ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಲ್ಲೂರಿನ ಸೌಪರ್ಣಿಕಾ ಒಡಲು ಖಾಲಿ... ಖಾಲಿ; ಹರಿದು ಬರುತ್ತಿದೆ ವಿಷಯುಕ್ತ ತ್ಯಾಜ

ಮೀನಗಳ ಸಾವು
Last Updated 24 ಮೇ 2019, 19:56 IST
ಅಕ್ಷರ ಗಾತ್ರ

ಕುಂದಾಪುರ: ತಾಲ್ಲೂಕಿನ ಪುಣ್ಯ ನದಿ ಸೌಪರ್ಣಿಕಾ ಒಡಲು ಬರಿದಾಗುತ್ತಿದೆ. ನದಿಯಲ್ಲಿ ಮೀನುಗಳು ಎಲ್ಲೆಂದರಲ್ಲಿ ಸಾಯುತ್ತಿರುವುದು ಹಾಗೂ ನದಿ ನೀರು ಖಾಲಿ ಆಗುತ್ತಿರುವುದು ಜನರಲ್ಲಿ ಹಾಗೂ ಭಕ್ತರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಕಳೆದ ವರ್ಷ ಸುರಿದ ಮಳೆ ಪ್ರಮಾಣ ಕಡಿಮೆಯಾಗಿರುವುದು ಹಾಗೂ ಈ ಬಾರಿ ಏಪ್ರಿಲ್‌, ಮೇ ತಿಂಗಳಲ್ಲಿ ವಾಡಿಕೆಯಂತೆ ಸುರಿಯ ಬೇಕಾಗಿದ್ದ ವರ್ಷಧಾರೆ ಸುರಿಯದೆ ಇರುವುದರಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಪುಣ್ಯ ನದಿ ನೇತ್ರಾವತಿ ಸೇರಿದಂತೆ ರಾಜ್ಯದ ಹಲವಾರು ಧಾರ್ಮಿಕ ಕ್ಷೇತ್ರಗಳಲ್ಲಿ ಹರಿಯುವ ಪುಣ್ಯ ನದಿಗಳಲ್ಲಿ ನೀರಿನ ಪ್ರಮಾಣ ಕಡಿಮೆ ಆಗಿರುವುದರಿಂದ ಜಲಚರಗಳ ಬದುಕಿನ ಮೇಲೆ ಪೆಟ್ಟು ಬೀಳುತ್ತಿದೆ.

ಸೌಪರ್ಣಿಕೆಯನ್ನೇ ನಂಬಿಕೊಂಡಿದ್ದ, ಶ್ರೀ ಕ್ಷೇತ್ರ ಕೊಲ್ಲೂರಿನ ನಿತ್ಯ ಕಾರ್ಯಗಳಿಗೆ ಹಾಗೂ ದೇವಸ್ಥಾನದ ವಸತಿ ಗೃಹಗಳ ಬಳಕೆಗೆ ನೀರಿನ ಪ್ರಮಾಣ ಕಡಿಮೆಯಾಗುತ್ತಿರುವುದನ್ನು ಗಮನಿಸಿರುವ ದೇವಸ್ಥಾನದ ಆಡಳಿತ, ಕಳೆದ ಕೆಲವು ದಿನಗಳಿಂದ ಹೊಳೆ ಗುಂಡಿಗಳಲ್ಲಿ ಸಂಗ್ರಹವಾಗುತ್ತಿದ್ದ ನೀರನ್ನು ಲಿಫ್ಟ್‌ ಮಾಡುವ ಮೂಲಕ ಅಗತ್ಯಗಳಿಗೆ ಪೂರೈಸಿಕೊಳ್ಳುವ ಕಾರ್ಯಕ್ಕೆ ಮುಂದಾಗಿದೆ. ದೇವಸ್ಥಾನದ ನಿತ್ಯದ ಅಗತ್ಯ ಕಾರ್ಯಗಳಿಗೆ ನೀರಿನ ಕೊರತೆಯಾಗದಂತೆ ನೋಡಿಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದೆ.

ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿರುವ ನೀರಿನ ಪ್ರಮಾಣವನ್ನು ಹೊಂದಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡಲಾಗುತ್ತಿದೆ. ಶುಚಿತ್ವ ಹಾಗೂ ಊಟೋಪಚಾರದ ಕಾರ್ಯಗಳಿಗಾಗಿ ಟ್ಯಾಂಕರ್‌ ನೀರನ್ನು ಬಳಸಿಕೊಳ್ಳಲಾಗುತ್ತಿದೆ. ವಸತಿ ಗೃಹದಲ್ಲಿಯೂ ನೀರಿನ ಯಥೇಚ್ಛವಾದ ಬಳಕೆಗೆ ಕಡಿವಾಣ ಹಾಕುವ ಪ್ರಯತ್ನವನ್ನು ದೇವಸ್ಥಾನ ಆಡಳಿತ ಮಂಡಳಿ ಮಾಡಿದೆ. ಇದೇ ಪರಿಸ್ಥಿತಿ ಮುಂದುವರಿದರೆ ವಸತಿ ಗೃಹಗಳಿಗೆ ನೀರು ಹೇಗೆ ಪೂರೈಕೆ ಮಾಡಬೇಕು ಎಂಬುದರ ಬಗ್ಗೆ ಚಿಂತೆ ಶುರುವಾಗಿದೆ. ಕೊಲ್ಲೂರಿನಲ್ಲಿ ದೊಡ್ಡ ಸಂಖ್ಯೆಯಲ್ಲಿ ಇರುವ ಖಾಸಗಿ ವಸತಿ ಗೃಹಗಳಿಗೆ ಈಗಾಗಲೇ ನೀರಿನ ಬಿಸಿ ತಟ್ಟಿದೆ. ಕಳೆದ ಕೆಲವು ದಿನಗಳಿಂದ ಅಗತ್ಯಗಳಿಗೆ ಅನುಗುಣವಾಗಿ ಟ್ಯಾಂಕರ್‌ ಮೂಲಕ ನೀರನ್ನು ಹೊಂದಿಸಿಕೊಳ್ಳುತ್ತಿದ್ದಾರೆ.

ಪುಣ್ಯ ನದಿ ಮೀನುಗಳಿಗೆ ಸಂಚಕಾರ: ಪಶ್ಚಿಮ ಘಟ್ಟಗಳ ಸಾಲಿನ ಕೊಡಚಾದ್ರಿ ಬೆಟ್ಟಗಳಿಂದ ಹರಿದು ಬರುವ ಸೌಪರ್ಣಿಕಾ ನದಿ ಬಗ್ಗೆ ಕೊಲ್ಲೂರಿನ ಭಕ್ತರಲ್ಲಿ ವಿಶೇಷ ನಂಬಿಕೆ ಇದೆ. ಬೆಟ್ಟದ ಮೇಲಿನಿಂದ ಹರಿದು ಬರುವ ನೀರಿನಲ್ಲಿ 64 ಪುಣ್ಯ ತೀರ್ಥಗಳ ಸಂಗಮವಿದೆ ಎನ್ನುವ ನಂಬಿಕೆ ಜೊತೆ ಕೊಡಚಾದ್ರಿಯಲ್ಲಿ ಇರುವ ಅಮೂಲ್ಯ ಗಿಡಮೂಲಿಕೆಗಳ ಸಾರ ಈ ನೀರಿನಲ್ಲಿ ಸೇರಿರುವುದರಿಂದ ಚರ್ಮ ವ್ಯಾಧಿಗಳನ್ನು ಗುಣ ಪಡಿಸುವ ಶಕ್ತಿ ಈ ಪುಣ್ಯ ನದಿಗೆ ಇದೆ ಎನ್ನುವ ನಂಬಿಕೆ ಇರುವುದರಿಂದ ಕೊಲ್ಲೂರಿನ ಅಗ್ನಿತೀರ್ಥ, ಕಾಶಿತೀರ್ಥ ಹಾಗೂ ಸೌಪರ್ಣಿಕಾ ಸ್ನಾನ ಘಟ್ಟದಲ್ಲಿ ಭಕ್ತರು ಮಿಂದೇಳುತ್ತಾರೆ.

ನದಿ ಪಕ್ಕದಲ್ಲಿ ಇರುವ ವಸತಿ ಸಮುಚ್ಛಯ ಹಾಗೂ ಇನ್ನಿತರ ಕಟ್ಟಡಗಳಿಂದ ಹರಿದು ಬಂದು ನದಿ ಸೇರುವ ತ್ಯಾಜ್ಯಗಳಿಂದಾಗಿ ಅಮೂಲ್ಯ ಗಿಡ ಮೂಲಿಕೆಗಳ ಪುಣ್ಯ ತೀರ್ಥವಾಗಿರುವ ಸೌಪರ್ಣಿಕಾ ಮಲಿನಗೊಂಡು ತನ್ನ ಔಷಧಿಯ ಹಾಗೂ ಪಾವಿತ್ರತ್ಯೆ ಗುಣವನ್ನು ಕಳೆದುಕೊಳ್ಳುತ್ತಿದೆ ಎಂಬ ಆತಂಕ ಭಕ್ತರದು. ಇದಕ್ಕೆ ಪುಷ್ಠಿ ನೀಡುವಂತೆ ಸೌಪರ್ಣಿಕಾ ಒಡಲಲ್ಲಿನ ಮೀನುಗಳು ಸತ್ತು ಬೀಳುತ್ತಿವೆ.

ನದಿಯಲ್ಲಿ ನೀರಿನ ಹರಿವು ಕಡಿಮೆ ಆಗಿರುವುದರಿಂದ ಗುಂಡಿಯಲ್ಲಿ ಸಂಗ್ರಹವಾದ ನೀರು ಬಿಸಿಲಿನ ತಾಪಕ್ಕೆ ಬಿಸಿಯಾಗುತ್ತಿದೆ. ತ್ಯಾಜ್ಯಗಳಿಂದ ಬಂದಿರುವ ರಾಸಾಯನಿಕಗಳು ನದಿ ನೀರನ್ನು ವಿಷಯುಕ್ತವಾಗಿಸುತ್ತಿದೆ. ನದಿ ಸೇರುತ್ತಿರುವ ಅನ್ನ ಬಾಗಿದ ತಿಳಿ, ಯಾತ್ರಾರ್ಥಿಗಳು ಎಸೆಯುತ್ತಿರುವ ತ್ಯಾಜ್ಯ ವಸ್ತುಗಳು, ಬಟ್ಟೆ ಒಗೆದ ಕಶ್ಮಲ ಯುಕ್ತ ನೀರು ನದಿಯನ್ನು ಸೇರುವುದರಿಂದಾಗಿ ಸೌಪರ್ಣಿಕಾ ಒಡಲು ಸೇರಿ ಮತ್ಸ್ಯ ಸಂಪತ್ತು ವಿನಾಶದ ಹಂತ ತಲುಪುತ್ತಿವೆ.

ನಿಯಮ ಬಾಹಿರವಾಗಿ ಸೌಪರ್ಣಿಕಾ ಎಡ–ಬಲದಲ್ಲಿ ತಲೆ ಎತ್ತುತ್ತಿರುವ ಕಟ್ಟಡಗಳು ತ್ಯಾಜ್ಯ ಹರಿದು ಬರುತ್ತಿದೆ. ಪುಣ್ಯನದಿ ಸೌಪರ್ಣಿಕಾ ನದಿ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ವಿರುದ್ಧ ಸ್ಥಳೀಯ ಕೆಲವು ಉತ್ಸಾಹಿ ಯುವಕರು, ದೇವಿ ಭಕ್ತರು ಮಾಧ್ಯಮದವರ ಸಹಕಾರದೊಂದಿಗೆ ಕಳೆದ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿದ್ದಾರೆ.

ಹಿಂದೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿದ್ದ ಕೃಷ್ಣ ಪ್ರಸಾದ ಅಡ್ಯಂತಾಯ ಅವರ ಆಸಕ್ತಿಯಿಂದಾಗಿ ನಾಡಾ ಐಟಿಐ ಕಾಲೇಜಿನ ವಿದ್ಯಾರ್ಥಿಗಳು, ಜಿಲ್ಲೆಯ ಕೆಲವು ಧಾರ್ಮಿಕ ಪ್ರಮುಖರು ಹಾಗೂ ಸ್ಥಳೀಯ ಸಂಘಟನೆ ನೆರವಿನಿಂದ ಸೌಪರ್ಣಿಕಾ ಒಡಲನ್ನು ಶುಚಿತ್ವಗೊಳಿಸುವ ಒಂದಷ್ಟು ಕಾರ್ಯ ನಡೆಸಿದ್ದರು. ಅದರ ನಂತರ ಸ್ವಚ್ಛತಾ ಕಾರ್ಯವೇ ನಡೆದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT