ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುರುವೇಕೆರೆ: ಹೆಸರಿಗೆ ಹಳದಿ ರೋಗ, ಸ್ಥಳೀಯರಲ್ಲಿ ಆತಂಕ

ತಾಲ್ಲೂಕಿನ ಸುತ್ತಮುತ್ತಲ ಹಳ್ಳಿಗಳಲ್ಲಿ ರೋಗ ಪತ್ತೆ
Last Updated 17 ಜೂನ್ 2020, 8:45 IST
ಅಕ್ಷರ ಗಾತ್ರ

ತುರುವೇಕೆರೆ: ತಾಲ್ಲೂಕಿನ ಕೆಲ ಭಾಗಗಳಲ್ಲಿ ಹೆಸರು ತಾಕಿಗೆ ಹಳದಿ ರೋಗ ಕಾಣಿಸಿಕೊಂಡಿದ್ದು, ಪೂರ್ವ ಮುಂಗಾರು ಬೆಳೆಗಾರರಲ್ಲಿ ಆತಂಕ ಉಂಟು ಮಾಡಿದೆ.

ಈ ಬಾರಿ ಪೂರ್ವ ಮುಂಗಾರು ಮಳೆ ಎಲ್ಲ ಕಡೆ ಸಮನಾಗಿ ಹಂಚಿಕೆಯಾಗದೆ ಆಯ್ದ ಪ್ರದೇಶಗಳಲ್ಲಿ ಉತ್ತಮ ಮಳೆ ಆಯಿತು. ಭೂಮಿ ಹದ ಮಾಡಿಕೊಂಡಿದ್ದ ರೈತರು ಹೆಸರು ಬೀಜ ಬಿತ್ತನೆ ಮಾಡಿದರು. ಸಕಾಲಕ್ಕೆ ಉತ್ತಮ ಮಳೆ ಆಗಿದ್ದರಿಂದ ಅಲ್ಲಲ್ಲಿ ಹೆಸರು ತಾಕು ಸಮೃದ್ಧವಾಗಿ ಬೆಳೆದು ಹೂವು, ಕಾಯಿ ಕಟ್ಟಿತ್ತು.

ಆದರೆ, ಕೆಲವೆಡೆ ಗಿಡಕ್ಕೆ ಹಳದಿ ರೋಗ ತಗುಲಿ ಎಲೆಗಳೆಲ್ಲ ಹಳದಿ ಬಣ‍್ಣಕ್ಕೆ ತಿರುಗಿವೆ. ಆರಂಭದಲ್ಲಿ ಒಂದೆರಡು ಗಿಡಕ್ಕೆ ಈ ರೋಗ ಕಾಣಿಸಿಕೊಂಡಿತು. ದಿನಕಳೆದಂತೆ ಎಲ್ಲ ಗಿಡಗಳಿಗೆ ಆವರಿಸಿ ಗಿಡವೆಲ್ಲ ಮುರುಟಾಗಿ ಬಿಟ್ಟಿದೆ.

ತಾಲ್ಲೂಕಿನ ಕೊಂಡಜ್ಜಿ, ಗೊಪ್ಪೇನಹಳ್ಳಿ, ಬಾಣಸಂದ್ರ, ದುಂಡಾ, ಕುರುಬರಹಳ‍್ಳಿ ಬ್ಯಾಲ, ತಾಳಕೆರೆ, ಕಲ್ಕೆರೆ, ಎ.ಹೊಸಹಳ್ಳಿ, ಹುಲ್ಲೇಕೆರೆ, ಸಾರಿಗೇಹಳ್ಳಿ, ಮಾಯಸಂದ್ರ, ದಂಡಿನಶಿವರ ಮತ್ತು ದಬ್ಬೇಘಟ್ಟ ಹೋಬಳಿಯ ಕೆಲವು ಭಾಗದಲ್ಲಿ ಹಳದಿ ಬಣ್ಣದ ರೋಗ ಕಂಡು ಬಂದಿದೆ.

ರೋಗ ಹೇಗೆ ಹರಡುತ್ತದೆ: ಹೆಸರು ಗಿಡ ಹೂವು, ಈಚು ಕಟ್ಟುವ ಹಂತದಲ್ಲಿ ಶೀತದ ಹವಾಮಾನ ಆರಂಭವಾಯಿತು. ಹಳದಿ ರೋಗ ಹರಡುವ ವೈರಾಣು ಬಿಳಿ ನೊಣ(ವೈಜ್ಞಾನಿಕ ಹೆಸರು ಬೆಮಿಸಿಯಾ ಟಾಬಾಸಿ) ಹೆಸರು ತಾಕಿನ ಎಲೆಯ ತಳಭಾಗದಲ್ಲಿ ಸೇರಿಕೊಂಡು ಪತ್ರಹರಿತ್ತಿನ ರಸವನ್ನು ಹೀರುತ್ತಾಹೋದಂತೆ ಗಿಡ ಹಳದಿ ಬಣ‍್ಣವಾಗಿ ಮಾರ್ಪಾಡಾಗುತ್ತದೆ. ಪೋಷಕಾಂಶವಿಲ್ಲದೆ ಹೆಸರು ತಾಕು ಮುರುಟಿಕೊಳ್ಳುತ್ತದೆ. ರೋಗ ಬಾಧಿತ ಗಿಡ ಹಳದಿ ಬಣ್ಣದ ಹೆಸರು ಚೊಟ್ಟು ಬಿಟ್ಟಿದೆ. ಕಾಳುಗಳು ಸರಿಯಾಗಿ ಕಟ್ಟದೆ ಅರ್ಧದಷ್ಟು ಇಳುವರಿ ಕಡಿಮೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಎಚ್‍.ಆರ್‌.ಪ್ರಮೋದ್‍ಕುಮಾರ್‌.

ನಿಯಂತ್ರಣ ಹೇಗೆ: ಆರಂಭದಲ್ಲಿ ಹಳದಿ ನಂಜು ರೋಗ ಕಾಣಿಸಿಕೊಂಡ ತಕ್ಷಣ ರೋಗ ಬಾಧಿತ ಗಿಡಗಳನ್ನು ತಕ್ಷಣ ಬುಡಸಮೇತ ಕಿತ್ತು ನಾಶಮಾಡಬೇಕು. ಹಾಗೂ 1 ಲೀಟರ್‌ ನೀರಿಗೆ 1.7 ಎಂ.ಎಲ್‍ ಇಮಿಡಾಕ್ಲೊಪ್ರಿಡ್ ಅಥವಾ ಅರ್ಧ ಎಂ.ಎಲ್‍ ಥಯೋಮೆಥಾಕ್ಸಾಮ್ ದ್ರಾವಣ ಸಿಂಪಡಿಸಬೇಕು. ಆಗ ತಕ್ಕಮಟ್ಟಿಗೆ ರೋಗ ತಹಬದಿಗೆ ಬರಲಿದೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT