ಶನಿವಾರ, ಜನವರಿ 29, 2022
23 °C
ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ

ಸವಾಲಿನ ಅವಧಿ ಅಭಿವೃದ್ಧಿಗೆ ಸದ್ಬಳಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಅದಮಾರು ಮಠದ ಪರ್ಯಾಯದ ಅವಧಿಯಲ್ಲಿ ಕೋವಿಡ್‌ ಸಂಕಷ್ಟ ಎದುರಾದರೂ ಸವಾಲುಗಳನ್ನೇ ಅಭಿವೃದ್ಧಿ ಕಾರ್ಯಗಳಿಗೆ ಪೂರಕವಾಗಿ ಬಳಸಿಕೊಳ್ಳಲಾಯಿತು ಎಂದು ಈಶಪ್ರಿಯ ತೀರ್ಥ ಸ್ವಾಮೀಜಿ ಹೇಳಿದರು.

ಬುಧವಾರ ಮಠದಲ್ಲಿ ಸುದ್ದಿಗೋಷ್ಠಿ ನಡೆಸಿದ ಶ್ರೀಗಳು, 2 ವರ್ಷಗಳ ಪರ್ಯಾಯದ ಅವಧಿಯಲ್ಲಿ ಸತ್‌ ಚಿಂತನೆ, ಸತ್ ಬದಲಾವಣೆ ಹಾಗೂ ಸದ್ವಿಚಾರಗಳಿಗೆ ಆದ್ಯತೆ ನೀಡಲಾಯಿತು. ಲಾಕ್‌ಡೌನ್ ಅವಧಿಯಲ್ಲಿ ಮಠದ ಒಳಾಂಗಣ ಹಾಗೂ ಹೊರಾಂಗಣವನ್ನು ಅಂದಗಾಣಿಸುವ ಕೆಲಸ, ದುರಸ್ತಿ ಕಾರ್ಯ ಸೇರಿದಂತೆ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಲಾಯಿತು ಎಂದರು.

ಪರ್ಯಾಯ ಪೀಠವೇರುವ ಸಂದರ್ಭ ಯಾವುದೇ ಸಂಕಲ್ಪಗಳನ್ನು ಮಾಡಲಿಲ್ಲವಾದ್ದರಿಂದ ಸಂಕಲ್ಪ ಭಂಗವಾಗಲಿಲ್ಲ. ಕೃಷ್ಣಪೂಜೆ ಸಾಂಗವಾಗಿ ನಡೆಯಬೇಕು ಎಂಬ ಇಚ್ಛೆಯಂತೆ ನೆರವೇರಿದೆ ಎಂದು ಶ್ರೀಗಳು ಹೇಳಿದರು.

ನಮ್ಮ ಊರು, ನೆಲ, ಸಂಸ್ಕೃತಿ, ಧರ್ಮದ ‌ಅರಿವು ಯುವಕರಿಗೆ ಮೂಡಿದಾಗ ಅನ್ಯ ಜಿಲ್ಲೆ, ರಾಜ್ಯಗಳಿಗೆ ವಲಸೆ ಹೋಗುವುದು ತಪ್ಪುತ್ತದೆ. ಯುವಕರು ಸ್ಥಳೀಯವಾಗಿ ಉದ್ಯೋಗಗಳನ್ನು ಸೃಷ್ಟಿಸಬೇಕು. ಉದ್ಯಮಗಳನ್ನು ಆರಂಭಿಸಿ ದುಡಿಯವ ಕೈಗಳಿಗೆ ಕೆಲಸ ನೀಡಬೇಕು ಎಂದು ಸ್ವಾಮೀಜಿ ಆಶಿಸಿದರು.

ಪರ್ಯಾಯದ ಅವಧಿಯಲ್ಲಿ ಮಠದ ಧಾರ್ಮಿಕ ವಿಚಾರಗಳನ್ನು ಜನರಿಗೆ ತಲುಪಿಸುವಲ್ಲಿ ಮಾಧ್ಯಮಗಳ ಸಹಕಾರಕ್ಕೆ ಶ್ರೀಗಳು ಧನ್ಯವಾದ ಸಲ್ಲಿಸಿದರು.

ಮಠದ ವ್ಯವಸ್ಥಾಪಕ ಗೋವಿಂದರಾಜ್ ಮಾತನಾಡಿ, ಅದಮಾರು ಪರ್ಯಾಯದಲ್ಲಿ ಯಕ್ಷಗಾನ ಕಲೆಗೆ ಕಲಾವಿದರಿಗೆ ಪ್ರೋತ್ಸಾಹ ನೀಡಲಾಗಿದೆ. ಮಠದಲ್ಲಿ ಪರಿಸರ ಸ್ನೇಹಿ ಸೌರ ವಿದ್ಯುತ್ ಅಳವಡಿಸಲಾಗಿದೆ. ಕಿನ್ನಿಗೋಳಿ ನೇಕಾರರಿಗೆ ಮಠ ಆಸರೆಯಾಗಿದೆ, ಯಾತ್ರಾತ್ರಿಗಳಗೆ ದೇವರ ದರ್ಶನ ಸುಗಮವಾಗಿಸುವ ಉದ್ದೇಶದಿಂದ ವಿಶ್ವಪಥ ಮಾರ್ಗ ನಿರ್ಮಿಸಲಾಗಿದೆ. ಆನಂದ ತುಳಸಿವನ ಟ್ರಸ್ಟ್‌ನಿಂದ ದೇವಾಲಯಳಿಗೆ ನೆರವು, ರೋಗಿಗಳಿಗೆ, ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲಾಗಿದೆ ಎಂದರು.

ಮಧ್ವ ಸರೋವರದ ಮಧ್ವಗುಡಿಯ ಮೇಲ್ಚಾವಣಿ ನವೀಕರ, ಸಾವಯವ ಕೃಷಿಗೆ ಒತ್ತು, ಚಿಣ್ಣರ ಸಂತರ್ಪಣೆ ಕಾರ್ಯಕ್ರಮ ಮುಂದುವರಿಕೆ, ಮಳೆ ನೀರು ಸಂಗ್ರಹ, ಗುಡಿ ಕೈಗಾರಿಕೆಗಳಿಗೆ ಆದ್ಯತೆ, ಬಾಳೆ ಕೃಷಿಗೆ ರೈತರಿಗೆ ಪ್ರೇರಣೆ, ಗೋಮಯ ಹಾಗೂ ಮಣ್ಣು ಬಳಕೆಯಿಂದ ಬಣ್ಣಗಳ ತಯಾರಿ, ಕೊರೊನಾ ಕಾಲದಲ್ಲೂ ದುಡಿಯುವ ಕೈಗಳಿಗೆ ಕೆಲಸ, ಮಠದಲ್ಲಿ ಪ್ಲಾಸ್ಟಿಕ್ ನಿಷೇಧ, ಮೈದಾ, ಸಕ್ಕರೆ ಬಳಕೆಗೆ ನಿರ್ಬಂಧ, ದೇಸಿ ಗೋತಳಿ ರಕ್ಷಣೆ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡಲಾಗಿದೆ ಎಂದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು