ಲಲಿತಕಲಾ ಅಕಾಡೆಮಿಯಿಂದ ಛಾಯಾಚಿತ್ರದ ಕಡೆಗಣನೆ: ರಮೇಶ್‌ ರಾವ್‌ ಆರೋಪ

7
ಪ್ರವಾಸಿ ಛಾಯಾಚಿತ್ರಗಳ ಪ್ರದರ್ಶನ

ಲಲಿತಕಲಾ ಅಕಾಡೆಮಿಯಿಂದ ಛಾಯಾಚಿತ್ರದ ಕಡೆಗಣನೆ: ರಮೇಶ್‌ ರಾವ್‌ ಆರೋಪ

Published:
Updated:
Prajavani

ಉಡುಪಿ: ಕರ್ನಾಟಕ ಲಲಿತಕಲಾ ಅಕಾಡೆಮಿಯು ಛಾಯಾಚಿತ್ರವನ್ನು ದೃಶ್ಯ ಮಾಧ್ಯಮವನ್ನಾಗಿ ಪರಿಗಣಿಸಿಲ್ಲ. ಛಾಯಾಚಿತ್ರದ ಬಗ್ಗೆ ನಿರ್ಲಕ್ಷ್ಯ ಧೋರಣೆ ತಳೆದಿದೆ ಎಂದು ಉಡುಪಿ ಆರ್ಟಿಸ್ಟ್‌ ಫೋರಂ ಸಂಸ್ಥೆಯ ಅಧ್ಯಕ್ಷ ರಮೇಶ್‌ ರಾವ್‌ ಹೇಳಿದರು.

ಉಡುಪಿ ಆರ್ಟಿಸ್ಟ್‌ ಫೋರಂ ಸಂಸ್ಥೆಯಲ್ಲಿ ಶನಿವಾರ ಆಯೋಜಿಸಿದ್ದ ಛಾಯಾಚಿತ್ರಕಾರ ಸಂತೋಷ್‌ ಪೈ ಅವರ ಪ್ರವಾಸಿ ಛಾಯಾಚಿತ್ರಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೇಂದ್ರ ಲಲಿತಕಲಾ ಅಕಾಡೆಮಿಯು ಪ್ರತಿ ವರ್ಷ 10 ಪ್ರಶಸ್ತಿಗಳನ್ನು ನೀಡುತ್ತಿದ್ದು, ಅದರಲ್ಲಿ 8 ಪ್ರಶಸ್ತಿಗಳನ್ನು ಚಿತ್ರಕಲಾ ವಿಭಾಗಕ್ಕೆ ನೀಡುತ್ತಿದೆ. 2 ಪ್ರಶಸ್ತಿಯನ್ನು ಛಾಯಾಚಿತ್ರ ವಿಭಾಗಕ್ಕೆ ನೀಡಲಾಗುತ್ತದೆ. ಆದರೆ, ಕರ್ನಾಟಕ ಲಲಿತಕಲಾ ಅಕಾಡೆಮಿ ಛಾಯಾಚಿತ್ರ ಕ್ಷೇತ್ರವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದೆ ಎಂದು ದೂರಿದರು.

ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿ ಮಕ್ಕಳ ಪರ ಹೋರಾಟಗಾರ ವಿ.ಕೆ.ಹರೀಂದ್ರನ್‌ ಮಾತನಾಡಿ, ‘ಛಾಯಾಚಿತ್ರ ಬಹಳ ಕಷ್ಟದ ಕೆಲಸ. ಛಾಯಾಚಿತ್ರಕಾರನ ಒಳ ಮನಸ್ಸಿನ ದೃಷ್ಟಿಯನ್ನು ಛಾಯಾಚಿತ್ರ ಅಭಿವ್ಯಕ್ತಗೊಳಿಸುತ್ತದೆ. ಮಾನವೀಯ ಮೌಲ್ಯಗಳನ್ನು ಹೊಂದಿರುವ ವ್ಯಕ್ತಿ ಉತ್ತಮ ಛಾಯಾಚಿತ್ರಕಾರನಾಗಿ ಹೊರಹೊಮ್ಮಬಲ್ಲ’ ಎಂದರು.

ಕಲಾವಿದ ಸಾಕು ಪಾಂಗಾಳ ಉಪಸ್ಥಿತರಿದ್ದರು. ಛಾಯಾಚಿತ್ರಕಾರ ಸಂತೋಷ್‌ ಪೈ ಅವರ 25 ಪ್ರವಾಸಿ ಛಾಯಾಚಿತ್ರಗಳನ್ನು ಪ್ರದರ್ಶನಕ್ಕಿಡಲಾಗಿದೆ. ಸಾರ್ವಜನಿಕರು ಅದ್ಭುತ ಪ್ರವಾಸಿ ಕಥಾನವನ್ನು ಬಿಂಬಿಸುವ ಛಾಯಾಚಿತ್ರಗಳನ್ನು ನೋಡಿ ಕಣ್ತುಂಬಿಕೊಂಡರು.

ಧನಾತ್ಮಕ ಚಿಂತನೆಗೆ ಒತ್ತು

ಹತ್ತು ವರ್ಷಗಳಲ್ಲಿ ತೆಗೆದಿರುವ ಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಉತ್ತರ ಭಾರತ, ನೇಪಾಳ, ರಾಜಸ್ಥಾನ, ತಮಿಳುನಾಡು ಸೇರಿದಂತೆ ದೇಶ–ವಿದೇಶಗಳಲ್ಲಿ ಸೆರೆ ಹಿಡಿದ ಛಾಯಾಚಿತ್ರಗಳು ಈ ಸಂಗ್ರಹದಲ್ಲಿವೆ. ಹೆಚ್ಚಿನ ಛಾಯಾಚಿತ್ರಗಳಲ್ಲಿ ಮನುಷ್ಯನ ಋಣಾತ್ಮಕ ಚಿಂತನೆಗಳ ಮಧ್ಯೆ ಆತನ ಧನಾತ್ಮಕ ಚಿಂತನೆಯನ್ನು ಬಿಂಬಿಸಲಾಗಿದೆ. ಸಮಾಜ ಮನುಷ್ಯನ ಧನಾತ್ಮಕ ದೃಷ್ಟಿಕೋನವನ್ನು ಸುಲಭವಾಗಿ ಗುರುತಿಸಲಿ ಎನ್ನುವುದೇ ಇದರ ಮೂಲ ಉದ್ದೇಶ ಎಂದು ಛಾಯಾಚಿತ್ರಕಾರ ಸಂತೋಷ್‌ ಪೈ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !