ಸಮುದ್ರದಲ್ಲಿ ಮುಳುಗಿದ 2 ಬೋಟ್‌: 16 ಮೀನುಗಾರರ ರಕ್ಷಣೆ

7
ಭಾರಿ ಮಳೆಯಿಂದ ಪ್ರಕ್ಷುಬ್ಧಗೊಂಡಿರುವ ಕಡಲು: ಆತಂಕದಲ್ಲಿ ಮೀನುಗಾರರು

ಸಮುದ್ರದಲ್ಲಿ ಮುಳುಗಿದ 2 ಬೋಟ್‌: 16 ಮೀನುಗಾರರ ರಕ್ಷಣೆ

Published:
Updated:
Deccan Herald

ಉಡುಪಿ: ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ಎರಡು ಬೋಟುಗಳು ಭಟ್ಕಳ–ಗಂಗೊಳ್ಳಿ ನಡುವಿನ ಸಮುದ್ರದಲ್ಲಿ ಮುಳುಗಡೆಯಾಗಿವೆ. ಬೋಟ್‌ಗಳಲ್ಲಿದ್ದ 16 ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ.

ಶನಿವಾರ ಬೆಳಿಗ್ಗೆ ಮಲ್ಪೆಯಿಂದ 8 ಮೀನುಗಾರರ ತಂಡ ಶಿವ–ಗಣೇಶ ಎಂಬ ಬೋಟನ್ನೇರಿ ಮೀನುಗಾರಿಕೆಗೆ ತೆರಳಿತ್ತು. ಸಂಜೆ ಹೊತ್ತಿಗೆ ಬಿರುಗಾಳಿ ಸಹಿತ ಸುರಿದ ಭಾರಿ ಮಳೆಯಿಂದಾಗಿ ಸಮುದ್ರ ಪ್ರಕ್ಷ್ಯಬ್ದಗೊಂಡಿದೆ. ಈ ಸಂದರ್ಭ ಅಲೆಯ ಒಡೆತಕ್ಕೆ ಬೋಟಿನ ತಳದಲ್ಲಿ ತೂತು ಬಿದ್ದು ಮುಳುಗಲು ಆರಂಭಿಸಿದೆ. ತಕ್ಷಣ ಬೋಟಿನಲ್ಲಿದ್ದವರು ರಕ್ಷಣೆಗಾಗಿ ಮಲ್ಪೆಯ ಮೀನುಗಾರರಿಗೆ ಕರೆ ಮಾಡಿದ್ದಾರೆ.

ಮಲ್ಪೆಯಿಂದ ಮತ್ತೊಂದು ಬೋಟ್‌ನಲ್ಲಿ ತೆರಳಿದ ಮೀನುಗಾರರ ತಂಡ, ಮುಳುಗಡೆಯಾಗುತ್ತಿದ್ದ ಬೋಟಿನಲ್ಲಿದ್ದ 8 ಮಂದಿಯನ್ನು ರಕ್ಷಿಸಿ ಮಲ್ಪೆಗೆ ಕರೆತಂದಿದ್ದಾರೆ.

ಮತ್ತೊಂದೆಡೆ ಮೀನುಗಾರಿಕೆ ಮುಗಿಸಿಕೊಂಡು ಮಲ್ಪೆ ಬಂದರಿಗೆ ಹಿಂದಿರುತ್ತಿದ್ದ ‘ಪದ್ಮದಾಸ್’ ಎಂಬ ಬೋಟ್‌ ಕೂಡ ಗಂಗೊಳ್ಳಿ ಭಟ್ಕಳದ ನಡುವೆ ಮುಳುಗಡೆಯಾಗಿದೆ. ಇದರ ಮಾಹಿತಿ ಪಡೆದ ಮಲ್ಪೆಯ ಭಜರಂಗಿ ಬೋಟಿನ ಮೀನುಗಾರರು ಬೋಟಿನಲ್ಲಿದ್ದ 8 ಮಂದಿಯನ್ನು ರಕ್ಷಿಸಿ ಕರೆ ತಂದಿದ್ದಾರೆ.

ಬೋಟುಗಳು ಮುಳುಗಡೆಯಾಗುವ ದೃಶ್ಯ ಹಾಗೂ ಮೀನುಗಾರರನ್ನು ರಕ್ಷಣೆ ಮಾಡಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಘಟನೆ ಸಂಬಂದ ಪ್ರತಿಕ್ರಿಯೆ ನೀಡಿದ ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಪಾರ್ಶ್ವನಾಥ್‌ ‘ಮೀನುಗಾರಿಕೆ ಮುಗಿಸಿಕೊಂಡು ಮರಳುವಾಗ ಈ ಅವಘಡ ಸಂಭವಿಸಿದೆ. ಒಂದು ಬೋಟ್‌ ಮಲ್ಪೆಯದ್ದು, ಮತ್ತೊಂದು ಕಾಪುವಿನದ್ದು ಎಂದು ತಿಳಿದು ಬಂದಿದೆ. ಭಾರಿ ಮಳೆಯ ಹಿನ್ನೆಲೆಯಲ್ಲಿ ಕಡಲಿಗಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ಮೀನುಗಾರಿಕೆ ಸಂಘ ಹಾಗೂ ಯೂನಿಯನ್‌ಗಳಿಗೂ ಮಾಹಿತಿ ನೀಡಲಾಗಿದೆ ಎಂದರು.

ಮುಳುಗಡೆಯಾದ ಬೋಟ್‌ಗೆ ಪರಿಹಾರ ನೀಡುವ ಸಂಬಂಧ ಪರಿಶೀಲನೆ ನಡೆಸಲಾಗುವುದು ಎಂದು ಅವರು ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !