ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಜಿ ದೇವದಾಸಿಯರ ಬೇಡಿಕೆ ಈಡೇರಿಸಿ

Last Updated 10 ಫೆಬ್ರುವರಿ 2018, 8:48 IST
ಅಕ್ಷರ ಗಾತ್ರ

ಬಾಗಲಕೋಟೆ: ಮಾಜಿ ದೇವದಾಸಿ ಮಹಿಳೆಯರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ದಲಿತ ಸೇನಾ ಸಮಿತಿಯ ಜಿಲ್ಲಾ ಘಟಕದ ನೇತೃತ್ವದಲ್ಲಿ ಶುಕ್ರವಾರ ನೂರಾರು ಮಹಿಳೆಯರು ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು.

ನವನಗರದಲ್ಲಿರುವ ಕಲಾಭವನದಿಂದ ಪ್ರತಿಭಟನಾ ಮೆರವಣಿಗೆಯಲ್ಲಿ ಆಗಮಿಸಿದ ಸಂಘಟನೆಯ ಕಾರ್ಯಕರ್ತರು ಹಾಗೂ ಮಹಿಳೆಯರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಉಪವಿಭಾಗಾಧಿಕಾರಿ ಶಂಕರಗೌಡ ಸೋಮನಾಳ ಅವರಿಗೆ ಮನವಿ ಸಲ್ಲಿಸಿದರು.

ಸಾಮಾಜಿಕ ಶೋಷಣೆಗೆ ಒಳಗಾಗಿ ಬಡತನ ಹಾಗೂ ಅನಕ್ಷರತೆ ಕಾರಣದಿಂದಾಗಿ ದಲಿತ ದಲಿತ ಸಮುದಾಯದಲ್ಲಿ ಜನಿಸಿದ ಮಹಿಳೆಯರು ಅನಿಷ್ಟ ದೇವದಾಸಿ ಪದ್ದತಿಗೆ ಬಲಿಯಾಗಿದ್ದಾರೆ. ತಮಗೆ ಅರಿವೇ ಇಲ್ಲದೇ ಬಲಿಯಾದ ಮಹಿಳೆಯರ ಸ್ಥಿತಿ ಇಂದು ಅತ್ಯಂತ ಶೋಚನೀಯವಾಗಿದೆ. ಸರ್ಕಾರ ಅವರ ಅಭಿವೃದ್ಧಿಗೆ ಕೂಡಲೇ ಮುಂದಾಗಬೇಕು ಎಂದು ಒತ್ತಾಯಿಸಿದರು.

ಮಾಜಿ ದೇವದಾಸಿಯರಿಗೆ ಉಚಿತವಾಗಿ 2 ಎಕರೆ ಜಮೀನು ನೀಡಬೇಕು. ಸರ್ಕಾರ ಈಗ ಮನೆ ಕಟ್ಟಿಕೊಳ್ಳಲು ₹ 1.50ಲಕ್ಷ ಸಹಾಯಧನ ನೀಡುತ್ತಿದೆ. ಅದನ್ನು ₹ 3 ಲಕ್ಷಕ್ಕೆ ಹೆಚ್ಚಿಸಬೇಕು. ನಿರ್ಗತಿಕ ಮಾಜಿ ದೇವದಾಸಿ ಮಹಿಳೆಯರಿಗೆ ನಿವೇಶನ ನೀಡಿ, ಮನೆ ಕಟ್ಟಿಸಿ ಕೊಡಬೇಕು. ಅವರ ಮಕ್ಕಳ ಪುನರ್ವಸತಿಗಾಗಿ ಶಿಕ್ಷಣ ಯೋಜನೆ ರೂಪಿಸಬೇಕು ಎಂದು ಆಗ್ರಹಿಸಿದರು.

ದೇವದಾಸಿ ಮಹಿಳೆಯರ ಬಗ್ಗೆ ಪುನರ್‌ಸರ್ವೇ ನಡೆಸಬೇಕು. ಸರ್ಕಾರ ಅವರ ನಿರುದ್ಯೋಗಿ ಮಕ್ಕಳಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಆರ್ಥಿಕ ಸಹಾಯಧನ ನೀಡಬೇಕು. ಈಗ ನೀಡುತ್ತಿರುವ ₹ 1500 ಮಾಸಾಶನವನ್ನು ₹  3ಸಾವಿರಕ್ಕೆ ಹೆಚ್ಚಿಸಬೇಕು. ಮಾರಣಾಂತಿಕ ಕಾಯಿಲೆಗೆ ಉಚಿತ ಚಿಕಿತ್ಸೆ ನೀಡಬೇಕು. ಮಾಜಿ ದೇವದಾಸಿ ಮಹಿಳೆಯರ ಹೆಣ್ಣು ಮಕ್ಕಳ ಮದುವೆಗೆ ₹ 1ಲಕ್ಷ ಸಹಾಯಧನ ನೀಡಬೇಕು. ಮೊರಾರ್ಜಿ, ನವೋದಯ, ವಸತಿ ಶಾಲೆಗಳಲ್ಲಿ ಮಾಜಿ ದೇವದಾಸಿ ಮಹಿಳೆಯರ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಕಡ್ಡಾಯಗೊಳಿಸದೆ ನೇರ ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಸರ್ಕಾರ ಬೇಡಿಕೆ ಈಡೇರಿಕೆಗೆ ಮುಂದಾಗದಿದ್ದಲ್ಲಿ ರಾಜ್ಯಾದ್ಯಂತ ಹೋರಾಟವನ್ನು ತೀವ್ರಗೊಳಿಸಲಾಗುವುದು. ನಮ್ಮ ಹಕ್ಕುಗಳನ್ನು ಕೇಳುತ್ತಿದ್ದೇವೆ. ಈ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗಮನ ಹರಿಸಬೇಕು. ಇಲ್ಲದಿದ್ದಲ್ಲಿ ಚುನಾವಣೆಯಲ್ಲಿ ತಕ್ಕಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ ಎಚ್.ಮಾದರ, ಮುಖಂಡರಾದ ಸಿದ್ದು ದೊಡಮನಿ, ಹುಸನಪ್ಪ ಅವರಾದಿ, ನಾಗರಾಜ ಮಾದರ, ಗೋಪಾಲಕೃಷ್ಣ ಕೆರೂರ, ಅಪ್ಪು ಮಾದರ, ಮುತ್ತು ಮಡಿವಾಳರ, ಶ್ರೀಕಾಂತ ಮೇತ್ರಿ, ಸಂಗಮೇಶ ದೊಡಮನಿ, ವಿಠ್ಠಲ ಮಾದರ, ರಮೇಶ ಮಾದರ, ನಿಜಪ್ಪ ಮಾದರ, ರಮೇಶ ಅನಗವಾಡಿ, ಬಸಪ್ಪ ಮೇಲಿನಮನಿ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT