ಒಂದೇ ಊರಲ್ಲಿ ಶಿಕ್ಷಕನ ಎರಡು ದೇಗುಲ..!

7
ಒಂಭತ್ತು ದಶಕದಿಂದ ನಿತ್ಯ ಮುಂಜಾನೆ–ಮುಸ್ಸಂಜೆಯಲ್ಲಿ ತಪ್ಪದ ಪೂಜೆ

ಒಂದೇ ಊರಲ್ಲಿ ಶಿಕ್ಷಕನ ಎರಡು ದೇಗುಲ..!

Published:
Updated:
Deccan Herald

ಅಥರ್ಗಾ: ಪರವೂರಿನ ಶಿಕ್ಷಕರೊಬ್ಬರು ತಮ್ಮ ನಿಸ್ವಾರ್ಥ ಸೇವೆಯಿಂದ ಗ್ರಾಮಸ್ಥರ ಆರಾಧ್ಯ ದೈವವಾಗಿದ್ದಾರೆ. ನಿಧನರಾಗಿ 93 ವರ್ಷ ಗತಿಸಿದರೂ, ನಿತ್ಯ ಮುಂಜಾನೆ–ಮುಸ್ಸಂಜೆ ಈ ಶಿಕ್ಷಕರ ಮೂರ್ತಿಗೆ ಪೂಜೆ ಸಲ್ಲಿಕೆಯಾಗುವುದು ಇಲ್ಲಿನ ವಿಶೇಷ.

ಒಂದೇ ಊರಲ್ಲಿ ಒಬ್ಬರೇ ಶಿಕ್ಷಕರಿಗೆ ಎರಡು ಗುಡಿ ಕಟ್ಟಿಸಿದ್ದಾರೆ. ಒಂದು ಊರ ರಸ್ತೆ ಬದಿಯಲ್ಲಿದ್ದರೆ; ಇನ್ನೊಂದು ಗ್ರಾಮದ ಹೆಣ್ಣು ಮಕ್ಕಳ ಸರ್ಕಾರಿ ಶಾಲೆಯ ಆವರಣದಲ್ಲಿದೆ. ಎರಡಕ್ಕೂ ಅರ್ಧ ಕಿ.ಮೀ. ಅಂತರವಿದೆ. ಎರಡೂ ಕಡೆ ಪೂಜೆ ಸಲ್ಲಿಕೆಯಾಗುವುದು ವಿಶೇಷ.

ಇನ್ನೂ ಗ್ರಾಮದ ಪ್ರತಿ ಮನೆಗೊಬ್ಬ ‘ರೇವಣಸಿದ್ಧ’ ಎಂಬ ಹೆಸರಿನ ವ್ಯಕ್ತಿಯಿದ್ದಾರೆ. ಕೆಲ ಮನೆಗಳಲ್ಲಿ ದೊಡ್ಡ ರೇವಣಸಿದ್ಧಪ್ಪ, ಸಣ್ಣ ರೇವಣಸಿದ್ಧಪ್ಪರು ಇದ್ದಾರೆ. ಬಹುತೇಕರ ಮನೆಗಳ ದೇವರ ಕೋಣೆಯ ಜಗುಲಿಯಲ್ಲೂ ಇವರು ಸ್ಥಳ ಪಡೆದಿದ್ದಾರೆ.

ತಮ್ಮೂರಿನ ಒಳಿತಿಗೆ ಅಹೋರಾತ್ರಿ ಶ್ರಮಿಸಿದ್ದ ಶಿಕ್ಷಕ ಮೃತಪಟ್ಟ ಬಳಿಕ, ಊರಲ್ಲೇ ಸಮಾಧಿ ಮಾಡಿ, ಅಲ್ಲಿಯೇ ದೇಗುಲ ಕಟ್ಟಿ, ಪಂಚಲೋಹದ ವಿಗ್ರಹ ಪ್ರತಿಷ್ಠಾಪಿಸಿ ನಿತ್ಯವೂ ಪೂಜೆ ಸಲ್ಲಿಸುತ್ತಿದ್ದಾರೆ. ಊರ ಪ್ರಮುಖ ರಸ್ತೆಯ ಮಧ್ಯದಲ್ಲಿ ‘ರೇವಣಸಿದ್ಧೇಶ್ವರ’ ವೃತ್ತವನ್ನೂ ನಿರ್ಮಿಸಿ, ಗುರುವಿನ ಮೇಲಿನ ಅಭಿಮಾನ ಮೆರೆದಿದ್ದಾರೆ.

ಬಹುತೇಕರ ದಿನಚರಿ ಆರಂಭಗೊಳ್ಳುವುದು ರೇವಣಸಿದ್ಧೇಶ್ವರರ ದೇಗುಲಕ್ಕೆ ತೆರಳಿ ದರ್ಶನ ಪಡೆದ ಬಳಿಕವೇ. ಪ್ರತಿ ವರ್ಷ ಸೆ 5 ಬಂತೆಂದರೇ ಊರಲ್ಲಿ ಹಬ್ಬದ ವಾತಾವರಣ. ಬುಧವಾರ ನಸುಕಿನ ಐದರಿಂದ ಏಳವರವರೆಗೆ ಬರೋಬ್ಬರಿ ಎರಡು ತಾಸು ಗುಡಿಯಲ್ಲಿ ವಿಶೇಷ ಪೂಜೆ ನಡೆಯಿತು. ಮಾಸ್ತರ ಮೂರ್ತಿಗೆ ರುದ್ರಾಭಿಷೇಕ, ಸಹಸ್ರ ನಾಮಾರ್ಚನೆ ಸೇರಿದಂತೆ ಇನ್ನಿತರೆ ವಿಶೇಷ ಪೂಜೆ ಸಲ್ಲಿಕೆಯಾದವು.

ಗ್ರಾಮದಲ್ಲಿರುವ ನಾಲ್ಕು ಶಾಲೆಯ 2000ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಶಾಲೆಗಳಲ್ಲಿ ಶಿಕ್ಷಕರ ದಿನಾಚರಣೆ ಮುಗಿಯುತ್ತಿದ್ದಂತೆ, ರೇವಣಸಿದ್ಧೇಶ್ವರರ ಗುಡಿಗೆ ತೆರಳಿ ಗುರುವಿನ ದರ್ಶನ ಪಡೆದು ನಮನ ಸಲ್ಲಿಸಿದರು. ಬಳಿಕ ದೇಗುಲದ ಆವರಣದಲ್ಲಿಯೇ ಪ್ರಸಾದ ಸವಿದರು. ನಂತರ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಲ್ಲೀನರಾಗಿ ತಮ್ಮೂರ ಏಳ್ಗೆಗಾಗಿ ಶ್ರಮಿಸಿದ ಗುರುವನ್ನು ಸ್ಮರಿಸಿದರು.

ಹೆಣ್ಣುಮಕ್ಕಳ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿರುವ ರೇವಣಸಿದ್ಧೇಶ್ವರರ ಗುಡಿಯಲ್ಲಿ ಜಾತ್ರೆಯ ಸಂಭ್ರಮ ನೆರೆದಿತ್ತು. ಶಾಲೆಯ ಮಕ್ಕಳು ಸೇರಿದಂತೆ, ಊರವರು ಒಟ್ಟಾಗಿ ಗುರುವಿಗೆ ನಮನ ಸಲ್ಲಿಸಿದ್ದು ವಿಶೇಷವಾಗಿತ್ತು.

ರೇವಣಸಿದ್ಧಪ್ಪ ಕುರಿತಂತೆ:

1889ರಲ್ಲಿ ಬಸವನಬಾಗೇವಾಡಿ ತಾಲ್ಲೂಕಿನ ಮನಗೂಳಿ ಪಟ್ಟಣದ ಲಕ್ಷ್ಮೀಬಾಯಿ–ಶಿವಪ್ಪ ಅವರಸಂಗ ದಂಪತಿಯ ಮೂರನೇ ಪುತ್ರರಾಗಿ ರೇವಣಸಿದ್ಧಪ್ಪ ಜನಿಸಿದರು. ಮುಲ್ಕಿ ಶಿಕ್ಷಣ ಪಡೆದ ಬಳಿಕ ಉಕ್ಕಲಿಯಲ್ಲಿ ಶಿಕ್ಷಕ ವೃತ್ತಿ ಆರಂಭಿಸಿದರು. ಒಂದೂವರೆ ವರ್ಷದ ಬಳಿಕ ಅಥರ್ಗಾ ಗ್ರಾಮಕ್ಕೆ ಬಂದು ಇಲ್ಲಿಯೇ ನೆಲೆ ನಿಂತರು.

‘ಪರಿಸರ ಸಂರಕ್ಷಣೆ, ಸ್ವಚ್ಛತೆಯ ಪಾಠ ಹೇಳಿಕೊಟ್ಟರು. ಸ್ವಾತಂತ್ರ್ಯ ಸಂಗ್ರಾಮದ ಕಿಡಿ ಹಚ್ಚಿದರು. ದೇಶಾಭಿಮಾನ ಜಾಗೃತಿಗೊಳಿಸಿದವರು. ಶಾಲೆಯ ಸಮಯ ಮುಗಿದ ಬಳಿಕ ಗ್ರಾಮ ಸ್ವರಾಜ್ಯದ ಬದುಕಿನ ಚಿತ್ರಣವನ್ನು ಮಾಸ್ತರ್‌ ನಮ್ಮೂರಿನ ಜನರಿಗೆ ಹೇಳಿಕೊಟ್ಟಿದ್ದರು’ ಎಂದು ಅಥರ್ಗಾದ ಶಿಕ್ಷಕ ಹನುಮಂತ ಎನ್‌.ಬಂಟನೂರ ‘ಪ್ರಜಾವಾಣಿ’ಗೆ ರೇವಣಸಿದ್ಧಪ್ಪ ಮಾಸ್ತರರ ಯಶೋಗಾಥೆ ವಿವರಿಸಿದರು.

‘ಸಮಾಜದ ಎಲ್ಲ ಸ್ತರಗಳ ಜನರಿಗೂ ಅಕ್ಷರ ಕಲಿಸಿದರು. ಮನೆ ಬಾಗಿಲು ತಟ್ಟಿ ಮಕ್ಕಳನ್ನು ಶಾಲೆಗೆ ಕರೆ ತಂದರು. ಹೆಣ್ಣು ಮಕ್ಕಳಿಗೂ ಶಿಕ್ಷಣ ನೀಡಿದರು. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಅಂದಿನ ಕಾಲದಲ್ಲೇ ಕಂದೀಲಿನ ಬೆಳಕಿನಲ್ಲಿ ಮನೆ ಪಾಠ ಹೇಳಿಕೊಟ್ಟ ಪುಣ್ಯಾತ್ಮ ಅವರು’ ಎಂದು ಸ್ಮರಿಸಿದರು.

‘ಓದಿಗಾಗಿ ಊರಲ್ಲಿ ಗ್ರಂಥಾಲಯ ತೆರೆದರು. ಆಜುಬಾಜು ಗ್ರಾಮಗಳ ಸಮಸ್ತ ವ್ಯಾಜ್ಯ ಪರಿಹರಿಸಲು ನ್ಯಾಯದ ಕಟ್ಟೆ ಆರಂಭಿಸಿದರು. ತಾವು ಪಡೆಯುತ್ತಿದ್ದ ಪಗಾರದ ಹಣವನ್ನು ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಭರಿಸುತ್ತಿದ್ದರು. ಶರಣರ ತತ್ವಗಳನ್ನು ಬೋಧಿಸುವ ಮೂಲಕ ಜನರ ಮನದಲ್ಲಿ ಗುರುವಿನ ಸ್ಥಾನ ಪಡೆದಿದ್ದರು. 1925ರ ಶಿವರಾತ್ರಿ ಹಬ್ಬದಂದು ರೇವಣಸಿದ್ಧಪ್ಪ ಮಾಸ್ತರ್‌ ತಮ್ಮ 36ರ ಹರೆಯದಲ್ಲೇ ನಿಧನರಾದರು. ಮರು ವರ್ಷದಿಂದ ಇದೇ ಸಮಯ ಐದು ದಿನದ ಬೃಹತ್ ಜಾತ್ರೆ ನಡೆಯುತ್ತಿದೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 20

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !