ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ ಎದುರಿಸಲು ಸಜ್ಜಾಗಿ: ಅಧಿಕಾರಿಗಳಿಗೆ ಸಿಇಒ ಸೂಚನೆ

ಜಿಲ್ಲಾ ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆ
Last Updated 18 ಸೆಪ್ಟೆಂಬರ್ 2018, 13:18 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯ 9 ತಾಲ್ಲೂಕುಗಳು ಬರಪೀಡಿತ ಎಂದು ಘೋಷಣೆಯಾಗಿದ್ದು ಪರಿಸ್ಥಿತಿ ಎದುರಿಸಲು ಅಧಿಕಾರಿಗಳು ಸಜ್ಜಾಗಿ ಎಂದು ಮಂಗಳವಾರ ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸೂಚಿಸಿದರು.

‘ಜಿಲ್ಲೆಯಲ್ಲಿ 7 ಲಕ್ಷ ಜಾನುವಾರುಗಳಿವೆ. ಈಗ 5.24 ಲಕ್ಷ ಮೆಟ್ರಿಕ್ ಟನ್ ಮೇವು ದಾಸ್ತಾನಿದೆ. ಈ ಮೇವು 21 ವಾರಕ್ಕೆ ಸಾಕಾಗುತ್ತದೆ. ಮುಂದಿನ ದಿನಗಳಲ್ಲಿ ಬರದ ತೀವ್ರತೆ ಹೆಚ್ಚಾದರೆ ಗೋಶಾಲೆಗಳನ್ನು ತೆರೆಯಲಾಗುವುದು. ಇದಕ್ಕೆ ಸ್ಥಳ ಪರಿಶೀಲಿಸುವಂತೆ ತಾಲ್ಲೂಕು ಸಹಾಯಕ ನಿರ್ದೇಶಕರಿಗೆ ಸೂಚಿಸಲಾಗಿದೆ’ ಎಂದು ಪಶುಪಾಲನಾ ಇಲಾಖೆ ನಿರ್ದೇಶಕರು ತಿಳಿಸಿದರು.

‘ಸದ್ಯದ ಮಟ್ಟಿಗೆ ಕೊರಟಗೆರೆ ತಾಲ್ಲೂಕಿನಲ್ಲಿ ಅಲ್ಪ ಪ್ರಮಾಣದಲ್ಲಿ ಮೇವಿನ ಸಮಸ್ಯೆ ಎದುರಾಗಿದೆ. ಉಳಿದ ತಾಲ್ಲೂಕುಗಳಲ್ಲಿ ಅಭಾವವಿಲ್ಲ. ನೀರಾವರಿಯುಳ್ಳ ಜಮೀನುಗಳ ಮಾಲೀಕರು ಮೇವು ಬೆಳೆಯುವಂತೆ ಪ್ರೋತ್ಸಾಹಿಸಲಾಗುವುದು. 2.20 ಲಕ್ಷ ಮೇವಿನ ಮಿನಿ ಕಿಟ್ ಅಗತ್ಯವಿದ್ದು ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ವಿವರಿಸಿದರು.

‘ಕುಡಿಯುವ ನೀರಿನ ಸಮಸ್ಯೆ ಉಂಟಾಗಬಹುದು. ಎಲ್ಲ ಇಲಾಖೆಗಳು ಮುಂಜಾಗ್ರತೆ ವಹಿಸಬೇಕು. ಈ ಬಗ್ಗೆ ಚರ್ಚಿಸಲು ಜಿಲ್ಲಾಧಿಕಾರಿ ಅವರಿಂದ ದಿನಾಂಕ ಪಡೆದು ಸಭೆ ಕರೆಯಲಾಗುವುದು’ ಸಿಇಒ ತಿಳಿಸಿದರು.

ಚಿಕ್ಕನಾಯಕನಹಳ್ಳಿ ತಾಲ್ಲೂಕಿನ 16, ಪಾವಗಡದ 82, ಮಧುಗಿರಿ 30, ಕುಣಿಗಲ್ 21, ಗುಬ್ಬಿ 125, ತಿಪಟೂರಿನ 32, ತುರುವೇಕೆರೆಯ 128, ತುಮಕೂರಿನ 79, ಶಿರಾ 30 ಮತ್ತು ಕೊಟಗೆರೆ ತಾಲ್ಲೂಕಿನ 35 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಕೆಲವು ಕಡೆಗಳಲ್ಲಿ ಈಗಾಗಲೇ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿದ್ದೇವೆ ಎಂದು ಗ್ರಾಮೀಣ ನೀರು ಸರಬರಾಜು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

‘ಜಿಲ್ಲೆಯಲ್ಲಿ ಪ್ರಾಥಮಿಕ ಮಾಹಿತಿ ಪ್ರಕಾರ 1.22 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ’ ಎಂದ ಕೃಷಿ ಇಲಾಖೆ ಅಧಿಕಾರಿ ತಾಲ್ಲೂಕುವಾರು ಬೆಳೆನಷ್ಟದ ವಿವರ ನೀಡಿದರು.

‘ಇಲಾಖೆಯಲ್ಲಿ ಶೇ 69ರಷ್ಟು ಪ್ರಗತಿ ಸಾಧಿಸಲಾಗಿದೆ. ಜಿಲ್ಲೆಗೆ 551 ಭವನಗಳ ಮಂಜೂರಾಗಿವೆ. 174 ಭವನಗಳ ಕಾಮಗಾರಿ ಪೂರ್ಣವಾಗಿವೆ. 68 ಕಡೆಗಳಲ್ಲಿ ನಿವೇಶನ ಬೇಕಾಗಿದೆ. ಒಂದು ವೇಳೆ ಸ್ಥಳ ಬದಲಾವಣೆ ಮಾಡುವುದಿದ್ದರೆ ಒಂದು ತಿಂಗಳಲ್ಲಿ ತಿಳಿಸಬೇಕು’ ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಡಾ.ದೇವರಾಜು ತಿಳಿಸಿದರು.

ಅಂಬೇಡ್ಕರ್ ಅಭಿವೃದ್ಧಿ ನಿಗಮ, ವಾಲ್ಮೀಕಿ ಅಭಿವೃದ್ಧಿ ನಿಗಮ, ದೇವರಾಜ ಅರಸು ಅಭಿವೃದ್ಧಿ ನಿಗಮ ಹಾಗೂ ಅಲ್ಪಸಂಖ್ಯಾರ ಅಭಿವೃದ್ಧಿ ನಿಗಮದ ಅಧಿಕಾರಿಗಳು ಗಂಗಾ ಕಲ್ಯಾಣ ಯೋಜನೆಯ ಸಾಧಕ ಬಾಧಕಗಳ ಅಂಕಿ ಅಂಶಗಳನ್ನು ವಿವರಿಸಿದರು. ಅಧಿಕಾರಿಗಳು ಉಳಿದ ಕಾಮಗಾರಿಗಳನ್ನು ಮುಗಿಸಲು 10, 15 ದಿನ ಕಾಲಾವಕಾಶ ನೀಡುವಂತೆ ಕೋರಿದರು.

ತಾಲ್ಲೂಕು ಮಟ್ಟದಲ್ಲಿ ಜರುಗುವ ಸರ್ಕಾರಿ ಕಾರ್ಯಕ್ರಮಗಳಿಗೆ ಸ್ಥಳೀಯ ಜನಪ್ರತಿನಿಧಿಗಳನ್ನು ಶಿಷ್ಟಾಚಾರದ ಪ್ರಕಾರ ಆಹ್ವಾನಿಸುತ್ತಿಲ್ಲ. ಈ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ತಾಲ್ಲೂಕು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲತಾ ರವಿಕುಮಾರ್ ಅವರು ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಇಒ, ತಾಲ್ಲೂಕು ಮಟ್ಟದ, ಗ್ರಾಮ ಮಟ್ಟದ ಕಾರ್ಯಕ್ರಮಗಳಿಗೆ ಸ್ಥಳೀಯ ಜನಪ್ರತಿನಿಧಿಗಳನ್ನು ಶಿಷ್ಟಾಚಾರದಂತೆ ಆಹ್ವಾನಿಸಬೇಕು. ಅಲ್ಲದೆ ಆಹ್ವಾನ ಪತ್ರಿಕೆಯನ್ನು ಸಂಬಂಧಿಸಿದ ತಹಶೀಲ್ದಾರ್‌ಗಳಿಂದ ಅನುಮೋದನೆ ಪಡೆಯಬೇಕು. ಈ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸೂಕ್ತ ನಿಗಾವಹಿಸಬೇಕು ಎಂದು ಸೂಚಿಸಿದರು.

ಶಿಕ್ಷಣ ಇಲಾಖೆ, ಹೇಮಾವತಿ ನೀರಾವರಿ ನಿಗಮ, ಅಬಕಾರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇಲಾಖೆವಾರು ಮಾಹಿತಿ ನೀಡಿದರು.

ಕೆಲಸ ಮಾಡುವುದಕ್ಕೆ ಬಿಡುವುದಿಲ್ಲ

ಸಾಮಾಜಿಕ ಅರಣ್ಯ ಇಲಾಖೆ ನಿರ್ದೇಶಕರು ತಮ್ಮ ಇಲಾಖೆಯ ಬಗ್ಗೆ ಮಾಹಿತಿ ನೀಡಲು ಮುಂದಾದರು. ಆಗ ಲತಾ ರವಿಕುಮಾರ್ ‘ನೀವು ನಮ್ಮನ್ನು ಭೇಟಿಯೇ ಆಗಿಲ್ಲ. ಜಿಲ್ಲೆಗೆ ಬಂದು ಎಷ್ಟು ದಿನಗಳಾಯಿತು’ ಎಂದು ಪ್ರಶ್ನಿಸಿದರು. ಅಧಿಕಾರಿ ಐದು ತಿಂಗಳು ಎಂದು ಉತ್ತರಿಸಿದರು. ಆಗ ‘ನೀವು ಈ ಹಿಂದೆ ಎಲ್ಲಿ ಕಾರ್ಯನಿರ್ವಹಿಸಿದ್ದೀರಿ. ಅಲ್ಲಿಯೂ ಇದೇ ರೀತಿ ಕೆಲಸ ಮಾಡಿದ್ದೀರಾ. ನಮ್ಮನ್ನು ಏಕೆ ಭೇಟಿ ಆಗಲಿಲ್ಲ’ ಎಂದು ಕಠಿಣವಾಗಿಯೇ ನುಡಿದರು.

‘ಅಧಿಕಾರಿಗಳು ನಮ್ಮನ್ನು ಭೇಟಿಯಾಗದಿದ್ದರೆ ಕೆಲಸ ಮಾಡುವುದಕ್ಕೆ ಬಿಡುವುದಿಲ್ಲ’ ಎಂದರು. ಅಧಿಕಾರಿ ಕ್ಷಮೆ ಕೋರಿದರು.

ಅಂಕಿ ಅಂಶದ ಸಭೆ

ವಿವಿಧ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆಯ ಅಂಕಿ ಅಂಶಗಳನ್ನು ಸಭೆಯ ಮುಂದಿಡುತ್ತಿದ್ದರೆ, ಸಿಇಒ ಅವರು ‘ಇಷ್ಟು ಕೆಲಸ ಆಗಿದೆ. ಉಳಿದ ಕೆಲಸವನ್ನು ಬೇಗ ಮುಗಿಸಿ’ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯಲ್ಲಿ ಬರ ಎದುರಾದರೆ ಅನುಸರಿಸಬೇಕಾದ ಕ್ರಮಗಳು ಏನು, ಈಗ ಯಾವ ಸಿದ್ಧತೆಗಳು ಆಗಿವೆ, ಮುಂಜಾಗ್ರತಾ ಕ್ರಮಗಳನ್ನು ಯಾವ ರೀತಿ ಕೈಗೊಳ್ಳಬೇಕು ಎನ್ನುವ ವಿಚಾರಗಳು ತೀವ್ರವಾಗಿ ಚರ್ಚೆಯೇ ಆಗಲಿಲ್ಲ. ಅಧಿಕಾರಿಗಳು ಅಂಕಿ ಅಂಶ ಹೇಳಿದರು, ಒಂದಿಷ್ಟು ಸೂಚನೆ ಪಡೆದರು...ಇಷ್ಟೇ ಸಭೆ ಎನ್ನುವಂತೆ ಪ್ರಗತಿ ಪರಿಶೀಲನೆ ಮುಗಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT