ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆಯಿಂದ ರಾಜ್ಯ ಮಟ್ಟದ ಯುವಜನೋತ್ಸವ

30 ಜಿಲ್ಲೆಯಿಂದ 1700 ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆ, 5 ವೇದಿಕೆಗಳಲ್ಲಿ ಮೂರು ದಿನ ಹಾಡು, ನೃತ್ಯ, ಸಂಗೀತ ಕಲರವ
Last Updated 5 ಡಿಸೆಂಬರ್ 2018, 13:50 IST
ಅಕ್ಷರ ಗಾತ್ರ

ತುಮಕೂರು: ‘ರಾಜ್ಯಮಟ್ಟದ ಯುವಜನೋತ್ಸವ’ ಡಿಸೆಂಬರ್ 7ರಿಂದ 9ರವರೆಗೆ ಮೂರು ದಿನಗಳ ಕಾಲ ನಗರದಲ್ಲಿ ನಡೆಯಲಿದ್ದು, 30 ಜಿಲ್ಲೆಯ 15ರಿಂದ 29 ವರ್ಷದೊಳಗಿನ ಅಂದಾಜು 1700 ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆ ಇದೆ’ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ಹೇಳಿದರು.

‘ಈಗಾಗಲೇ ಸ್ಪರ್ಧೆಗೆ 823 ಯುವಕರು, 623 ಯುವತಿಯರು ಸೇರಿದಂತೆ1446 ಸ್ಪರ್ಧಿಗಳು ನೋಂದಣಿ ಮಾಡಿಸಿದ್ದು, ತುಮಕೂರು ಜಿಲ್ಲೆಯ 47 ಜನ ಇದ್ದಾರೆ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

’ನಗರದ ಗಾಜಿನ ಮನೆಯಲ್ಲಿ ಡಾ.ಗುಬ್ಬಿ ವೀರಣ್ಣ ವೇದಿಕೆ, ಬಾಲಭವನದಲ್ಲಿ ಅಮರ ಶಿಲ್ಪಿ ಜಕಣಾಚಾರಿ ವೇದಿಕೆ, ತುಮಕೂರು ವಿಶ್ವವಿದ್ಯಾನಿಲಯದ ಶಿವಕುಮಾರ ಸ್ವಾಮೀಜಿ ವೇದಿಕೆ, ಕನ್ನಡ ಭವನದಲ್ಲಿ ಬಿ.ಎಂ.ಶ್ರೀ ವೇದಿಕೆ ಹಾಗೂ ವಿಶ್ವವಿದ್ಯಾನಿಲಯದ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ತೀ.ನಂ.ಶ್ರೀ ವೇದಿಕೆ ಸೇರಿದಂತೆ ಒಟ್ಟು 5 ವೇದಿಕೆಗಳಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸ್ಪರ್ಧೆ ನಡೆಯಲಿವೆ’ ಎಂದು ತಿಳಿಸಿದರು.

’ಗುಂಪು ಸ್ಪರ್ಧೆ ವಿಭಾಗದಲ್ಲಿ ಜನಪದ ನೃತ್ಯ, ಜನಪದ ಗೀತೆ, ಏಕಾಂಕ ನಾಟಕ, ವೈಯಕ್ತಿಕ ಸ್ಪರ್ಧೆ ವಿಭಾಗದಲ್ಲಿ ಶಾಸ್ತ್ರೀಯ ಗಾಯನ( ಕರ್ನಾಟಕ), ಶಾಸ್ತ್ರೀಯ ಗಾಯನ (ಹಿಂದುಸ್ತಾನಿ), ಶಾಸ್ತ್ರೀಯ ವಾದ್ಯ (ಸಿತಾರ್, ತಬಲ, ಕೊಳಲು, ವೀಣೆ, ಮೃದಂಗ, ಹಾರ್ಮೋನಿಯಂ ಮತ್ತು ಗಿಟಾರ್) ಶಾಸ್ತ್ರೀಯ ನೃತ್ಯ ವಿಭಾಗ( ಭರತನಾಟ್ಯ, ಒಡಿಸ್ಸಿ, ಮಣಿಪುರಿ, ಕುಚುಪುಡಿ, ಕಥಕ್), ಆಶುಭಾಷಣ (ಇಂಗ್ಲಿಷ್ ಮತ್ತು ಹಿಂದಿ) ಸ್ಪರ್ಧೆ ನಡೆಯಲಿವೆ’ ಎಂದು ವಿವರಿಸಿದರು.

‘ಡಿ.7ರಂದು ಸಂಜೆ 4 ಗಂಟೆಗೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ಉದ್ಘಾಟನೆ ಮಾಡುವರು. ಸಚಿವರಾದ ವೆಂಕಟರಮಣಪ್ಪ, ಎಸ್.ಆರ್.ಶ್ರೀನಿವಾಸ್ ಭಾಗವಹಿಸುವರು. ಅಧ್ಯಕ್ಷತೆಯನ್ನು ಶಾಸಕ ಜಿ.ಬಿ.ಜ್ಯೋತಿಗಣೇಶ್ ವಹಿಸಲಿದ್ದಾರೆ’ ಎಂದು ತಿಳಿಸಿದರು.

‘ಡಿ.9ರಂದು ಸಂಜೆ 4ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಸಂಜೆ 6ಕ್ಕೆ ಅಮಾನಿಕೆರೆ ಗಾಜಿನ ಮನೆಯಲ್ಲಿ ಗಾನ ನೃತ್ಯ ಸಂಭ್ರಮ ಕಾರ್ಯಕ್ರಮ ನಡೆಯುವುದು’ ಎಂದು ಹೇಳಿದರು.

‘ಕಳೆದ ವರ್ಷ ಉಡುಪಿ ಜಿಲ್ಲೆಯಲ್ಲಿ ಯುವಜನೋತ್ಸವ ನಡೆದಿತ್ತು, ಈ ಬಾರಿ ತುಮಕೂರಿನಲ್ಲಿ ಕ್ರೀಡಾ ಇಲಾಖೆ, ರಾಜ್ಯ ಯುವ ಸಂಘಗಳ ಒಕ್ಕೂಟ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಆಶ್ರಯದಲ್ಲಿ ಸಂಘಟಿಸಲಾಗಿದೆ. ಈ ಉತ್ಸವಕ್ಕೆ ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ತಲಾ ₹ 25 ಲಕ್ಷ ಖರ್ಚು ಮಾಡುತ್ತಿವೆ. ಪ್ರಚಾರಕ್ಕೆ ₹ 5 ಲಕ್ಷ, ಊಟಕ್ಕೆ ₹ 13 ಲಕ್ಷ ಖರ್ಚು ಮಾಡಲಾಗುತ್ತಿದೆ. ಒಂದು ಊಟಕ್ಕೆ ₹ 252 ನಿಗದಿಪಡಿಸಲಾಗಿದೆ. ಗಾನ ನೃತ್ಯ ಸಂಭ್ರಮ ನಡೆಸಿಕೊಡುವ ಕಲಾವಿದರಿಗೆ ಸಂಭಾವನೆಯನ್ನೂ ಇದರಲ್ಲಿಯೇ ಪಾವತಿ ಮಾಡಲಾಗುತ್ತಿದೆ’ ಎಂದು ವಿವರಿಸಿದರು.

13 ಕಡೆ ವಸತಿ ವ್ಯವಸ್ಥೆ: ‘ ಸ್ಪರ್ಧಾರ್ಥಿಗಳಿಗೆ ನಗರದ 13 ವಸತಿ ನಿಲಯಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ಈ ವಸತಿ ನಿಲಯಗಳಿಗೆ ಮೂರು ದಿನಗಳ ಕಾಲ ರಜೆ ಘೋಷಣೆ ಮಾಡಲಾಗಿದೆ’ ಎಂದು ಜಿಲ್ಲಾಧಿಕಾರಿ ಹೇಳಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ ಕೆ.ಶ್ರೀನಿವಾಸ್, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಅನಿಸ್ ಕಣ್ಮಣಿ ಜಾಯ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಟಿ.ಜಯಲಕ್ಷ್ಮಿ ಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT