ನೇರ ವಿದ್ಯುತ್ ಸರಬರಾಜು ಯೋಜನೆ ಚಾಲನೆ

7
ಯು.ಪಿ.ಸಿ.ಎಲ್ ನಿಂದ ಎ.ಬಿ.ಸಿ ಕೇಬಲ್ ಅಳವಡಿಕೆ

ನೇರ ವಿದ್ಯುತ್ ಸರಬರಾಜು ಯೋಜನೆ ಚಾಲನೆ

Published:
Updated:
ಬೆಳಪುವಿನ ಸಣ್ಣ ಕೈಗಾರಿಕಾ ಪ್ರದೇಶದಲ್ಲಿ ಎ.ಬಿ.ಸಿ ಕೇಬಲ್ ಅಳವಡಿಸುವ ಕಾರ್ಯ ನಡೆಯುತ್ತಿದೆ. (ಪಡುಬಿದ್ರಿ ಚಿತ್ರ)

ಪಡುಬಿದ್ರಿ: ಕಾಪು ತಾಲ್ಲೂಕಿನ ಬೆಳಪು ಗ್ರಾಮದಲ್ಲಿ 68 ಎಕರೆ ಪ್ರದೇಶದಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಸಣ್ಣ ಕೈಗಾರಿಕೆಗಳ ಸ್ಥಾಪನೆ ಉದ್ದೇಶಕ್ಕೆ ಸಮಗ್ರವಾಗಿ ಅಭಿವೃದ್ಧಿಪಡಿಸಲಾಗಿದೆ. ಇದೀಗ ಕೈಗಾರಿಕೆಗಳಿಗೆ ದಿನದ ನಿರಂತರ ವಿದ್ಯುತ್ ಸರಬರಾಜು ಉದ್ದೇಶಕ್ಕಾಗಿ ಯುಪಿಸಿಎಲ್‌ನಿಂದ ಎಬಿಸಿ ಕೇಬಲ್‌ ಮುಖಾಂತರ ನೇರ ವಿದ್ಯುತ್ ಸರಬರಾಜು ಯೋಜನೆಗೆ ಚಾಲನೆ ನೀಡಲಾಗಿದೆ.

ಬಹಳಷ್ಟು ಪ್ರದೇಶಗಳಲ್ಲಿ ಸರ್ಕಾರ ಸಣ್ಣ ಕೈಗಾರಿಕೆಗಳ ಉತ್ತೇಜನಕ್ಕೆ ಸಹಕಾರ ನೀಡುತ್ತಿದೆ. ಕೈಗಾರಿಕಾ ಪ್ರದೇಶಾಭಿವೃದ್ಧಿ ಮಾಡಲಾಗುತ್ತಿದ್ದರೂ, ಹೆಚ್ಚಿನ ಕೈಗಾರಿಕೆಗಳು ವಿದ್ಯುತ್ ಖೋತಾದಿಂದಾಗಿ ನಷ್ಟ ಅನುಭವಿಸುತ್ತಿವೆ. ಆದರೆ, ಬೆಳಪುವಿನಲ್ಲಿ ಹೂಡಿಕೆದಾರರಿಗೆ ಹೆಚ್ಚು ಅನುಕೂಲವಾಗಲಿ ಎಂಬ ಕಾರಣಕ್ಕೆ ಅಲ್ಲಿಗೆ ಬರುವ ಎಲ್ಲಾ ರಸ್ತೆಗಳನ್ನು ವರ್ತುಲ ರಸ್ತೆಗಳನ್ನಾಗಿ ಅಭಿವೃದ್ಧಿಗೊಳಿಸಲಾಗಿದೆ. ಸಮೀಪದಲ್ಲಿ ರೈಲ್ವೇ ನಿಲ್ದಾಣವಿದೆ. ಈ ಮೂಲಕ ಸಾರಿಗೆ ಅನುಕೂಲತೆ ಕಲ್ಪಿಸಲಾಗಿದೆ. ಸುಮಾರು 10 ಕಿ.ಮೀ. ದೂರದ ಎಲ್ಲೂರಿನ ಯು.ಪಿ.ಸಿ.ಎಲ್ ವಿದ್ಯುತ್ ಸ್ಥಾವರದಿಂದ ಅತ್ಯಾಧುನಿಕ ಎ.ಬಿ.ಸಿ ವಿದ್ಯುತ್ ಸರಬರಾಜು ಯೋಜನೆಗೆ ಚಾಲನೆ ನೀಡಲಾಗಿದ್ದು, ಕೈಗಾರಿಕೋದ್ಯಮಿಗಳಿಗೆ ಹೆಚ್ಚು ಸಹಕಾರಿಯಾಗಿಲಿದೆ.

ವಿದ್ಯುತ್ ಸರಬರಾಜು ತಂತಿ ಸಂಪೂರ್ಣವಾಗಿ ರಕ್ಷಾ ಕವಚದಿಂದ ಸುತ್ತುವರಿದಿರುತ್ತದೆ. ಇದರಿಂದ ಯಾವುದೇ ರೀತಿಯಲ್ಲಿ ವಿದ್ಯುತ್ ಸೋರಿಕೆ ಆಗಲ್ಲ. ಸರಬರಾಜು ಕೇಂದ್ರದಿಂದ ಉತ್ಪಾದನಾ ಘಟಕದವರಿಗೆ ವಿದ್ಯುತ್ ಶಕ್ತಿ ಪ್ರಮಾಣದಲ್ಲಿ ವ್ಯತ್ಯಾಸ ಆಗುವುದಿಲ್ಲ. ವಿದ್ಯುತ್ ಕಡಿತ ಆಗಲ್ಲ. ವಿದ್ಯುತ್ ತಂತಿ ಮುರಿದು ಬೀಳಲ್ಲ. ಸಾರ್ವಜನಿಕರಿಗೂ ಯಾವುದೇ ಅಪಾಯ ಇರಲ್ಲ.11 ಕೆ.ವಿ. ವಿದ್ಯುತ್ ಸಾಮರ್ಥ್ಯದ ಸರಬರಾಜು ಎಲ್ಲೂರಿನ ಯು.ಪಿ.ಸಿ.ಎಲ್. ಯೋಜನೆಯಿಂದ ಬೆಳಪು ಕೈಗಾರಿಕಾ ಪ್ರದೇಶಕ್ಕೆ ಎ.ಬಿ.ಸಿ ಕೇಬಲ್ ಮೂಲಕ ಅಳವಡಿಸಲಾಗಿದೆ. ಇದು ಶಾಶ್ವತ ಹಾಗೂ ಆಧುನಿಕ ತಂತ್ರಜ್ಞಾನದ ಯೋಜನೆ.

ಗ್ರಾಮದಲ್ಲಿ ಉದ್ದಿಮೆ-ಉದ್ಯೋಗ: ಬೆಳಪು ಗ್ರಾಮ ಹಿಂದೆ ಬೆಳಪು ಕಾಡು ಎಂದೇ ಖ್ಯಾತಿ ಪಡೆದಿದ್ದು, ವಿರಳ ಮನೆಗಳು, ಸುತ್ತ ಅರಣ್ಯ ಪ್ರದೇಶ ಮತ್ತು ಬೇಸಿಗೆ ಕಾಲದಲ್ಲಿ ಕಾಳ್ಗಿಚ್ಚಿನಂತೆ ಬೆಂಕಿ ಆವರಿಸುತ್ತಿತ್ತು. ಇದೀಗ ಬೆಳಪುವಿನ ಸಮಗ್ರ ಅಭಿವೃದ್ಧಿ ಹೊಂದಿದ್ದು, ಬೆಳಪು ಗ್ರಾಮದಲ್ಲಿ ಹಲವಾರು ಉದ್ದಿಮೆಗಳು ಸ್ಥಾಪನೆಯಾಗುವುದರೊಂದಿಗೆ ಗ್ರಾಮದ ಯುವಕ-ಯುವತಿಯರಿಗೆ ಮನೆಗೊಂದು ಉದ್ಯೋಗ ಕಲ್ಪಿಸುವ ಚಿಂತನೆ ಇದೆ. ಈ ನಿಟ್ಟಿನಲ್ಲಿ ಪ್ರಯತ್ನ ಆಗುತ್ತಿದೆ ಎಂದು ಬೆಳಪು ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಹೇಳಿದರು.

 ಆನ್‌ಲೈನ್‌ ಬುಕ್ಕಿಂಗ್ ಸೇವೆ

ಬೆಳಪು ಕೈಗಾರಿಕಾ ಪ್ರದೇಶದ ಅಭಿವೃದ್ಧಿ ಯೋಜನೆ ಪೂರ್ಣಗೊಂಡಿದೆ. ವಿದ್ಯುತ್ ಸರಬರಾಜು ಯೋಜನೆ ಕಾಮಗಾರಿ ಅಂತಿಮ ಹಂತದಲಿದೆ. ಬೆಳಪುವಿನ "ಸಣ್ಣ ಕೈಗಾರಿಕಾ ಪಾರ್ಕ್‌ರ್‌" ಕೈಗಾರಿಕೋದ್ಯಮಿಗಳಿಗೆ ಹೂಡಿಕೆದಾರರಿಗೆ ಅನುಕೂಲವಾಗುವಂತೆ ಮಾದರಿಯಾಗಿ ಅಭಿವೃದ್ಧಿ ಮಾಡಲಾಗಿದೆ. ಮುಂದೆ ಗ್ರಾಮ ಪಂಚಾಯಿತಿಯಲ್ಲಿ  ವಿಶೇಷ ಗ್ರಾಮಸಭೆ ಕರೆಯಬೇಕಾಗಿದೆ. ತಕ್ಷಣ ಆನ್‌ಲೈನ್‌ ಬುಕ್ಕಿಂಗ್ ವ್ಯವಸ್ಥೆ ಪ್ರಾರಂಭ ಮಾಡಲಾಗುವುದು ಎಂದು ಮಂಗಳೂರು ಕೈಗಾರಿಕಾ ಅಭಿವೃದ್ಧಿ ಮಂಡಳಿ ಅಭಿವೃದ್ಧಿ ಅಧಿಕಾರಿ ಶಿವಕುಮಾರ್ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !