ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಬ್ರಿ | ಕೊರೊನಾ ಆತಂಕದ ನಡುವೆಯೂ ಕೃಷಿ ಕಾಯಕ ಶುರು.....

Last Updated 22 ಮೇ 2020, 19:30 IST
ಅಕ್ಷರ ಗಾತ್ರ

ಹೆಬ್ರಿ: ಕೋವಿಡ್‌ ಆತಂಕದ ನಡುವೆಯೂ ಮುಂಗಾರುಪೂರ್ವ ಮಳೆ ಬರುತ್ತಿದ್ದಂತೆಯೇ ಕೃಷಿಕರು ಕೃಷಿ ಕಾರ್ಯ ಶುರು ಮಾಡಿದ್ದಾರೆ.

ಕೊರೊನಾ ಲಾಕ್‌ಡೌನ್‌ನಿಂದ ಉದ್ಯೋಗ ಆರ್ಥಿಕ ಸಮಸ್ಯೆ ಇದ್ದರೂ ಭತ್ತ ಬೇಸಾಯ ಕೃಷಿಯನ್ನು ಮಾಡಲೇಬೇಕು ಎಂಬ ಪಣತೊಟ್ಟ ಬಹುತೇಕ ಮಂದಿ ರೈತರು ಗದ್ದೆಗಿಳಿದಿದ್ದಾರೆ. ಕೊಣ, ಎತ್ತುಗಳು, ಟಿಲ್ಲರ್, ಟ್ರಾಕ್ಟರ್‌ ಬಳಸಿ ಗದ್ದೆಯ ಉಳುಮೆ ಆರಂಭವಾಗಿದೆ. ಜಾನುವಾರು ಗೊಬ್ಬರ, ತರಗಲೆ, ಸೊಪ್ಪು ಹಾಕಿ ಗದ್ದೆಯನ್ನು ಉಳುಮೆ ಮಾಡಿ ಹದಗೊಳಿಸುವುದು, ತರಕಾರಿ ಬೆಳೆ, ಅರಶಿನ ಬೆಳೆ ಸಹಿತ ಉಪಬೆಳೆ ನಾಟಿಗೆ ಸಿದ್ಧತೆ ನಡೆಯುತ್ತಿದೆ.

ಮಳೆಯೂ ವರ: ಜೂನ್ ಮೊದಲ ವಾರದಲ್ಲಿ ಮುಂಗಾರು ಮಳೆ ಬರುವುದು ವಾಡಿಕೆಯಾದರೂ ಮುಂಗಾರುಪೂರ್ವ ಮಳೆ ಈ ಸಲ ಕೃಷಿಕರಿಗೆ ವರದಾನವಾಗಿದೆ. ಕಾರ್ಕಳ ತಾಲ್ಲೂಕಿನ ಶಿರ್ಲಾಲು, ಕೆರ್ವಾಸೆ, ಮಾಳ ಸಹಿತ ಹಲವೆಡೆ ಮೇ ತಿಂಗಳಿನಲ್ಲಿ ಹಲವು ಸಲ ಭಾರಿ ಮಳೆ ಬಂದಿದ್ದು, ಈಗಾಗಲೇ ಗದ್ದೆಯಲ್ಲಿ ನೀರು ಲಭ್ಯ ಇದೆ. ತೇವಾಂಶ ಹೆಚ್ಚಿದೆ. ನದಿ ಹೊಳೆ ಹಳ್ಳಗಳಲ್ಲಿ ನೀರು ತುಂಬಿದೆ. ಬಾವಿಯಲ್ಲೂ ನೀರು ಹೆಚ್ಚಾಗಿದೆ. ಹೆಬ್ರಿ ತಾಲ್ಲೂಕಿನ ಬಹುತೇಕ ಕಡೆಯೂ ಬಯಲು ಗದ್ದೆಯಲ್ಲಿ ನೀರಿನ ಲಭ್ಯತೆ ಇದೆ. ಮುನಿಯಾಲಿನ ಕಾಡುಹೊಳೆಯಲ್ಲಿ ನೀರು ಹರಿಯ ತೊಡಗಿದೆ.

ಮನೆಮಂದಿ ಭಾಗಿ:ಲಾಕ್‌ಡೌನ್‍ನಿಂದಾಗಿ ಮನೆಮಂದಿ ಎಲ್ಲರೂ ಬಹುತೇಕ ಮನೆಯಲ್ಲೇ ಇದ್ದಾರೆ. ಹೆಚ್ಚಿನವರು ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದಾರೆ. ಮನೆಯಲ್ಲೇ ಇದ್ದು ಏನು ಮಾಡುವುದು ಎಂದು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಮಳೆಗಾಲಕ್ಕೆ ಉರುವಲಿಗಾಗಿ ಕಟ್ಟಿಗೆ ಸಂಗ್ರಹ, ಜಾನುವಾರುಗಳ ಹಟ್ಟಿ ಕೊಟ್ಟಿಗೆಗೆ ಹಾಕಲು ತರಗಲೆ ಸಂಗ್ರಹವನ್ನು ಮನೆಮಂದಿಯೇ ಸೇರಿ ಮಾಡಿದ್ದಾರೆ. ‘ನಾವು ಪ್ರತಿವರ್ಷವೂ ಕೂಲಿಯಾಳುಗಳ ಮೂಲಕ ಕೆಲಸ ಮಾಡುತ್ತಿದ್ದೆವು. ಈ ಸಲ ಮನೆಯವರೇ ಸೇರಿ ಮಾಡಿದ್ದೇವೆ. ಸಂಬಳ ನೀಡುವ ಹಣ ಸ್ವಲ್ಪ ಉಳಿತಾಯವಾಗಿ’ದೆ ಎಂದು ಕೃಷಿಕರಾದ ಕಡ್ತಲ ಸಿರಿಬೈಲಿನ ಆನಂದ ಆಚಾರ್ಯ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT