ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ| ಮತ್ಸ್ಯ ಸಂಪದ ಯೋಜನೆಗೆ ₹ 20,050 ಕೋಟಿ: ಪರಷೋತ್ತಮ ರೂಪಾಲ

ಮೀನುಗಾರಿಕೆ ಆದ್ಯತಾ ವಲಯವಾಗಿ ಅಭಿವೃದ್ದಿ: ಕೇಂದ್ರ ಸಚಿವ ಪರಷೋತ್ತಮ ರೂಪಾಲ
Last Updated 19 ಮಾರ್ಚ್ 2023, 13:54 IST
ಅಕ್ಷರ ಗಾತ್ರ

ಉಡುಪಿ: ದೇಶದಲ್ಲಿ ಮೀನುಗಾರಿಕಾ ವಲಯವನ್ನು ಆದ್ಯತಾ ವಲಯವನ್ನಾಗಿ ಪರಿಗಣಿಸಿ ಸಮಗ್ರವಾಗಿ ಅಭಿವೃದ್ಧಿಗೆ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುವುದು ಎಂದು ಕೇಂದ್ರ ಮೀನುಗಾರಿಕೆ, ಪಶು ಸಂಗೋಪನೆ ಮತ್ತು ಹೈನುಗಾರಿಕಾ ಸಚಿವ ಪರಷೋತ್ತಮ ರೂಪಾಲ ಹೇಳಿದರು.

ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಭಾನುವಾರ ಸಾಗರ ಪರಿಕ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮೀನುಗಾರರ ಸಮಸ್ಯೆ ಅರಿಯಲು ಪ್ರತ್ಯೇಕ ಮೀನುಗಾರಿಕಾ ಸಚಿವಾಲಯವನ್ನು ಆರಂಭಿಸಲಾಗಿದೆ, ಮೀನುಗಾರಿಕೆ ವಲಯದ ಅಭಿವೃದ್ಧಿಗೆ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯ ಮೂಲಕ ₹ 20,050 ಕೋಟಿ ವೆಚ್ಚ ಮಾಡುತ್ತಿದ್ದು, ಮೀನಿನ ಉತ್ಪಾದನೆ ಹೆಚ್ಚಳ, ಮೀನುಗಾರರು, ಮೀನು ಕೃಷಿಕರಿಗೆ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುವುದು. ಮೀನುಗಾರರ ಆದಾಯ ಹೆಚ್ಚಳಕ್ಕೆ ಯೋಜನೆ ರೂಪಿಸಲಾಗಿದೆ ಎಂದರು.

ಸಾಗರ ಪರಿಕ್ರಮ ಯೋಜನೆಯ ಮೂಲಕ ದೇಶದ 8000 ಕಿ.ಮೀ ಕರಾವಳಿ ವ್ಯಾಪ್ತಿಯಲ್ಲಿರುವ ಮೀನುಗಾರರನ್ನು ಭೇಟಿ ಮಾಡುತ್ತಿದ್ದು ಕೇಂದ್ರ ಸರ್ಕಾರ ಮೀನುಗಾರಿಕಾ ಕ್ಷೇತ್ರಕ್ಕೆ ನೀಡಿರುವ ಒತ್ತು ಹಾಗೂ ಅನುಷ್ಠಾನಗೊಳಿಸಿರುವ ಯೋಜನೆಗಳ ಬಗ್ಗೆ ವ್ಯಾಪಕ ಅರಿವು ಮೂಡಿಸುವ ಜತೆಗೆ ಮೀನುಗಾರರ ಸಮಸ್ಯೆಗಳನ್ನು ಆಲಿಸಿ, ಪರಿಹಾರ ನೀಡಲಾಗುವುದು ಎಂದರು.

ಕರಾವಳಿಯ ಪ್ರವಾಸ ಪೂರ್ಣಗೊಂಡ ಬಳಿಕ ಮೀನುಗಾರರ ಸಮಸ್ಯೆಗಳ ಸ್ಪಷ್ಟ ಚಿತ್ರಣ ಲಭ್ಯವಾಗಲಿದ್ದು ಅದಕ್ಕೆ ಅನುಗುಣವಾಗಿ ಯೋಜನೆಗಳನ್ನು ರೂಪಿಸಲಾಗುವುದು. ರಾಜ್ಯದಲ್ಲಿ ಈಗಾಗಲೇ ಕಾರವಾರ ಬಂದರಿಗೆ ಭೇಟಿ ನೀಡಿ ಸ್ಥಳೀಯ ಮೀನುಗಾರರ ಸಮಸ್ಯೆ ಆಲಿಸಲಾಗಿದೆ. ಉಡುಪಿ ಜಿಲ್ಲೆಯ ಮೀನುಗಾರರು ಸಲ್ಲಿಸುವ ಬೇಡಿಕೆಗಳ ಬಗ್ಗೆಯೂ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಮೀನುಗಾರರು ಕಿಸಾನ್ ಕ್ರೆಡಿಟ್ ಕಾರ್ಡ್ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕೇಂದ್ರ ಸರ್ಕಾರದ ಮೀನುಗಾರಿಕಾ ಇಲಾಖೆಯ ಜಂಟಿ ಕಾರ್ಯದರ್ಶಿ ಡಾ.ಬಾಲಾಜಿ, ಸಾಗರ ಪರಿಕ್ರಮ ಯೋಜನೆಯ ಅಂಗವಾಗಿ ಗುಜರಾತ್, ಮಹಾರಾಷ್ಟ್ರ ಡಿಯು ಮತ್ತು ಡಾಮನ್‌ಗೆ ಭೇಟಿ ನೀಡಲಾಗಿದೆ. 4 ಹಂತದಲ್ಲಿ ಕರ್ನಾಟಕಕ್ಕೆ ಭೇಟಿನೀಡಲಾಗಿದೆ. ಮೀನುಗಾರಿಕೆಯಲ್ಲಿ ಕರ್ನಾಟಕ ಕಳೆದ ಸಾಲಿನಲ್ಲಿ ರಾಷ್ಟ್ರಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದು ಈ ವರ್ಷವೂ ಉತ್ತಮ ಪ್ರಗತಿಯಲ್ಲಿದೆ. ಕೇಂದ್ರ ಸರ್ಕಾರದ ಮೀನುಗಾರಿಕಾ ಯೋಜನೆಗಳ ಅನುಷ್ಠಾನ ಕಾರ್ಯವೂ ಕರ್ನಾಟಕದಲ್ಲಿ ಉತ್ತಮವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲಾಯಿತು. ಉಡುಪಿ ಶಾಸಕ ರಘುಪತಿ ಭಟ್, ಕಾಪು ಲಾಲಾಜಿ ಆರ್.ಮೆಂಡನ್, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ಮೈಸೂರು ಎಲೆಕ್ಟ್ರಿಕಲ್ಸ್‌ ಇಂಡಸ್ಟ್ರಿಸ್ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ದಕ್ಷಿಣ ಕನ್ನಡ, ಉಡುಪಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ನಗರಸಭಾ ಅಧ್ಯಕ್ಷೆ ಸುಮಿತ್ರಾ ನಾಯಕ್, ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ರಾಜ್ಯ ಮೀನುಗಾರಿಕೆ ಇಲಾಖೆಯ ಕಾರ್ಯದರ್ಶಿ ಸಲ್ಮಾ ಫಾಹಿಮ್, ಕೋಸ್ಟ್ ಗಾರ್ಡ್ ಡಿಐಜಿ ಪಿ.ಕೆ.ಮಿಶ್ರಾ, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಸುವರ್ಣ, ಕರ್ನಾಟಕ ಕರಾವಳಿ ಮೀನುಗಾರರ ಕ್ರಿಯಾ ಸಮಿತಿ ಅಧ್ಯಕ್ಷ ಜಯ ಸಿ ಸುವರ್ಣ ಇದ್ದರು. ಮೀನುಗಾರಿಕೆ ಇಲಾಖೆ ನಿರ್ದೇಶಕ ರಾಮಾಚಾರ್ಯ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT