ಮುಕ್ತ ವಿವಿಗೆ ಮಾನ್ಯತೆ: 29 ಕೋರ್ಸ್‌ಗೆ ಪ್ರವೇಶಾತಿ-ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ

7
ಜನವರಿಯಿಂದ ಬಿ.ಇಡಿ, ಎಂ.ಬಿ.ಎ ಕೋರ್ಸ್‌ ಆರಂಭ

ಮುಕ್ತ ವಿವಿಗೆ ಮಾನ್ಯತೆ: 29 ಕೋರ್ಸ್‌ಗೆ ಪ್ರವೇಶಾತಿ-ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ

Published:
Updated:
Deccan Herald

ಉಡುಪಿ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ ಕಾನೂನುಬದ್ಧ ಮಾನ್ಯತೆ ಸಿಕ್ಕಿದ್ದು, 29 ಕೋರ್ಸ್‌ಗಳನ್ನು ಆರಂಭಿಸಲು ಯುಜಿಸಿ ಅನುಮತಿ ನೀಡಿದೆ. ವಿದ್ಯಾರ್ಥಿಗಳು ನಿರಾತಂಕವಾಗಿ ದೂರಶಿಕ್ಷಣ ಪ್ರವೇಶಾತಿ ಪಡೆಯಬಹುದು ಎಂದು ಮೈಸೂರು ಮುಕ್ತ ವಿ.ವಿ ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿದ್ದಾರೆ. ಅ.20 ಅಂತಿಮ ದಿನವಾಗಿದ್ದು, ಆಸಕ್ತರು ಪ್ರವೇಶಾತಿ ಪಡೆಯಬೇಕು ಎಂದು ಕುಲಪತಿ ಮನವಿ ಮಾಡಿದರು.‌

ಯುಜಿಸಿ 2018–19ನೇ ಸಾಲಿನಿಂದ ಮುಂದಿನ 5 ವರ್ಷಗಳ ಅವಧಿಗೆ ಮಾನ್ಯತೆ ನೀಡಿದೆ. ಮೊದಲು 17 ತಾಂತ್ರಿಕೇತರ ಕೋರ್ಸ್‌ಗಳ ಆರಂಭಕ್ಕೆ ಯುಜಿಸಿ ಅನುಮತಿ ನೀಡಿತ್ತು. ಬಳಿಕ ಅ.3ರಂದು 14 ಕೋರ್ಸ್‌ಗಳ ಆರಂಭಕ್ಕೆ ಒಪ್ಪಿಗೆ ದೊರೆತಿದೆ. 2019ರ ಜನವರಿಯಲ್ಲಿ ಎಂ.ಬಿ.ಎ ಹಾಗೂ ಬಿ.ಇಡಿ ಕೋರ್ಸ್‌ಗಳಿಗೆ ಪ್ರವೇಶಾತಿ ಆರಂಭವಾಗಲಿದೆ ಎಂದು ವಿವರ ನೀಡಿದರು.

ಮುಕ್ತ ವಿಶ್ವವಿದ್ಯಾಲಯಕ್ಕೆ ಯುಜಿಸಿ ಮಾನ್ಯತೆ ಸಿಕ್ಕಿರುವುದರಿಂದ ವಿದ್ಯಾರ್ಥಿಗಳು ಭಯಪಡಬೇಕಿಲ್ಲ. ಇಲ್ಲಿ ಪದವಿ ಪಡೆದ ವಿದ್ಯಾರ್ಥಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಎಲ್ಲ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುತ್ತಾರೆ ಎಂದು ಹೇಳಿದರು.

ಉಡುಪಿಯ ಹಳೆಯ ಜಿಲ್ಲಾ ಪಂಚಾಯತ್ ಕಟ್ಟಡದಲ್ಲಿ ಮುಕ್ತ ವಿವಿ ಪ್ರಾದೇಶಿಕ ಕೇಂದ್ರ ಕಚೇರಿಯಿದ್ದು ಅಗತ್ಯ ಮಾಹಿತಿ ಪಡೆಯಬಹುದು. ಪ್ರವೇಶ ಪಡೆದವರಿಗೆ ಎಂಜಿಎಂ ಕಾಲೇಜು, ಡಾ.ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಕಾರ್ಕಳದ ಭುವನೇಂದ್ರ ಕಾಲೇಜು, ಹಿಡಿಯಡಕದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪಾಠ ಮಾಡಲಾಗುವುದು ಎಂದರು.

31 ಕೋರ್ಸ್‌ಗಳ ಜತೆಗೆ ಕೌಶಲಾಭಿವೃದ್ಧಿ ತರಬೇತಿ ಕೋರ್ಸ್‌ಗಳನ್ನು ಆರಂಭಿಸಲಾಗಿದೆ. ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ 2 ವರ್ಷ, ಸ್ನಾತಕ ವಿದ್ಯಾರ್ಥಿಗಳಿಗೆ ಮೂರು ವರ್ಷಗಳದ್ದಾಗಿರುತ್ತದೆ. ಯುಜಿಸಿ ನಿಯಮಾವಳಿ 2016 ರಂತೆ ಪಿಎಚ್‌.ಡಿ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.

‘ಮುಕ್ತ ವಿಶ್ವವಿದ್ಯಾಲಯದಲ್ಲಿ 2012ರವರೆಗೆ ಸಮಸ್ಯೆಗಳು ಎದುರಾಗಿರಲಿಲ್ಲ. ನಂತರ ಮೂರು ಪ್ರಮುಖ ನಿಯಮಗಳ ಉಲ್ಲಂಘನೆ ಮಾಡಿದ್ದಕ್ಕೆ 2015ರ ಜೂನ್‌ 15ರಂದು ಮುಕ್ತ ವಿವಿಯ ಮಾನ್ಯತೆಯನ್ನು ಯುಜಿಸಿ ರದ್ದು ಮಾಡಿತ್ತು. ಅಷ್ಟರಲ್ಲಿ 2013 ಹಾಗೂ 2014ನೇ ಸಾಲಿಗೆ 95 ಸಾವಿರ ವಿದ್ಯಾರ್ಥಿಗಳು ಪ್ರವೇಶಾತಿ ಪಡೆದುಕೊಂಡಿದ್ದರು. ಯುಜಿಸಿ ನಿರ್ಧಾರದಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸಬೇಕಾಯಿತು ಎಂದು ಪ್ರೊ.ಡಿ.ಶಿವಲಿಂಗಯ್ಯ ಮಾಹಿತಿ ನೀಡಿದರು.

ಮಾನ್ಯತೆ ರದ್ದಾದ ದಿನದಿಂದಲೂ ಸತತ ಕಾನೂನು ಹೋರಾಟ ನಡೆಸಿದ ಫಲವಾಗಿ ಕೊನೆಗೂ ಮುಕ್ತ ವಿವಿಗೆ ಮಾನ್ಯತೆ ಸಿಕ್ಕಿದೆ. ನ್ಯಾಯಾಲಯ ಯುಜಿಸಿ ನಡೆಗೆ ಛೀಮಾರಿ ಹಾಕಿದೆ. 2013–14 ಹಾಗೂ 2014–15 ರಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿಸಲು ಬದ್ಧವಾಗಿದ್ದು, ಕಾನೂನು ಹೋರಾಟ ಮುಂದುವರಿಯಲಿದೆ ಎಂದರು.

ಮಾನ್ಯತೆ ರದ್ದಾದ ಅವಧಿಯಲ್ಲಿ ಪ್ರವೇಶ ಪಡೆದಿದ್ದ ವಿದ್ಯಾರ್ಥಿಗಳಿಗೆ ಮತ್ತೆ ಪ್ರವೇಶ ನೀಡಲಾಗುತ್ತಿದ್ದು, ಬೋಧನಾ ಶುಲ್ಕದಲ್ಲಿ ಶೇ 50ರಷ್ಟು ರಿಯಾಯಿತಿ ನೀಡಲಾಗುವುದು. ಹಿಂದೆ ಅವರು ಭರಿಸಿದ್ದ ಹಣವನ್ನು ಮರಳಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಶಿವಲಿಂಗಯ್ಯ ತಿಳಿಸಿದರು.

ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ವಿನಾಯಿತಿ ನೀಡಲಾಗಿದೆ. www.ksoumysore. karnataka.gov.in ವೆಬ್‌ಸೈಟ್‌ನಿಂದ ಅರ್ಜಿ, ಶುಲ್ಕ ಪಾವತಿ ಚಲನ್‌ ಪಡೆಯಬಹುದು. ಪಾವತಿ ಬಳಿಕ ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಪ್ರಾದೇಶಿಕ ಕೇಂದ್ರಗಳಲ್ಲಿ ಸಲ್ಲಿಸಿ ಪ್ರವೇಶಾತಿ ಪಡೆಯಬಹುದು ಎಂದರು.

ಸುದ್ದಿಗೋಷ್ಠಿಯಲ್ಲಿ ಮುಕ್ತವಿವಿ ಉಡುಪಿ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಮಹಾಲಿಂಗು ಕಲ್ಕುಂದ ಉಪಸ್ಥಿತರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !