ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಬರಹವೂ ಹೋರಾಟದ ಮಾರ್ಗ

ಕತೆಗಾರ ಗುರುಪ್ರಸಾದ್ ಕಂಟಲಗೆರೆ ಅಭಿಪ್ರಾಯ
Last Updated 5 ಮಾರ್ಚ್ 2021, 4:03 IST
ಅಕ್ಷರ ಗಾತ್ರ

ತುಮಕೂರು: ‘ನನ್ನ ಸ್ನೇಹಿತರೆಲ್ಲಾ ಹೋರಾಟವನ್ನು ತಮ್ಮ ಅಭಿವ್ಯಕ್ತಿಯ ಮಾಧ್ಯಮವಾ ಗಿಸಿಕೊಂಡರೆ, ನಾನು ಬರಹವನ್ನೇ ಹೋರಾಟದ ಮಾರ್ಗವಾಗಿಸಿಕೊಂಡೆ’ ಎಂದು ಕತೆಗಾರ ಗುರುಪ್ರಸಾದ್ ಕಂಟಲಗೆರೆ ಹೇಳಿದರು.

ತುಮಕೂರು ವಿಶ್ವವಿದ್ಯಾಲಯ ಡಾ.ಡಿ.ವಿ.ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರ ಹಮ್ಮಿಕೊಂಡಿದ್ದ ‘ನನ್ನ ಕಥೆ ನಿಮ್ಮ ಜೊತೆ’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ತಮ್ಮ ಅನುಭವ, ಕಥೆ ಕಟ್ಟಲು ಕಾರಣವಾದ ಪರಿಸರದ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದರು.

‘ನನ್ನಪ್ಪ ಬುಡುಬುಡುಕೆ ಯವರೊಬ್ಬರ ಬಳಿ ನನ್ನ ಅಂಗೈ ತೋರಿಸಿ ನನ್ನ ಮಗನಿಗೆ ಅನ್ನದ ಋಣ ಇದೆಯಾ ನೋಡಿ ಅಂತ ಕೇಳಿದ್ದರು. ನನ್ನ ಹಸ್ತರೇಖೆಗಳನ್ನು ನೋಡಿ ಇವನಿಗೆ ಅಪಾರ ಅನ್ನದ ಋಣವಿದೆ, ಓದು ಹತ್ತುತ್ತೆ ಎಂದು ಹೇಳಿದ್ದರು. ನನ್ನೂರಿನ ಕೆಲವು ಗೆಳೆಯರು ಸ್ನಾತಕೋತ್ತರ ಪದವಿಗೆಂದು ಬೆಂಗಳೂರು ಜ್ಞಾನಭಾರತಿ ಕ್ಯಾಂಪಸ್‌ನ ಹಾಸ್ಟೆಲ್ ಸೇರಿ ದುಂಡುದುಂಡಗೆ, ಚೂರುಬೆಳ್ಳಗೂ ಆಗಿದ್ದರು. ಜ್ಞಾನಭಾರತಿ ಹಾಸ್ಟೆಲ್‍ನಲ್ಲಿ ಕೊಡುತ್ತಿದ್ದ ಚಪಾತಿ, ಸೋನಾ ಮಸೂರಿ ಅನ್ನದ ಕಥೆಯನ್ನು ರೋಚಕವಾಗಿ ಬಣ್ಣಿಸುತ್ತಿದ್ದರೆ ಬುಡುಬುಡಿಕೆಯವರು ಹೇಳಿದ ನನ್ನ ಅನ್ನದ ಋಣವೂ ಅದೇ ಇರಬಹುದಾ ಅನ್ನಿಸುತ್ತಿತ್ತು. ಆದರೆ ಆರ್ಥಿಕ ಕಾರಣಗಳಿಂದ ವಿಶ್ವವಿದ್ಯಾನಿಲಯಗಳಿಗೆ ಸೇರಿ ಕಲಿಯಲು ಆಗಲಿಲ್ಲ’ ಎಂದು ತಮ್ಮ ಹಿನ್ನೆಲೆಯನ್ನು ಬಿಚ್ಚಿಟ್ಟರು.

‘ದಲಿತ ಚಳವಳಿಯ ಹಿನ್ನೆಲೆಯಿಂದ ಬಂದ ನನಗೆ ಕುವೆಂಪು, ಬೇಂದ್ರೆ, ಕಾರಂತರ ಸಾಹಿತ್ಯ ಓದುವ ಮೊದಲೇ ಸಿದ್ದಲಿಂಗಯ್ಯ, ಕೆ.ಬಿ.ಸಿದ್ದಯ್ಯ ಅವರ ಹೋರಾಟದ ಹಾಡುಗಳು ಎದೆಗೆ ಇಳಿದಿದ್ದವು’ ಎಂದು ನೆನಪಿಸಿಕೊಂಡರು.

ಡಾ.ನಾಗಭೂಷಣ ಬಗ್ಗನಡು, ‘ಪಾರಂಪರಿಕವಾಗಿ ಶೋಷಣೆಗೆ ಒಳಗಾದ ಸಮುದಾಯಗಳು ಸಾಂಸ್ಕೃತಿಕವಾಗಿ ಶ್ರೀಮಂತವಾಗಿವೆ. ಆ ಕಾರಣದಿಂದಲೇ ತಳ ಸಮುದಾಯಗಳ ಅಭಿವ್ಯಕ್ತಿಗೆ ದೀರ್ಘಕಾಲದವರೆಗೆ ಜೀವಂತವಾಗಿ ನಿಲ್ಲಬಲ್ಲ ಗುಣ ಗುರುಪ್ರಸಾದರ ಕಥೆಗಳಲ್ಲಿ ಇದೆ’ ಎಂದರು.

ಪ್ರೊ.ಡಿ.ವಿ.ಪರಮಶಿವಮೂರ್ತಿ, ‘ಹೊಸ ತಲೆಮಾರಿನ ಬಹುತೇಕ ದಲಿತ ಕಥೆಗಾರರಲ್ಲಿ ಪರಂಪರೆಯ ಕುರಿತು ಆಕ್ರೋಶ, ಸಿಟ್ಟು, ವ್ಯವಸ್ಥೆಯ ವಿರುದ್ಧದ ಅಸಮಧಾನ ತುಂಬಿಕೊಂಡಿದೆ. ಗುರುಪ್ರಸಾದ್‍ ಅವರ ಕಥೆಗಳಲ್ಲಿ ದಲಿತರ ಬದುಕಿನ ಸಂಕಟಗಳ ನಿರ್ಲಿಪ್ತವಾದ ಅಭಿವ್ಯಕ್ತಿಯಿದೆ. ಇವರ ಕಥೆಗಳಲ್ಲಿರುವ ಲವಲವಿಕೆಯ ಭಾಷೆಯು ಅವರನ್ನು ಒಬ್ಬ ವಿಶಿಷ್ಟ ಕಥೆಗಾರರನ್ನಾಗಿ ಮಾಡಿದೆ’ ಎಂದು ಹೇಳಿದರು.

ಪ್ರೊ.ನಿತ್ಯಾನಂದ ಬಿ.ಶೆಟ್ಟಿ, ಪ್ರೊ.ಅಣ್ಣಮ್ಮ, ಡಾ.ಪಿ.ಎಂ.ಗಂಗಾಧರಯ್ಯ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT