ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುತಾತ್ಮ ಲೆಫ್ಟಿನೆಂಟ್ ಕರ್ನಲ್ ಅಜಿತ್ ಪುತ್ರರಿಂದ ದೇಶಸೇವೆಯ ಉಡುಗೊರೆ

ಒಬ್ಬ ಪುತ್ರ ಸೇನೆಯಲ್ಲಿ ಮೇಜರ್, ಮತ್ತೊಬ್ಬ ನೌಕಾಪಡೆಯಲ್ಲಿ ಲೆಫ್ಟಿನೆಂಟ್
Last Updated 30 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ಉಡುಪಿ: 1999, ಅಕ್ಟೋಬರ್ 30. ಜಮ್ಮು ಕಾಶ್ಮೀರದ ಪೂಂಚ್‌ನ ಫೈಜಲಾಬಾದ್‌ನಲ್ಲಿ ಅಡಗಿದ್ದ ಉಗ್ರರನ್ನು ಹೊಡೆದುರುಳಿಸಿ, ಹುತಾತ್ಮರಾದರು ಲೆಫ್ಟಿನಂಟ್‌ ಕರ್ನಲ್‌ ಉಡುಪಿ ಮೂಲದ ಅಜಿತ್ ಭಂಡಾರ್ಕರ್‌. ಈ ಅವಘಡ ಘಟಿಸಿ 2 ದಶಕಗಳು ಕಳೆದಿವೆ. ಅಂದು ಅಪ್ಪನ ವೀರಮರಣವನ್ನು ನೋಡಿದ್ದ ಮಕ್ಕಳು ಇಂದು ಅಪ್ಪನಂತೆಯೇ ದೇಶಸೇವೆ ಮಾಡುತ್ತಿದ್ದಾರೆ.

ಅಜಿತ್ ಭಂಡಾರ್ಕರ್‌ ಪುತ್ರರಾದ ನಿರ್ಭಯ್‌ ಭಂಡಾರ್ಕರ್‌ ಸೇನೆಯ ಮೇಜರ್ ಹುದ್ದೆಯಲ್ಲಿದ್ದರೆ, ಅಕ್ಷಯ್‌ ಭಂಡಾರ್ಕರ್‌ ನೌಕಾಪಡೆಯ ಲೆಫ್ಟಿನೆಂಟ್‌ ಆಗಿದ್ದಾರೆ. ತಂದೆಯ ಹಾದಿಯಲ್ಲಿಯೇ ನಡೆಯುವ ಮೂಲಕ ಮಕ್ಕಳು ದೇಶಪ್ರೇಮ ಮೆರೆದಿದ್ದಾರೆ.‌

ಅಂದಿನ ಕಹಿ ಹಾಗೂ ಇಂದಿನ ಸಿಹಿ ಘಟನೆಗಳ ಕುರಿತು ‘ಪ್ರಜಾವಾಣಿ’ ಜತೆ ಮನಬಿಚ್ಚಿ ಮಾತನಾಡಿದ ಪತ್ನಿ ಶಂಕುತಲಾ ಭಂಡಾರ್ಕರ್‌, ‘ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಅಜಿತ್ ಹುತಾತ್ಮರಾದಾಗ ದೊಡ್ಡ ಮಗನಿಗೆ 7 ವರ್ಷ, ಚಿಕ್ಕ ಮಗನಿಗೆ 5 ವರ್ಷ. ಪತಿಯ ಅಗಲಿಕೆಯಿಂದ ಭವಿಷ್ಯದ ಮೇಲೆ ಕಾರ್ಮೋಡ ಕವಿದಂತಾಯಿತು.

ಮಕ್ಕಳು ಭವಿಷ್ಯದ ಬಗ್ಗೆ ಯೋಚನೆ ಮಾಡುವಷ್ಟು ಪ್ರಬುದ್ಧರಾಗಿರಲಿಲ್ಲ. ಆದರೆ, ಅಪ್ಪನಂತೆ ದೇಶಸೇವೆ ಮಾಡಬೇಕು ಎಂಬ ಬಯಕೆ ವಂಶವಾಯಿಯಲ್ಲಿಯೇ ಬಂದಿತ್ತು. ಹಾಗಾಗಿ, ಅಪ್ಪನ ಹಾದಿಯಲ್ಲಿಯೇ ನಡೆಯುತ್ತಿದ್ದಾರೆ ಎಂದರು ತಾಯಿ ಶಂಕುತಲಾ.

ಪತಿ ನಿಧನರಾದ ಬಳಿಕ ಪ್ರತಿ ವರ್ಷ ಸೇನೆಯ ಕಾರ್ಯಕ್ರಮಗಳಲ್ಲಿ ಮಕ್ಕಳ ಜತೆ ಭಾಗವಹಿಸುತ್ತಿದ್ದೆ. ಅಲ್ಲಿ, ಯೋಧರ ಪರಾಕ್ರಮ, ಶಿಸ್ತು, ದೇಶಭಕ್ತಿಯ ವಿಚಾರಗಳು ಚರ್ಚೆಯಾಗುತ್ತಿದ್ದವು. ಪತಿ ಅಜಿತ್ ಅವರ ಶೌರ್ಯ, ಸಾಹಸದ ಬಗ್ಗೆ ಅವರ ಸ್ನೇಹಿತರು ಮೆಚ್ಚುಗೆಯ ಮಾತಗಳನ್ನಾಡುತ್ತಿದ್ದರು. ಇದೆಲ್ಲವನ್ನೂ ಕೇಳುತ್ತಲೇ ಮಕ್ಕಳಲ್ಲಿ ಸೇನೆ ಸೇರುವ ಆಸೆ ಚಿಗುರೊಡೆಯಿತು.

ಕಾಲೇಜು ಪ್ರವೇಶಿಸುವ ಹಂತದಲ್ಲಿ ಇಬ್ಬರೂ ಸೇನೆ ಸೇರುವ ಬಯಕೆ ವ್ಯಕ್ತಪಡಿಸಿದರು. ಅದರಂತೆ, ಕಠಿಣ ಪರೀಕ್ಷೆಗಳನ್ನು ಎದುರಿಸಿ ಯಶಸ್ವಿಯೂ ಆದರು. ಅಪ್ಪನ ಆಸೆಯಂತೆ ಸೇನೆ ಸೇರಿದರು. ಮಕ್ಕಳ ನಿರ್ಧಾರದ ಬಗ್ಗೆ ನನಗೆ ಹೆಮ್ಮೆ ಇದೆ’ ಎಂದು ಸಂತಸ ವ್ಯಕ್ತಪಡಿಸಿದರು ಶಂಕುತಲಾ.

ಯಾವ ವೃತ್ತಿಯಲ್ಲಿಯೂ ಸಿಗದ ಗೌರವ, ಶಿಸ್ತು, ಆತ್ಮತೃಪ್ತಿ ಸೇನೆಯಲ್ಲಿ ಸಿಗುತ್ತದೆ. ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬಹುದು. ಪತಿಯಂತೆ ಮಕ್ಕಳು ದೇಶಸೇವೆಗೆ ಮುಂದಾಗಿರುವುದು ಖುಷಿ ಕೊಟ್ಟಿದೆ ಎನ್ನುತ್ತಾರೆ ಅವರು.

ಪತಿ ಅಜಿತ್‌ ಮೂಲತಃ ಉಡುಪಿಯವರು. ಆದರೆ, ಹೆಚ್ಚುಕಾಲ ಅಲ್ಲಿರಲಿಲ್ಲ. ಅವರು ಸೇನೆಯಲ್ಲಿದ್ದಾಗ ಕುಟುಂಬ ಸಮೇತ ಬೆಂಗಳೂರಿನಲ್ಲಿಯೇ ನೆಲೆಸಿದವು. ಸದ್ಯ ಶಾಲೆಯೊಂದರ ಪ್ರಾಂಶುಪಾಲೆಯಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಸೇನೆಯ ಕಾರ್ಯಕ್ರಮಗಳು ಹಾಗೂ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೇನೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT