ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಯಲ್ಲಿಯೇ ನಾಟಿ ಮಾಡಿದ ವಿದ್ಯಾರ್ಥಿನಿಯರು

ಕೋಟ ವಿದ್ಯಾರ್ಥಿಗಳಿಂದ ಕೃಷಿ ಪ್ರಾತ್ಯಕ್ಷಿಕೆ
Last Updated 6 ಜುಲೈ 2018, 14:03 IST
ಅಕ್ಷರ ಗಾತ್ರ

ಕೋಟ (ಬ್ರಹ್ಮಾವರ): ನಾಲ್ಕೈದು ದಿನಗಳಿಂದ ಬಿಡುವು ನೀಡಿದ್ದ ಮಳೆರಾಯ ಶುಕ್ರವಾರ ಮತ್ತೆ ಬಿರುಸುಗೊಂಡಿದ್ದರೂ ವಿದ್ಯಾರ್ಥಿಗಳಿಗೆ ಮಾತ್ರ ಈ ಮಳೆ ಯಾವ ಲೆಕ್ಕಕ್ಕೂ ಬರಲಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಗದ್ದೆ ಕೆಲಸ ಮಾಡುವ ಸಂದರ್ಭ ಕೃಷಿಕರು ಉಪಯೋಗಿಸುವ ಗೊರಬು, ಪ್ಲಾಸ್ಟಿಕ್ ಮತ್ತು ಕೊಡೆಗಳನ್ನು ಹಿಡಿದುಕೊಂಡು ಮಳೆಯ ಆರ್ಭಟ ಎಷ್ಟಿದ್ದರೂ ಆ ಬಗ್ಗೆ ಗಮನ ನೀಡದೇ ವಿದ್ಯಾರ್ಥಿಯನಿಯರಿಂದ ನಾಟಿ ಕಾರ್ಯ ನಡೆಯಿತು.

ಹೌದು, ಈ ಚಿತ್ರಣ ಶುಕ್ರವಾರ ಕೋಟದ ಪ್ರಗತಿಪರ ಕೃಷಿಕ ಪಂಜು ಅವರ ಗದ್ದೆಯಲ್ಲಿ ಕೋಟ ವಿವೇಕ ಪದವಿಪೂರ್ವ ಕಾಲೇಜಿನ ಬಾಲಕಿಯರ ಪ್ರೌಢಶಾಲೆಯ ಇಕೋ ಕ್ಲಬ್ ಮತ್ತು ಹಂಗಾರಕಟ್ಟೆ ರೋಟರಿ ಕ್ಲಬ್ ಸಹಯೋಗದಲ್ಲಿ ನಡೆದ ಕೃಷಿ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ನಾಟಿ ಕಾರ್ಯದಲ್ಲಿ ನಿರತ ವಿದ್ಯಾರ್ಥಿನಿಯರದ್ದು.

ಸದಾ ತರಗತಿಯೊಳಗೆ ಪಾಠ ಪ್ರವಚನದಲ್ಲಿ ಮುಳುಗಿರುತ್ತಿದ್ದ ವಿದ್ಯಾರ್ಥಿನಿಯರು ಶುಕ್ರವಾರ ತರಗತಿಯ ಹೊರಗೆ ಬಂದು ಗದ್ದೆಯ ಕೆಸರಿನಲ್ಲಿ ಮಿಂದೆದ್ದು ಪಕ್ಕಾ ಕೃಷಿಕರಂತೆ ಕಂಡು ಬಂದರು. ಇತ್ತೀಚಿನ ದಿನಗಳಲ್ಲಿ ರೈತರು ಪಡುತ್ತಿರುವ ಕಷ್ಟಗಳ ಅರಿವು ಮತ್ತು ರೈತರ ಕೃಷಿ ಚಟುವಟಿಕೆಯ ಬದುಕಿನ ಸಮಸ್ಯೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಸಲುವಾಗಿ ಪ್ರೌಢಶಾಲೆಯ ಶಿಕ್ಷಕ ವೃಂದ ಈ ಪ್ರಯತ್ನ ಮಾಡಿತ್ತು.

ಪ್ರಗತಿಪರ ಕೃಷಿಕ ಪಂಜು ವಿದ್ಯಾರ್ಥಿನಿಯರಿಗೆ ಕೃಷಿ ಚಟುವಟಿಕೆಯ ಬಗ್ಗೆ ಮಾಹಿತಿ ನೀಡಿದರು. ಹಂಗಾರಕಟ್ಟೆ ಸಾಸ್ತಾನದ ರೋಟರಿ ಕ್ಲಬ್ ನಿಯೋಜಿತ ಅಧ್ಯಕ್ಷೆ ಸುಲತಾ ಹೆಗ್ಡೆ, ಕಾರ್ಯದರ್ಶಿ ಲೀಲಾವತಿ ಪೂಜಾರಿ, ಸದಸ್ಯರಾದ ಗೋಪಾಲ, ಕುಸುಮ ಮನೋಜ ಅವರು ವಿದ್ಯಾರ್ಥಿಗಳೊಂದಿಗೆ ನಾಟಿ ಮಾಡಿದ್ದು ವಿಶೇಷವಾಗಿತ್ತು.

ವಿವೇಕ ಬಾಲಕಿಯರ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಜಗದೀಶ ಹೊಳ್ಳ, ಇಕೋ ಕ್ಲಬ್‌ನ ಶಿಕ್ಷಕ ಮಾರ್ಗದರ್ಶಿ ರಾಧಾಕೃಷ್ಣ ಭಟ್, ಕಸೂತಿ ಶಿಕ್ಷಕಿ ವಿಜಯಲಕ್ಷ್ಮೀ, ಹಿರಿಯ ಶಿಕ್ಷಕ ನರೇಂದ್ರ ಕುಮಾರ್ ಕೋಟ, ಕಚೇರಿಯ ಸಂಜೀವ ಮಾರ್ಗದರ್ಶನ ನೀಡಿದರು.

*ಮಕ್ಕಳು ಗದ್ದೆಗೆ ಬಂದದ್ದು ತುಂಬಾ ಖುಷಿಯಾಯಿತು. ಅದರಲ್ಲೂ ಹೆಣ್ಣುಮಕ್ಕಳು ಈ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಈ ಸಲದ ಭತ್ತದ ಸಾಲು ನಾಟಿಯಿಂದ ಹೆಚ್ಚು ಫಸಲು ಪಡೆಯಬಹುದು.

-ಪಂಜು ಹಂದಟ್ಟುಪ್ರಗತಿಪರ ಕೃಷಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT