ಅಪ್ಪ–ಮಕ್ಕಳಿಂದ ಜಿಲ್ಲೆಗೆ ಅನ್ಯಾಯ

7
ಹೇಮಾವತಿ ನೀರಿನ ವಿಚಾರ; ಸಚಿವ ಎಚ್‌.ಡಿ.ರೇವಣ್ಣ ವಿರುದ್ಧ ಮಾಜಿ ಸಂಸದ ಬಸವರಾಜು ಆಕ್ರೋಶ

ಅಪ್ಪ–ಮಕ್ಕಳಿಂದ ಜಿಲ್ಲೆಗೆ ಅನ್ಯಾಯ

Published:
Updated:
Prajavani

ತುಮಕೂರು: ‘ಅಪ್ಪ, ಮಕ್ಕಳು ಅಧಿಕಾರಕ್ಕೆ ಬಂದಾಗಲೆಲ್ಲಾ ಹೇಮಾವತಿ ನೀರಿನ ವಿಚಾರದಲ್ಲಿ ಜಿಲ್ಲೆಗೆ ಅನ್ಯಾಯವಾಗುತ್ತಿದೆ’ ಎಂದು ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಸಚಿವ ಎಚ್.ಡಿ.ರೇವಣ್ಣ ವಿರುದ್ಧ ಮಾಜಿ ಸಂಸದ ಜಿ.ಎಸ್.ಬಸವರಾಜು ಹರಿಹಾಯ್ದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹೇಮಾವತಿ ಜಿಲ್ಲೆಗೆ ಹರಿಯುವ ಆರಂಭದಲ್ಲಿಯೇ ದೇವೇಗೌಡರು ವಿರೋಧ ವ್ಯಕ್ತಪಡಿಸಿದ್ದರು. ಈಗ ರೇವಣ್ಣ ಜಿಲ್ಲೆಗೆ ನೀರು ಹರಿಸುವ ವಿಚಾರದಲ್ಲಿ ಉದ್ದಟನ ತೋರುತ್ತಿದ್ದಾರೆ. ದ್ವೇಷ ಸಾಧಿಸುತ್ತಿದ್ದಾರೆ’ ಎಂದು ಟೀಕಿಸಿದರು.

‘ರೇವಣ್ಣ ಅವರ ಕುತಂತ್ರದಿಂದ ಜಿಲ್ಲೆಯ ಜನರಿಗೆ ನೀರಿನ ಹಾಹಾಕಾರ ಉಂಟಾಗಿದೆ. ಜಿಲ್ಲೆಯ ರೈತರು ನಾಶವಾಗುವ ಹಂತ ತಲುಪಿದ್ದಾರೆ. ತನ್ನ ಅಣ್ಣನಿಗೆ ಎಚ್‌.ಡಿ.ಕುಮಾರ ಸ್ವಾಮಿ ಅವರು ಬುದ್ದಿ ಹೇಳಬೇಕು. ಆದರೆ ಅವರೂ ಬೇಜವಾಬ್ದಾರಿ ಪ್ರದರ್ಶಿಸುತ್ತಿದ್ದಾರೆ’ ಎಂದು ಟೀಕಿಸಿದರು.

‘ಹೇಮಾವತಿ ನೀರಾವರಿ ಸಲಹಾ ಸಮಿತಿಗೆ ರೇವಣ್ಣ ಅಧ್ಯಕ್ಷರಾಗಿದ್ದಾರೆ. ಹಾಸನ, ತುಮಕೂರು ಮತ್ತು ಮಂಡ್ಯದವರನ್ನು ಹೊರತುಪಡಿಸಿ ಉಳಿದ ಯಾರನ್ನಾದರೂ ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ಸರ್ಕಾರವನ್ನು ಕೋರುವೆ’ ಎಂದರು.

‘ಕಳೆದ ವರ್ಷ ಜಿಲ್ಲೆಗೆ 19 ಟಿಎಂಸಿ ಅಡಿ ಹೇಮಾವತಿ ನೀರು ಕೊಟ್ಟಿದ್ದರು. ಈ ಬಾರಿ 13 ಟಿಎಂಸಿ ಅಡಿ ನೀರು ಕೊಟ್ಟಿದ್ದಾರೆ. ಆದರೆ 22 ಟಿಎಂಸಿ ನೀರು ನೀಡಿರುವುದಾಗಿ ಅಧಿಕಾರಿಗಳು ಮತ್ತು ಸರ್ಕಾರ ಸುಳ್ಳು ಹೇಳುತ್ತಿದೆ’ ಎಂದು ದೂರಿದರು.

‘ಕಳೆದ ವರ್ಷ ಹೇಮಾವತಿ ಜಲಾಶಯಕ್ಕೆ 40 ಟಿಎಂಸಿ ಅಡಿ ನೀರು ಬಂದಿತ್ತು. ಈ ಬಾರಿ 108 ಟಿಎಂಸಿ ಅಡಿ ಬಂದಿದೆ. ಇಷ್ಟು ಸಮೃದ್ಧವಾಗಿ ನೀರು ಹರಿದರೂ ಜಿಲ್ಲೆಗೆ ನೀರು ಹರಿಸುತ್ತಿಲ್ಲ. ಈಗ ಡ್ಯಾಂನಲ್ಲಿ ಕೇವಲ 8 ಟಿಎಂಸಿ ಅಡಿ ನೀರಿದೆ. ಈ ವರ್ಷ ಬಂದ ಅಪಾರ ಪ್ರಮಾಣ ನೀರು ಎಲ್ಲಿ ಹೋಯಿತು. ಸಚಿವ ರೇವಣ್ಣ ಅವರು ತೂಬುವಾರು ಲೆಕ್ಕ ಕೊಡಬೇಕು’ ಎಂದು ಆಗ್ರಹಿಸಿದರು.

‘ಗುಬ್ಬಿ ತಾಲ್ಲೂಕಿನಲ್ಲಿ 160 ಕೆರೆಗಳನ್ನು ತುಂಬಿಸಬೇಕು. ಆದರೆ ಸಣ್ಣ ಪುಟ್ಟ ಕೆರೆಗಳು ಮಾತ್ರ ತುಂಬಿವೆ. ಸಚಿವ ಶ್ರೀನಿವಾಸ್ ಅವರ ಸ್ವಗ್ರಾಮದ ಕೆರೆಯೇ ತುಂಬಿಲ್ಲ’ ಎಂದರು.

‘ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಮೇಕೆದಾಟು ವಿಚಾರವಾಗಿ ರಾಜ್ಯಕ್ಕೆ ಒಳ್ಳೆಯದನ್ನೇ ಮಾಡಿದ್ದಾರೆ. ನರೇಂದ್ರ ಮೋದಿ ಅವರ ಸರ್ಕಾರವನ್ನು ಅಭಿನಂದಿಸಲಾಗುವುದು’ ಎಂದು ನುಡಿದರು. 

‘ಮೇಕೆದಾಟು ಜೊತೆಗೆ ಹೇಮಾವತಿ ಜಲಾನಯನ ಪ್ರದೇಶದಲ್ಲಿ ಒಂದು ಬಫರ್ ಡ್ಯಾಂ ನಿರ್ಮಿಸಲು ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅವರ ವರದಿಯಲ್ಲಿ ಪ್ರಸ್ತಾಪ ಇದೆ. ಎತ್ತರದಲ್ಲಿ ನೀರು ಸಂಗ್ರಹ ಮಾಡುವುದರಿಂದ ಗುರುತ್ವಾಕರ್ಷಣೆಯ ಮೂಲಕ ನೀರು ಹರಿಯಲಿದೆ. ಈ ಬಗ್ಗೆ ಪರಿಶೀಲಿಸಲು ಸರ್ಕಾರಕ್ಕೆ ಸಲಹೆ ನೀಡಲಾಗಿದೆ’ ಎಂದು ಹೇಳಿದರು.

ಜಿ.ಎನ್.ಬೆಟ್ಟಸ್ವಾಮಿ, ಸಿ.ಎನ್.ರಮೇಶ್, ಹುಲಿನಾಯ್ಕರ್, ಹುಚ್ಚಯ್ಯ ಗೋಷ್ಠಿಯಲ್ಲಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !