ಸಡಗರದ ಗೌರಿ, ಗಣೇಶ ಹಬ್ಬ ಆಚರಣೆ

7

ಸಡಗರದ ಗೌರಿ, ಗಣೇಶ ಹಬ್ಬ ಆಚರಣೆ

Published:
Updated:
Deccan Herald

ಉಡುಪಿ: ನಗರದ ಜನತೆ ಬುಧವಾರ ಹಾಗೂ ಗುರುವಾರ  ಗೌರಿ, ಗಣೇಶ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಿದರು.

ಗೌರಿ ಹಬ್ಬದ ಹಿನ್ನೆಲೆಯಲ್ಲಿ ಹೆಣ್ಣು ಮಕ್ಕಳನ್ನು ಕುಂಕುಮಕ್ಕೆ ಆಹ್ವಾನಿಸಿ, ಬಾಗಿನ ಅರ್ಪಿಸುವುದು, ಗೌರಿಗೆ ವಿಶೇಷ ಪೂಜೆ ಸೇರಿದಂತೆ ನಾನಾ ಆಚರಣೆಗಳು ನಡೆದವು. ಪ್ರತಿ ಮನೆಯಲ್ಲಿಯೂ ಹಬ್ಬದ ಸಡಗರ ಮನೆ ಮಾಡಿತ್ತು. ದೇವಾಲಯದಲ್ಲಿ ಗಣೇಶನಿಗೆ ವಿಶೇಷ ಅಲಂಕಾರ, ಪೂಜೆ ನಡೆಯಿತು. ಬೀದಿ ಬೀದಿಗಳಲ್ಲಿ ಯುವಕರು ನಾನಾ ಭಂಗಿಯ ಗಣೇಶನ ಮೂತಿಗಳನ್ನು ಪ್ರತಿಷ್ಠಾಪಿಸಿ ಸಂಭ್ರಮಿಸಿದರು.

ಕಳೆದ ವರ್ಷಕ್ಕಿಂತಲೂ ಈ ವರ್ಷ ಪರಿಸರಸ್ನೇಹಿ ಗಣಪನ ಮೂರ್ತಿಗಳಿಗೆ ಬೇಡಿಕೆ ಹೆಚ್ಚಿತ್ತು. ಸಾಕಷ್ಟು ಜನರು ಹೆಚ್ಚಿನ ಹಣ ಕೊಟ್ಟು ಪರಿಸರಸ್ನೇಹಿ ಗಣೇಶ ಮೂರ್ತಿಗಳನ್ನು ಖರೀದಿಸಿ ಪ್ರತಿಷ್ಠಾಪಿಸಿದರು. ವಿಘ್ನ ನಿವಾರಕನನ್ನು ಮನೆಗಳಿಗೆ ಬರಮಾಡಿಕೊಳ್ಳುವ ಮೂಲಕ ಭಕ್ತರು ಗಣೇಶ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದರು.

ನಗರದ ಅಲೆವೂರು, ಹಾವಂಜೆ, ಕುಕ್ಕಿಕಟ್ಟೆ, ಕೊಡವೂರು, ಪರ್ಕಳ, ಪೆರ್ಡೂರು, ಮಲ್ಪೆ ಸೇರಿದಂತೆ ವಿವಿಧ ಕಡೆಗಳಲ್ಲಿ ಗಣೇಶನ ಮೂರ್ತಿ ಇಟ್ಟು ಪೂಜಿಸಲಾಯಿತ್ತು.  ಪಟ್ಟಣದ ಜನರು ಸಡಗರದಿಂದ ಗಣೇಶೋತ್ಸವ ಹಬ್ಬವನ್ನು ಆಚರಿಸಿದರೆ, ಮಹಿಳೆಯರು ನಾಗರಕಲ್ಲು, ಹುತ್ತಗಳಿಗೆ ಪೂಜೆ ಸಲ್ಲಿಸಿ ಹಾಲೆರೆಯುವ ದೃಶ್ಯ ಕಂಡುಬಂದಿತು.

ಉಡುಪಿಯ ಸಾಯಿರಾಧ ಮೋಟರ್ಸ್ ನಲ್ಲಿ ಪ್ರತಿವರ್ಷದಂತೆ  ಧಾನ್ಯ ಗಣೇಶನ ವಿಗ್ರಹವನ್ನು ರಚಿಸಲಾಗಿದೆ. ಸುಮಾರು 12 ಅಡಿ ಎತ್ತರವಿರುವ ಈ ಗಣಪತಿಯನ್ನು ಬಿಳಿ - ಕಪ್ಪು - ಕಂದು ಅವರೆಕಾಳು, ಸಾಬಕ್ಕಿ, ಸಾಸಿವೆ, ಬಟಾಣಿ, ಕಡ್ಲೆಬೇಳೆ ಅಂಟಿಸಿ ಮೂರ್ತಿ ನಿರ್ಮಿಸಲಾಗಿದೆ.  ಖ್ಯಾತ ಯುವ ಕಲಾವಿದ  ಶ್ರೀನಾಥ್ ಮಣಿಪಾಲ್ ಹಾಗೂ ರವಿ ಹಿರೇಬೆಟ್ಟು ಅವರು ಮೂರ್ತಿಯನ್ನು ರಚಿಸಿದ್ದಾರೆ.  3 ದಿನಗಳ ಕಾಲ ಈ ಗಣಪತಿ ಸಂಸ್ಥೆಯಲ್ಲಿ ಉಚಿತವಾಗಿ ಪ್ರದರ್ಶನಕ್ಕೆ ಇಡಲಾಗುತ್ತದೆ ಎಂದು ಸಂಸ್ಥೆ ಮುಖ್ಯಸ್ಥ ಮನೋಹರ್‌ ಶೆಟ್ಟಿ ತಿಳಿಸಿದರು.

 

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !