ಪ್ರಶಸ್ತಿ ಸಂತೋಷದ ಜತೆಗೆ ಧನ್ಯತೆ ನೀಡಿದೆ: ವೀರೇಂದ್ರ ಹೆಗ್ಗಡೆ

7
ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರಿಗೆ ಜೀವಮಾನ ಶ್ರೇಷ್ಠ ಪ್ರಶಸ್ತಿ ಪ್ರದಾನ

ಪ್ರಶಸ್ತಿ ಸಂತೋಷದ ಜತೆಗೆ ಧನ್ಯತೆ ನೀಡಿದೆ: ವೀರೇಂದ್ರ ಹೆಗ್ಗಡೆ

Published:
Updated:
Deccan Herald

ಉಡುಪಿ: ಪ್ರತಿಷ್ಠಿತ ಮಣಿಪಾಲ ಸಂಸ್ಥೆಯಿಂದ ‘ಜೀವಮಾನ ಶ್ರೇಷ್ಠ ಪ್ರಶಸ್ತಿ ಪಡೆದಿರುವುದು ಸಂತೋಷ ಮಾತ್ರವಲ್ಲ; ಧನ್ಯತೆಯನ್ನೂ ತಂದಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು.

ಮಣಿಪಾಲದ ವ್ಯಾಲಿ ವ್ಯೂ ಹೋಟೆಲ್‌ ಸಭಾಂಗಣದಲ್ಲಿ ಶನಿವಾರ ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಷನ್ ಸಂಸ್ಥೆಯ 75ನೇ ವರ್ಷದ ಸಂಭ್ರಮಾಚರಣೆ ಸಮಾರಂಭದಲ್ಲಿ ‘ಜೀವಮಾನ ಸಾಧನೆ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ಮಣಿಪಾಲ ಅಕಾಡೆಮಿ ಜತೆಗಿನ ಒಡನಾಟ 5 ದಶಕಗಳದ್ದು. ಮಣಿಪಾಲ ಸಮೂಹ ಸಂಸ್ಥೆಗಳನ್ನು ಟಿ.ಎಂ.ಎ. ಪೈ ಅವರು ಕಟ್ಟಿಬೆಳೆಸಿದ ರೀತಿಯೇ ಅದ್ಭುತ. ಶಿಕ್ಷಣ, ಆರೋಗ್ಯ, ಬ್ಯಾಂಕಿಂಗ್ ಕ್ಷೇತ್ರಗಳಿಗೆ ಪೈಗಳು ನೀಡಿದ ಕೊಡುಗೆ ದೊಡ್ಡದು ಎಂದು ಸ್ಮರಿಸಿದರು.

ಸ್ವಾತಂತ್ರ್ಯ ಬರುವ ಮುನ್ನವೇ ಭಾರತದ ಭವಿಷ್ಯದ ಬಗ್ಗೆ ಕನಸು ಕಂಡಿದ್ದವರು ಟಿ.ಎಂ.ಎ.ಪೈಗಳು. ಗ್ರಾಮೀಣ ಭಾಗದಲ್ಲಿರುವ ಬಡತನ, ಜನರ ಜೀವನಮಟ್ಟ, ಅಗತ್ಯತೆಯನ್ನು ಅರಿತು, ಶಿಕ್ಷಣ, ಬ್ಯಾಂಕಿಂಗ್, ಆರೋಗ್ಯ ಕ್ಷೇತ್ರದ ಬೆಳವಣಿಗೆಗೆ ಅವಿರತವಾಗಿ ದುಡಿದರು ಎಂದು ಸ್ಮರಿಸಿದರು.

ಶಿಕ್ಷಣದ ಮಹತ್ವವನ್ನು ಅರಿತು ಶಿಕ್ಷಣ ಸಂಸ್ಥೆಗಳನ್ನು ತೆರೆದರು. ಜನರ ಆರ್ಥಿಕಮಟ್ಟ ಸುಧಾರಿಸಲು ಬ್ಯಾಂಕಿಂಗ್ ವ್ಯವಸ್ಥೆ ಅಗತ್ಯ ಎಂಬುದನ್ನು ಮನಗಂಡು ಬ್ಯಾಂಕ್‌ ಆರಂಭಿಸಿದರು. ಅವರ ಕಾಲದಲ್ಲಿ ಜಾರಿಗೆ ಬಂದ ’ಪಿಗ್ಮಿ’ ಉಳಿತಾಯ ಯೋಜನೆ ದೊಡ್ಡಮಟ್ಟದ ಯಶಸ್ಸು ತಂದುಕೊಟ್ಟಿತ್ತು. ಆರೋಗ್ಯದ ಮಹತ್ವ ಅರಿತು ಆಸ್ಪತ್ರೆಗಳನ್ನು ತೆರೆದರು ಎಂದರು.‌

ಟಿಎಂಎ ಪೈಗಳು ಇವೆಲ್ಲವನ್ನೂ ಸ್ವಾರ್ಥಕ್ಕಾಗಿ ಮಾಡದೆ ದೇಶದ ಪ್ರಗತಿಗಾಗಿ ಮಾಡಿದರು. ಸವಾಲುಗಳನ್ನು ಮೆಟ್ಟಿನಿಲ್ಲುವಂತಹ ಗುಣ, ಪರಿಶ್ರಮದ ಪಲವಾಗಿ ಅತ್ಯುನ್ನತ ಸ್ಥಾನಗಳನ್ನು ಅಲಂಕರಿಸಿದರು. ದೇಶಕಂಡ ಶ್ರೇಷ್ಠ ವ್ಯಕ್ತಿಗಳಲ್ಲಿ ಟಿ.ಎಂ.ಎ.ಪೈಗಳು ಕೂಡ ಒಬ್ಬರು ಎಂದರು.

ಕಾರ್ಕಳ, ಮೂಡುಬಿದಿರೆ, ಕುಂದಾಪುರ, ಮೂಲ್ಕಿಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ತೆರೆದು ಗ್ರಾಮೀಣ ಜನರಿಗೆ ಶಿಕ್ಷಣದ ಮಹತ್ವ ತಿಳಿಸಿಕೊಟ್ಟರು. ಮಣಿಪಾಲ ಇಂಡಸ್ಟ್ರಿ ತೆರೆದು ಜನರ ಅಗತ್ಯತೆಗಳನ್ನು ಪೂರೈಸಿದರು. ಸಾವಿರಾರು ಜನರಿಗೆ ಉದ್ಯೋಗ ನೀಡಿದರು ಎಂದು ಹೇಳಿದರು.

ಟಿಎಂಎ ಪೈ ಅವರ ಪ್ರೇರಣೆಯಿಂದ 1982ರಲ್ಲಿ ಗ್ರಾಮೀಣಾಭಿವೃದ್ಧಿ ಯೋಜನೆ ಹಾಗೂ ಸ್ವ ಉದ್ಯೋಗ ತರಬೇತಿ ಯೋಜನೆ ಆರಂಭಿಸಲಾಯಿತು. ಈ ಎರಡೂ ಕಾರ್ಯಕ್ರಮಗಳು ಅತ್ಯಂತ ಯಶಸ್ವಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಮಣಿಪಾಲದಲ್ಲಿ ಓದಿದ ವಿದ್ಯಾರ್ಥಿಗಳು ಅಂತರರಾಷ್ಟ್ರೀಯ ಮಟ್ಟದ ಸಂಸ್ಥೆಗಳಲ್ಲಿ ಉನ್ನತ ಹುದ್ದೆಗಳಿಗೇರಿದ್ದಾರೆ. ಇಲ್ಲಿಯ ವೈದ್ಯರು, ಎಂಜಿನಿಯರ್‌ಗಳು ವಿದೇಶಗಳಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. ಮಣಿಪಾಲದಲ್ಲಿ ಸಿಗುತ್ತಿರುವ ಜಾತಿ, ಧರ್ಮ, ಮತ ಭೇದ ರಹಿತ ಗುಣಮಟ್ಟದ ಶಿಕ್ಷಣವೇ ಇದಕ್ಕೆ ಕಾರಣ ಎಂದರು.

ಕಾರ್ಯಕ್ರಮದಲ್ಲಿ ಮಾಹೆ ಸಹ ಕುಲಾಧಿಪತಿ ಎಚ್‌.ಎಸ್‌.ಬಲ್ಲಾಳ್‌, ಉಪ ಕುಲಪತಿ ಡಾ.ಎಚ್‌.ವಿನೋದ್ ಭಟ್‌, ರಂಜನ್ ಪೈ, ರಾಜೇಂದ್ರ ಕುಮಾರ್, ಶಾಂತಾರಾಮ್ ಭಟ್ ಅವರೂ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !