ಶುಕ್ರವಾರ, ಮಾರ್ಚ್ 5, 2021
27 °C
ಸ್ವಚ್ಛ ರೈಲ್‌ ಸ್ವಚ್ಛ ಭಾರತ್‌ ಯೋಜನೆ

11,600 ಕೆ.ಜಿ ತ್ಯಾಜ್ಯ ಸಂಗ್ರಹ–ವಿಲೇವಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಸ್ವಚ್ಛ ರೈಲ್‌ ಸ್ವಚ್ಛ ಭಾರತ್‌ ಯೋಜನೆಯಡಿಯಲ್ಲಿ ಕಾರವಾರ ವಲಯದ ಕೊಂಕಣ ರೈಲ್ವೆ ನಿಲ್ದಾಣಗಳಲ್ಲಿ ಒಟ್ಟು 11,600 ಕೆ.ಜಿ ತ್ಯಾಜ್ಯವನ್ನು ಸಂಗ್ರಹಿಸಲಾಗಿದ್ದು, ಒಣ ಹಾಗೂ ಹಸಿ ತ್ಯಾಜ್ಯವನ್ನು ಪ್ರತ್ಯೇಕಿಸಿ ಸಮರ್ಕವಾಗಿ ವಿಲೇವಾರಿ ಮಾಡಲಾಗಿದೆ ಎಂದು ಕೊಂಕಣ್‌ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಎಲ್‌.ಕೆ. ವರ್ಮಾ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ರೈಲ್ವೆ ಮಂತ್ರಾಲಯದ ನಿರ್ದೇಶನದಂತೆ ಸೆ. 16ರಿಂದ ಅ. 2ರ ವರೆಗೆ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅದರ ಮೂಲಕ ರೈಲ್ವೆ ನಿಲ್ದಾಣ, ಬೋಗಿಗಳು, ಸುತ್ತಲಿನ ಪರಿಸರ, ಶುದ್ಧ ಕುಡಿಯುವ ನೀರಿನ ಘಟಕಗಳ ಸ್ವಚ್ಛತೆ ಮಾಡಲಾಗಿದೆ ಎಂದರು.

ರೈಲ್ವೆ ಬೋಗಿಗಳಲ್ಲಿ ಶುಚಿತ್ವ ಕಾಪಾಡುವ ಹಿನ್ನೆಲೆಯಲ್ಲಿ ಸಾಕಷ್ಟು ಕಸದ ಬುಟ್ಟಿಗಳನ್ನು ಇರಿಸಲಾಗಿದ್ದು, ಪ್ರಯಾಣಿಕರು ಕಸವನ್ನು ಬುಟ್ಟಿಗಳಲ್ಲಿ ಹಾಕುವ ಮೂಲಕ ಸ್ವಚ್ಛತೆಗೆ ಆದ್ಯತೆ ನೀಡಬೇಕು. ರೈಲ್ವೆ ಇಲಾಖೆಯೊಂದಿಗೆ ಸಹಕಾರ ನೀಡಬೇಕು. ಆಗ ಮಾತ್ರ ಸ್ವಚ್ಛ ಭಾರತದ ಪರಿಕಲ್ಪನೆ ಸಹಕಾರಗೊಳ್ಳಲು ಸಾಧ್ಯ ಎಂದು ಹೇಳಿದರು.

ಹಸಿ ಕಸವನ್ನು ಗೊಬ್ಬರವನ್ನಾಗಿ ಮಾಡುವ ಯಂತ್ರವನ್ನು ಕಾರಾವರ ನಿಲ್ದಾಣದಲ್ಲಿ ಪರಿಚಯಿಸಲಾಗಿದ್ದು, ಉಡುಪಿ ನಿಲ್ದಾಣದಲ್ಲೂ ಶೀಘ್ರದಲ್ಲಿಯೇ ಯಂತ್ರವನ್ನು ಅಳವಡಿಸಲಾಗುವುದು. ಹಾಗೆಯೇ ರೈಲ್ವೆ ನಿಲ್ದಾಣಗಳಲ್ಲಿ ಪ್ಲಾಸ್ಟಿಕ್‌ ಬಳಕೆಯನ್ನು ಕಡ್ಡಾಯವಾಗಿ ನಿಷೇಧ ಮಾಡಲಾಗಿದ್ದು, ಅಂಗಡಿ, ಹೋಟೆಲ್‌ಗಳಿಗೆ ಪ್ಲಾಸ್ಟಿಕ್‌ ಬದಲಿಗೆ ಪರ್ಯಾಯ ವಸ್ತುಗಳನ್ನು ಬಳಸುವಂತೆ ಸೂಚಿಸಲಾಗಿದೆ. ರೈಲ್ವೆ ಇಲಾಖೆಯಿಂದ ಪ್ರಯಾಣಿಕರಿಗೆ ಬಟ್ಟೆಯ ಚೀಲಗಳನ್ನು ವಿತರಿಸಿ ಪ್ಲಾಸ್ಟಿಕ್‌ ನಿಷೇಧದ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

ಬಯೋ ಶೌಚಾಲಯಗಳನ್ನು ಉಪಯೋಗಿಸುವವರು ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಶೌಚಾಲಯಗಳು ಬ್ಲಾಕ್‌ ಆದಂತಹ ಸಂದರ್ಭಗಳಲ್ಲಿ ಅದನ್ನು ಉಪಯೋಗಿಸಬಾರದು. ಮುಂದಿನ ನಿಲ್ದಾಣಗಳಲ್ಲಿ ಸರಿಪಡಿಸಿದ ಬಳಿಕವೇ ಅದನ್ನು ಉಪಯೋಗಿಸಬೇಕು ಎಂದು ಸಲಹೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಉಡುಪಿ ಕೊಂಕಣ್‌ ರೈಲ್ವೆ ಸಾರ್ವಜನಿಕ ಸಂಪರ್ಕ ಪ್ರಬಂಧಕಿ ಸುಧಾ ಕೃಷ್ಣಮೂರ್ತಿ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು