ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಸಕಾಲದಲ್ಲಿ ಚಿಕಿತ್ಸೆ ಸಿಗದೆ ಯುವಕ ಸಾವು

Last Updated 24 ಮಾರ್ಚ್ 2023, 14:24 IST
ಅಕ್ಷರ ಗಾತ್ರ

ಶಿರಾ (ತುಮಕೂರು): ತಾಲ್ಲೂಕಿನ ಕಳ್ಳಂಬೆಳ್ಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶುಕ್ರವಾರ ಕರೆತಂದಿದ್ದ ಯುವಕ ಸಕಾಲದಲ್ಲಿ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾರೆ. ಆ ಸಮಯದಲ್ಲಿ ವೈದ್ಯರು ಆಸ್ಪತ್ರೆಯಲ್ಲಿ ಇರಲಿಲ್ಲ. ನರ್ಸ್ ಚಿಕಿತ್ಸೆ ನೀಡುವ ವೇಳೆಗೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ತಾಲ್ಲೂಕಿನ ಕಳ್ಳಿಪಾಳ್ಯ ಗ್ರಾಮದ ಶಾಂತರಾಜು (23) ಎಂಬುವರನ್ನು ಆಸ್ಪತ್ರೆಗೆ ಕರೆದುಕೊಂಡು ಬಂದ ಸಮಯದಲ್ಲಿ ಚಿಕಿತ್ಸೆ ನೀಡಲು ವೈದ್ಯರು ಇರಲಿಲ್ಲ. ನರ್ಸ್ ತಪಾಸಣೆ ಮಾಡಿ ಮೃತಪಟ್ಟಿರುವುದಾಗಿ ಹೇಳಿದರು ಎಂದು ಮೃತನ ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಕರ್ತವ್ಯ ನಿರ್ವಹಿಸಬೇಕಿದ್ದ ಡಾ.ರಾಮೇಗೌಡ ಗೈರುಹಾಜರಾಗಿದ್ದರು.

ಆಸ್ಪತ್ರೆಗೆ ಬರುವ ವೇಳೆಗೆ ರೋಗಿ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ಸಿಬ್ಬಂದಿ ಹೇಳುತ್ತಿದ್ದರು ಸಹ ಮರಣ ಹೊಂದಿರುವ ಬಗ್ಗೆ ದೃಢೀಕರಣ ಪತ್ರ ನೀಡಲು ನಿರಾಕರಿಸಿರುವುದು ಅನುಮಾನಗಳಿಗೆ ಕಾರಣವಾಗಿದೆ.

ಶಾಂತರಾಜು ಟ್ರ್ಯಾಕ್ಟರ್ ಚಾಲಕರಾಗಿದ್ದಾರೆ. ಬೆಳಿಗ್ಗೆ ಹೊಟ್ಟೆ ಉರಿ ಕಾಣಿಸಿಕೊಂಡಿದ್ದು, ಮನೆಯಲ್ಲಿ ಮಜ್ಜಿಗೆ ಕುಡಿದು ಮಲಗಿದ್ದಾರೆ. ಎಷ್ಟು ಹೊತ್ತಾದರೂ ಎದ್ದಿಲ್ಲ. ಕೊನೆಗೆ, ಮನೆಯವರು ಎಬ್ಬಿಸುವ ಪ್ರಯತ್ನ ಮಾಡಿದ್ದಾರೆ. ಅವರು ಎದ್ದೇಳದ ಕಾರಣ ಆಸ್ಪತ್ರೆಗೆ ಕರೆ ತಂದಿದ್ದಾರೆ. ಈ ಸಮಯದಲ್ಲಿ ವೈದ್ಯರು ಇಲ್ಲದೆ ಪರೀಕ್ಷೆ ನಡೆಸಿದ ನರ್ಸ್, ರೋಗಿ ಮೃತಪಟ್ಟಿರುವುದಾಗಿ ಹೇಳಿದ್ದಾರೆ.

ರೋಗಿ ಆಸ್ಪತ್ರೆಗೆ ಬಂದ ನಂತರ ಮೃತಪಟ್ಟಿದ್ದಾರೆಯೇ ಅಥವಾ ಆಸ್ಪತ್ರೆಗೆ ಬರುವಾಗ ಸಾವನ್ನಪ್ಪಿದ್ದಾರೆಯೇ ಎನ್ನುವ ಗೊಂದಲ ಮುಂದುವರಿದಿದೆ.

ರಾಷ್ಟ್ರೀಯ ಹೆದ್ದಾರಿ-48ಕ್ಕೆ ಹೊಂದಿಕೊಂಡಂತೆ ಇರುವ ಈ ಆರೋಗ್ಯ ಕೇಂದ್ರ 24X7 ಕಾರ್ಯ ನಿರ್ವಹಿಸುತ್ತಿದೆ. ಈ ಹಿಂದೆ ಇಬ್ಬರು ವೈದ್ಯರು ಕೆಲಸ ನಿರ್ವಹಿಸುತ್ತಿದ್ದು, ಈಗ ಒಬ್ಬರೇ ವೈದ್ಯರು ಇದ್ದಾರೆ. ಗ್ರಾಮೀಣ ಸೇವೆಗಾಗಿ ನಿಯೋಜನೆಗೊಂಡಿದ್ದ ವೈದ್ಯ ಸ್ವಲ್ಪ ದಿನ ಕೆಲಸ ಮಾಡಿ ಮತ್ತೆ ಆಸ್ಪತ್ರೆಗೆ ಬಂದಿಲ್ಲ. ಇರುವ ಒಬ್ಬರೇ ವೈದ್ಯರು ದಿನದ 24 ಗಂಟೆಯೂ ಕೆಲಸ ನಿರ್ವಹಿಸಬೇಕಾಗಿದೆ.

ತನಿಖೆಗೆ ಆದೇಶ: ಡಿಎಚ್‌ಒ

ರೋಗಿ ಸಾವನ್ನಪ್ಪಿದ ಬಗ್ಗೆ ತನಿಖೆ ನಡೆಸುವಂತೆ ಶಿರಾ ತಾಲ್ಲೂಕು ವೈದ್ಯಾಧಿಕಾರಿಗೆ ಆದೇಶಿಸಿರುವುದಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಜುನಾಥ್ ತಿಳಿಸಿದರು.

ರೋಗಿ ಕರೆತಂದ ಸಮಯದಲ್ಲಿ ವೈದ್ಯರು ಆಸ್ಪತ್ರೆಯಲ್ಲಿ ಇರಲಿಲ್ಲ ಎಂಬುದು ಖಚಿತಪಟ್ಟಿದೆ. ರೋಗಿಯು ಆಸ್ಪತ್ರೆಗೆ ಬರುವ ವೇಳೆಗೆ ಮೃತಪಟ್ಟಿದ್ದರು ಎಂದು ಆಸ್ಪತ್ರೆ ಸಿಬ್ಬಂದಿ ಹೇಳುತ್ತಿದ್ದಾರೆ. ಘಟನೆ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಲಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT