ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

100 ಕೋಟಿ ಲಸಿಕೆ: ವಿಶ್ವದ ಮೊದಲ ದೇಶ ಭಾರತ, ಕುಯಿಲಾಡಿ ಸುರೇಶ್

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್‌
Last Updated 22 ಅಕ್ಟೋಬರ್ 2021, 11:10 IST
ಅಕ್ಷರ ಗಾತ್ರ

ಉಡುಪಿ: 100 ಕೋಟಿ ಲಸಿಕೆ ನೀಡಿದ ವಿಶ್ವದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ, ಆರೋಗ್ಯ ಕಾರ್ಯಕರ್ತರ ಪರಿಶ್ರಮದಿಂದ ಈ ಸಾಧನೆ ಸಾದ್ಯವಾಗಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.

ಶುಕ್ರವಾರ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ 70.83 ಕೋಟಿ ಜನರಿಗೆ ಮೊದಲ ಡೋಸ್‌ ಹಾಗೂ 29.17 ಕೋಟಿ ಜನರಿಗೆ ಎರಡನೇ ಡೋಸ್ ಲಸಿಕೆ ಹಾಕಲಾಗಿದ್ದು, ಶೀಘ್ರ ಪ್ರತಿಯೊಬ್ಬರಿಗೂ ಎರಡು ಡೋಸ್ ಲಸಿಕೆ ಗುರಿ ತಲುಪಲಾಗುವುದು ಎಂದರು.

ಮಿಷನ್ ಕೋವಿಡ್ ಸುರಕ್ಷಾ ಕಾರ್ಯಕ್ರಮದ ಮೂಲಕ ₹ 900 ಕೋಟಿ ವೆಚ್ಚದಲ್ಲಿ ಲಸಿಕೆ ಅಭಿವೃದ್ಧಿಪಡಿಸಲಾಗಿದ್ದು, 2021ರ ಜ.16ರಂದು ಆರಂಭವಾದ ಲಸಿಕಾ ಅಭಿಯಾನ, ಅತ್ಯಂತ ಕಡಿಮೆ ಅವಧಿಯಲ್ಲಿ 100 ಕೋಟಿ ಗುರಿ ತಲುಪಿದೆ. ಕೋವಿಶೀಲ್ಡ್‌, ಕೋವ್ಯಾಕ್ಸಿನ್‌, ಸ್ಫೂಟ್ನಿಕ್‌ ಲಸಿಕೆಯ ಜತೆಗೆ ಇತರ ಮೂರು ಲಸಿಕೆಗಳಿಗೂ ಅನುಮತಿ ದೊರೆತಿದೆ ಎಂದರು.

ಶಾಸಕ ಕೆ.ರಘುಪತಿ ಭಟ್ ಮಾತನಾಡಿ, ‘ಕೋವಿಡ್‌ ಮೊದಲ ಅಲೆಯಲ್ಲಿ ಎದುರಿಸಿದ ಸಮಸ್ಯೆ ಹಾಗೂ ಸವಾಲುಗಳಿಂದ ಎರಡನೇ ಅಲೆಯನ್ನು ಎದುರಿಸಲು ಸಾಧ್ಯವಾಯಿತು. ಕೋವಿಡ್ ಪೂರ್ವದಲ್ಲಿ ಜಿಲ್ಲಾ ಆಸ್ಪತ್ರೆಯ 20 ಬೆಡ್‌ಗಳಿಗೆ ಮಾತ್ರ ಆಮ್ಲಜನಕ ಪೂರೈಕೆ ವ್ಯವಸ್ಥೆ ಇತ್ತು. ಸದ್ಯ 125 ಬೆಡ್‌ಗಳಿಗೆ ಆಮ್ಲಜನಕ ಪೂರೈಕೆ ವ್ಯವಸ್ಥೆ ಇದೆ. ಜಿಲ್ಲೆಯಲ್ಲಿ 1300 ಕೆ.ಎಲ್‌ ದ್ರವರೂಪದ ಆಮ್ಲಜನಕ ಉತ್ಪಾದನಾ ಘಟಕಗಳು ಶೀಘ್ರ ಕಾರ್ಯಾರಂಭ ಮಾಡಲಿವೆ. ಮೂರನೇ ಅಲೆ ಬಂದರೂ ಎದುರಿಸಲು ಜಿಲ್ಲೆ ಸರ್ವಸನ್ನದ್ಧವಾಗಿದೆ ಎಂದರು.

ಜಿಲ್ಲೆಯಲ್ಲಿ ಇದುವರೆಗೂ 9.15 ಲಕ್ಷ ಮಂದಿಗೆ ಮೊದಲ ಡೋಸ್ ಲಸಿಕೆ ಹಾಕಲಾಗಿದ್ದು, ಶೇ 92ರಷ್ಟು ಗುರಿ ತಲುಪಲಾಗಿದೆ. 4.86 ಲಕ್ಷ ಮಂದಿಗೆ ಎರಡನೇ ಡೋಸ್ ಹಾಕಲಾಗಿದ್ದು, ಶೇ 48ರಷ್ಟು ಗುರಿ ಮುಟ್ಟಲಾಗಿದೆ. ಜಿಲ್ಲೆಯಲ್ಲಿ ಲಸಿಕೆ ಕೊರತೆ ಇಲ್ಲ. ರಾಜ್ಯದಲ್ಲಿ ಲಸಿಕಾಕರಣದಲ್ಲಿ ಉಡುಪಿ ಮುಂದಿದೆ ಎಂದು ಶಾಸಕರು ಹೇಳಿದರು.

‘ನರೇಂದ್ರ ಮೋದಿ ಅವರಂತಹ ಸಮರ್ಥ ನಾಯಕತ್ವದಿಂದ ದೇಶದ ಪ್ರತಿಯೊಬ್ಬರಿಗೂ ಉಚಿತವಾಗಿ ಲಸಿಕೆ ಸಿಗುವಂತಾಗಿದೆ. ಮೋದಿ ಬದಲಾಗಿ ಅಪ್ರಬುದ್ಧ ರಾಹುಲ್ ಗಾಂಧಿ ಪ್ರಧಾನಿಯಾಗಿದ್ದರೆ ದೇಶದ ಪರಿಸ್ಥಿತಿಯನ್ನು ಊಹಿಸಿಕೊಳ್ಳುವುದು ಕಷ್ಟವಾಗುತ್ತಿತ್ತು ಎಂದು ಶಾಸಕರು ಛೇಡಿಸಿದರು.

ಕೊರೊನಾ ವಾರಿಯರ್ಸ್‌ಗಳಾದ ಉಡುಪಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಹೇಮಂತ್, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಕೆ.ಪ್ರವೀಣ, ನಗರ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆ ಸರಸ್ವತಿ ಕೆ.ಶ್ರೀಯಾನ್ ಅವರಿಗೆ ಸನ್ಮಾನಿಸಲಾಯಿತು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ, ಸದಾನಂದ ಉಪ್ಪಿನಕುದ್ರು, ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ ಕಟಪಾಡಿ, ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ, ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ ಹಿರೇಬೆಟ್ಟು, ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್ ಆತ್ರಾಡಿ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಪ್ರವೀಣ್ ಕುಮಾರ್ ಗುರ್ಮೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT