರಣೆಗೆ ಬೆಂಬಲಿಗರನ್ನು ಆಹ್ವಾನಿಸಿರುವ ಪೋಸ್ಟ್ ಕಾರ್ಡ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ.

ಗೌರಿ ಶಂಕರ್ ಅವರು ತುಮಕೂರಿನ ಜಯನಗರ ಬಡಾವಣೆಯಲ್ಲಿರುವ ಅವರ ಗೃಹ ಕಚೇರಿಯಲ್ಲಿ ಗುರುವಾರ ದೇವೇಗೌಡರ ಗೆಲುವಿನ ಸಂಭ್ರಮಾಚರಣೆ ಮತ್ತು 87ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನೆ ಹಮ್ಮಿಕೊಂಡಿದ್ದು, ಸಿದ್ಧತೆಗಳು ಬುಧವಾರ ಭರದಿಂದ ನಡೆದಿದ್ದವು.

ಸಚಿವ ಶ್ರೀನಿವಾಸ್ ಅವರು ಗುಬ್ಬಿಯಲ್ಲಿ ಗುರುವಾರ ಬೆಳಿಗ್ಗೆ 11 ಗಂಟೆಗೆ ಸ್ವಗೃಹದಲ್ಲಿ ಸಂಭ್ರಮಾಚರಣೆಗೆ ಬೆಂಬಲಿಗರನ್ನು ಆಹ್ವಾನಿಸಿದ್ದಾರೆ.

ಮೊದಲೇ ಘೋಷಣೆ

ದೇವೇಗೌಡರು ಗೆಲ್ಲದೇ ಇದ್ದರೆ ಸಚಿವ ಸ್ಥಾನಕ್ಕೆ ತಾವು ರಾಜೀನಾಮೆ ನೀಡುವುದಾಗಿ ಮತದಾನ ನಡೆದ ದಿನವೇ ಸಚಿವ ಎಸ್ ಆರ್.ಶ್ರೀನಿವಾಸ್ ಅವರು ಮಾಡಿದ ಘೋಷಣೆಯ ಸಂದೇಶವುಳ್ಳ ಪೋಸ್ಟ್ ಕಾರ್ಡ್ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡಿತ್ತು. ಹೀಗೆ ಹೇಳುವ ಮೂಲಕ ದೇವೇಗೌಡರ ಖಚಿತ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದರು.

ಸಿಹಿ ಪೊಟ್ಟಣ ತಯಾರಿ: ದೇವೇಗೌಡರು ಗೆದ್ದೇ ಗೆಲ್ಲುತ್ತಾರೆ ಎಂಬ ಅಚಲ ವಿಶ್ವಾಸವುಳ್ಳ ಕಾರ್ಯಕರ್ತರು ಬುಧವಾರ ಮಧ್ಯಾಹ್ನ ನಗರದ ಮರಳೂರು ದಿಣ್ಣೆಯಲ್ಲಿ ಜೆಡಿಎಸ್ ಪಕ್ಷದ ಗುರುತಿನ ಚಿತ್ರದ ಕೊರಳ ಪಟ್ಟಿ (ರಿಬ್ಬನ್), ಸಿಹಿ ಪೊಟ್ಟಣಗಳನ್ನು ಸಿದ್ಧಪಡಿಸುವಲ್ಲಿ ತೊಡಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT