ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೌರ ಮಾಡಲು ಚಿನ್ನದ ರೇಜರ್‌!

ಸಾಂಗ್ಲಿಯ ಕೇಶ ವಿನ್ಯಾಸಕಾರರೊಬ್ಬರ ಪ್ರಯೋಗ
Last Updated 8 ಜೂನ್ 2018, 19:30 IST
ಅಕ್ಷರ ಗಾತ್ರ

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ರಾಜ– ಮಹಾರಾಜರು, ಆಗರ್ಭ ಶ್ರೀಮಂತರು ಬೆಳ್ಳಿ– ಬಂಗಾರದ ತಟ್ಟೆಯಲ್ಲಿ ಊಟ ಮಾಡುತ್ತಾರೆ ಎನ್ನುವುದನ್ನು ಕೇಳಿರಬಹುದು. ಇಲ್ಲೊಬ್ಬರು ಕ್ಷೌರ ಮಾಡಲು ಚಿನ್ನದ ಸಾಧನ (ರೇಜರ್‌) ಬಳಸುವುದನ್ನು ಕೇಳಿದ್ದೀರಾ?!

ಚಿಕ್ಕೋಡಿಯಿಂದ 50 ಕಿ.ಮೀ. ದೂರದ, ಮಹಾರಾಷ್ಟ್ರದ ಸಾಂಗ್ಲಿಯ ಗಾಂವಬಾಗ್‌ನಲ್ಲಿರುವ ‘ಉಸ್ತ್ರಾ ಫಾರ್‌ ಮೆನ್ಸ್‌’ ಸಲೂನ್‌ ಮಾಲೀಕ ರಾಮಚಂದ್ರ ದತ್ತಾತ್ರೇಯ ಕಾಸೀದ್‌ ಈ ಪ್ರಯೋಗ ಮಾಡುತ್ತಿದ್ದಾರೆ. ಗ್ರಾಹಕರು ಮುಂಚಿತವಾಗಿ ಬುಕ್ಕಿಂಗ್‌ ಮಾಡಿ ಇಲ್ಲಿಗೆ ಬರುತ್ತಿದ್ದಾರೆ!

₹ 3.55 ಲಕ್ಷ ವೆಚ್ಚದಲ್ಲಿ 105 ಗ್ರಾಂ (18 ಕ್ಯಾರೆಟ್‌) ಚಿನ್ನ ಬಳಸಿ ಈ ಸಾಧನವನ್ನು ಮಾಡಿಸಿಕೊಂಡಿದ್ದಾರೆ. ಗ್ರಾಹಕರಿಗೆ ಅದರಿಂದಲೇ ಕ್ಷೌರ ಮಾಡುವ ಮೂಲಕ ಗಮನಸೆಳೆದಿದ್ದಾರೆ.

ಸಾಂಗ್ಲಿಯ ಚಂದುಕಾಕಾ ಜ್ಯುವೆಲ್ಲರ್ಸ್‌ನವರು, ಪುಣೆಯ ಮಿಥುನ್‌ ರಾಣಾ ಎಂಬ ಕುಶಲಕರ್ಮಿಯಿಂದ ಇದನ್ನು ಮಾಡಿಸಿಕೊಟ್ಟಿದ್ದಾರೆ. ಇದನ್ನು ಸಿದ್ಧಪಡಿಸಲು 22 ದಿನ ಬೇಕಾಯಿತಂತೆ. ರಾಮಚಂದ್ರ ಅವರು, ತಿಂಗಳ ಹಿಂದೆ ನಡೆದ ತಮ್ಮ ತಂದೆ–ತಾಯಿಯ 33ನೇ ಮದುವೆ ವಾರ್ಷಿಕೋತ್ಸವದ ಸವಿನೆನಪಿನಲ್ಲಿ ಇದನ್ನು ಬಳಸುವುದಕ್ಕೆ ಶುರು ಮಾಡಿದ್ದಾರೆ. ಮೊದಲಿಗೆ, ತಂದೆ ದತ್ತಾತ್ರೇಯ ಅವರಿಗೇ ಇದರಿಂದ ಕ್ಷೌರ ಮಾಡಿದ್ದಾರೆ.

‘ವೃತ್ತಿಯಲ್ಲಿ ವಿಶೇಷತೆ ಅಳವಡಿಸಿಕೊಳ್ಳುವ ಮೂಲಕ ಗ್ರಾಹಕರನ್ನು ಸೆಳೆಯಲು ಈ ಬಂಗಾರದ ರೇಜರ್‌ ಮಾಡಿಸಿದ್ದೇನೆ. ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಇದರಿಂದ ದಾಡಿ ಮಾಡಿದರೆ ₹ 200 ಪಡೆಯುತ್ತೇನೆ. ಬಹುತೇಕರು ಇದನ್ನೇ ಬಳಸುವಂತೆ ಕೇಳುತ್ತಾರೆ. ಡೊಂಬಿವಲಿಯ ಒಂದು ಕುಟುಂಬದವರು ತಮ್ಮ ಮಗನ ಜವುಳ ತಗೆಸುವುದಕ್ಕೆಂದೇ ಇಲ್ಲಿಗೆ ಬಂದಿದ್ದರು. ಸಾಂಗ್ಲಿ ಸುತ್ತಮುತ್ತಲಿನ 50 ಕಿ.ಮೀ. ದೂರದಿಂದಲೂ ಯುವಕರು ಇಲ್ಲಿಗೆ ಬಂದು ಬಂಗಾರದ ರೇಜರ್‌ನಿಂದಲೇ ದಾಡಿ ಮಾಡಿಸಿಕೊಂಡು ಹೋಗುತ್ತಾರೆ. ಈ ಬಗ್ಗೆ ಜನರೇ ಪ್ರಚಾರ ಮಾಡುತ್ತಿದ್ದಾರೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಸದ್ಯ, ಇದಕ್ಕೆ ಮಾಮೂಲಿ ಬ್ಲೇಡ್‌ಗಳನ್ನು ಬಳಸುತ್ತಿದ್ದು, ಮುಂಬರುವ ದಿನಗಳಲ್ಲಿ ಚಿನ್ನಲೇಪಿತ ಬ್ಲೇಡ್‌ಗಳನ್ನು ಬಳಸುವ ವಿಚಾರವಿದೆ ಎಂದು ಅವರು ಹೇಳಿದರು.

–ಸುಧಾಕರ ತಳವಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT